ಕೇಳುಗರ ಮನ ರಂಜಿಸಿದ ಏಕ್ ಶಾಮ್ ಲತಾಜಿ ಕೆ ನಾಮ್ ಸಂಗೀತ ಕಾರ್ಯಕ್ರಮ
ಬೀದರ್:ಅ.4: ಖ್ಯಾತ ಹಿನ್ನೆಲೆ ಗಾಯಕಿ, ಗಾನಕೋಗಿಲೆ, ಭಾರತರತ್ನ ಲತಾ ಮಂಗೇಶ್ಕರ್ ಅವರ 95ನೇ ಜನ್ಮ ದಿನಾಚರಣೆ ಬೀದರ್ ಸಂಗೀತ ಕಲಾ ಮಂಡಳದಿಂದ ನಗರದ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ನಡೆಯಿತು. ಈ ನಿಮಿತ್ತ ಸಂಘಟಿಸಿದ್ದ “ಏಕ್ ಶಾಮ್ ಲತಾಜಿ ಕೆ ನಾಮ್” ಸಂಗೀತ ಸಂಜೆ ಕೇಳುಗರ ಮನ ತಣಿಸಿತು.
ಸ್ಥಳೀಯ ಕಲಾವಿದರಾದ ಆಬೀದ್ ಅಲಿ ಖಾನ್, ಮಹೇಶ್ವರಿ ಪಾಂಚಾಳ, ಗುರುದೇವ, ಪ್ರಿಯಾಂಕಾ ಗುರುದೇವ, ಶಿವಾನಿ ಸ್ವಾಮಿ ಅವರು ಹಾಡಿದಂತಹ ಹಾಡುಗಳು ಸಭಿಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡವು. ಲತಾ ಮಂಗೇಶ್ಕರ್ ಅವರ ಹಿಟ್ ಹಾಡುಗಳಲ್ಲದೆ ಕಿಶೋರ್‍ಕುಮಾರ್, ಮಹ್ಮದ್ ರಫಿ, ಎಸ್.ಪಿ.ಬಾಲಸುಬ್ರಹ್ಮಣ್ಯಂ ಮುಂತಾದವರ ಹಾಡುಗಳು ಸಹ ಹಾಡಿ ಗಾಯಕರು ಸಭಿಕರಿಗೆ ದಿಲ್ ಖುಷ್ ಮಾಡಿದರು.
ಸಮಧುರ ಕಂಠದ ಮೂಲಕ ಹೆಸರುವಾಸಿಯಾಗಿರುವ ಮಹೇಶ್ವರಿ ಪಾಂಚಾಳ, ಶಿವಾನಿ ಸ್ವಾಮಿ ಹಾಗೂ ಪ್ರಿಯಾಂಕಾ ಗುರುದೇವ ಅವರು ಲತಾ ಅವರ ಹಲವು ಹಾಡುಗಳನ್ನು ಹಾಡಿ ಗಮನ ಸೆಳೆದರು. ಆಬೀದ್ ಅಲಿ ಖಾನ್ ಹಾಡಿದ ಹಾಡುಗಳು ಕಿಶೋರ್, ರಫಿಯನ್ನು ಸ್ಮರಿಸುವಂತೆ ಮಾಡಿತು. ಮೂರು ಗಂಟೆ ನಡೆದ ಕಾರ್ಯಕ್ರಮದಲ್ಲಿ ಸಭಿಕರು ಸಂಗೀತಲೋಕದಲ್ಲಿ ತೇಲಾಡಿದರು.
ಬೀದರ್ ತಹಸೀಲ್ದಾರ್ ಡಿ.ಜಿ.ಮಹತ್ ಅವರು ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ನಿರಂತರ ಸಂಗೀತ, ಸಾಂಸ್ಕøತಿಕ ಕಾರ್ಯಕ್ರಮ ನಡೆಯುವುದು ವಿಶೇಷವಾಗಿದೆ. ಸಂಗೀತ ಕಲಾ ಮಂಡಳ ಇಲ್ಲಿನ ಸಂಗೀತಾಸಕ್ತರ ಮನತಣಿಸುವ ಜೊತೆಗೆ, ಕಲಾವಿದರಿಗೆ ಉತ್ತಮ ವೇದಿಕೆ ಸಹ ಒದಗಿಸುತ್ತಿದೆ ಎಂದು ಬಣ್ಣಿಸಿದರು. ಸ್ವತಃ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಮೂರ್ನಾಲ್ಕು ಹಾಡು ಹಾಡಿದ ಮಹತ್ ಅವರು ಎಲ್ಲರಿಗೂ ರಂಜಿಸಿದರು. ತಮ್ಮ ಸುಶ್ರಾವ್ಯ ಕಂಠದಲ್ಲಿ ಎಸ್‍ಪಿಬಿ ಹಾಡುಗಳನ್ನು ಹಾಡಿ ಮೋಡಿ ಮಾಡಿದರು.
ಬೀದರ್ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಬಿ.ಜಿ.ಶೆಟಕಾರ್ ಮಾತನಾಡಿ, ಸಂಗೀತ ಕಲಾ ಮಂಡಳ ಮುಖಾಂತರ ರಾಜೇಂದ್ರಸಿಂಗ್ ಪವಾರ್ ಅವರು ಜಿಲ್ಲೆಯ ಸಂಗೀತ, ಸಾಂಸ್ಕøತಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ಸಲ್ಲಿಸುತ್ತಿದ್ದಾರೆ. ಲತಾ ಅವರ ಧ್ವನಿಗೆ ತಲೆಬಾಗದವರೇ ಇಲ್ಲ. 50 ಸಾವಿರಕ್ಕೂ ಹೆಚ್ಚು ಹಾಡು ಹಾಡಿದ ಲತಾಜಿ ನೈಜ ಭಾರತರತ್ನ ಎಂದು ಬಣ್ಣಿಸಿದರು.
ಪ್ರಮುಖರಾದ ಡಾ.ರಾಜಶೇಖರ ಪಾಟೀಲ್, ಡಾ.ವಿ.ವಿ.ನಾಗರಾಜ್, ಸದಾನಂದ ಜೋಶಿ, ಮಂಗಲಾ ಭಾಗವತ್, ಟಿ.ಎಸ್.ರಶ್ಮಿ, ವಿಜಯಕುಮಾರ ಸೋನಾರೆ, ರಾಜಕುಮಾರ ಹೆಬ್ಬಾಳೆ, ರಮೇಶ ಗೋಯಲ್, ಎಸ್.ಆರ್.ಸಂಗಮಕರ್ ಇತರರಿದ್ದರು. ಮಹ್ಮದ್ ಗೌಸ್ ನಿರೂಪಣೆ ಮಾಡಿದರು.