ಶಿಕ್ಷಕರು ರಾಷ್ಟ್ರ ನಿರ್ಮಾಪಕರು; ಸೂರ್ಯಕಾಂತ ಅಲ್ಲಾಪುರ
ಚಿಂಚೋಳಿ,ಸೆ.16- ಶಿಕ್ಷಕರು ರಾಷ್ಟ್ರ ನಿರ್ಮಾಪಕರು, ಅವರಿಲ್ಲದೆ ದೇಶ ಮತ್ತು ಸಮಾಜ ಕಟ್ಟುವುದು ಕಷ್ಟ ಸಾಧ್ಯ ಎಂದು ಸಿದ್ದಾರ್ಥ ಬಿ.ಎಡ್.ಮಹಾವಿದ್ಯಾಲಯದ ಪ್ರಾಂಶುಪಾಲರಾದಂತಹ ಸೂರ್ಯಕಾಂತ ಅಲ್ಲಾಪುರ ಅಭಿಪ್ರಾಯ ವ್ಯಕ್ತಪಡಿಸಿದರು.
ಸಿದ್ದಾರ್ಥ ಬಿ.ಎಡ್. ಮಹಾವಿದ್ಯಾಲಯದಲ್ಲಿ ಪ್ರಶಿಕ್ಷಣಾರ್ಥಿಗಳಿಂದ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡು ಮಾತನಾಡಿದ ಅವರು, ಇಂದಿನ ಸಮಾಜದಲ್ಲಿ ಎಲ್ಲ ವೃತ್ತಿಪರರು ಶ್ರೇಷ್ಠರೇ ಮತ್ತು ಎಲ್ಲ ವೃತ್ತಿಪರರ ಸೇವೆಯ ಅಗತ್ಯತೆ ಇದೆ. ಆದರೇ, ಅವರೆಲ್ಲರಿಗಿಂತಲೂ ವಿಶೇಷವಾದ ವೃತ್ತಿ ಎಂದರೇ ಅದುವೇ ಶಿಕ್ಷಕ ವೃತ್ತಿಯಾಗಿದ್ದು, ಒಂದು ಸದೃಢ ಸಮಾಜವನ್ನು ನಿರ್ಮಿಸುವ ತಾಕತ್ತು ಮತ್ತು ಜವಾಬ್ದಾರಿ ಈ ಶಿಕ್ಷಕರ ಸ್ಥಾನಕ್ಕಿದೆ ಎಂದರು.
ಮಾತನಾಡಿದ ಮಹಾವಿದ್ಯಾಲಯದ ಉಪನ್ಯಾಸಕ ಶ್ರೀಮಂತ ಕೇಳಕೆರಿ, ಗುರು ಎಂದರೆ ಕೇವಲ ವ್ಯಕ್ತಿಯಲ್ಲ ಅದೊಂದು ಶಕ್ತಿ. ಆ ಶಕ್ತಿ ತನ್ನಲ್ಲಿರುವ ಜ್ಞಾನದಿಂದ, ವಿದ್ವತ್ತಿನಿಂದ, ಉತ್ತಮ ರೀತಿಯಲ್ಲಿ ಸಮಾಜದಲ್ಲಿನ ಅಂಧಕಾರವನ್ನು ತೊಲಗಿಸಬೇಕು. ರಾಷ್ಟ್ರದ ಭವಿಷ್ಯವನ್ನು ಬೆಳಗುವ ಮಕ್ಕಳು ನಮ್ಮಿಂದ ಏನನ್ನು ಕಲಿಯುತ್ತವೆ, ನಾವು ಏನನ್ನು ಕಲಿಸಬೇಕು ಮತ್ತು ಅದು ರಾಷ್ಟ್ರ ಮತ್ತು ಸಮಾಜದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವಂತಹ ಪ್ರಜ್ಞೆ ಶಿಕ್ಷಕರಿಗಿರಬೇಕು ಎಂದು ಶಿಕ್ಷಕರ ತರಬೇತಿಯನ್ನು ಅಧ್ಯಯನ ಮಾಡುತ್ತಿರುವ ಪ್ರಶಿಕ್ಷಣಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು.
ಇದೆ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಂದ ಶಿಕ್ಷಕರಿಗಾಗಿ ವಿವಿಧ ರೀತಿಯ ಕ್ರೀಡೆಗಳನ್ನು ಸ್ಪರ್ಧೆಗಳನ್ನು ಕೂಡ ಏರ್ಪಡಿಸಲಾಗಿದ್ದು, ಸ್ಪರ್ಧೆಗಳಲ್ಲಿ ವಿಜೇತರಾದಂತಹ ಶಿಕ್ಷಕರಿಗೆ ಬಹುಮಾನವನ್ನು ಕೂಡ ನೀಡಿ ಸತ್ಕರಿಸಲಾಯಿತು. ಪ್ರಶಿಕ್ಷಣಾರ್ಥಿ ಪ್ರವೀಣ ಮೇತ್ರಿ, ದಿವ್ಯ, ವಿಶಾಲ ಬಸವರಾಜ ರೆಡ್ಡಿ ಸೇರಿದಂತೆ ಇನ್ನಿತರರು ಕಾರ್ಯಕ್ರಮದ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶಿವಶರಣಪ್ಪ ಎಲ್ಮಡಗಿ, ಮಲ್ಲಿಕಾರ್ಜುನ ಗೌಡನಹಳ್ಳಿ, ಶ್ರೀಮತಿ ಸುನೀತಾ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಜೀವನ್ ನಿರೂಪಿಸಿದರೆ,ನಿಖಿತಾ ಸ್ವಾಗತಿಸಿದರು,ಅಶ್ವಿನಿ ಪ್ರಾರ್ಥಿಸಿ, ರಾಜಶೇಖರ ವಂದಿಸಿದರು