ಶಾಂತ ನೀಕೇತನ ಪ್ರೌಢಶಾಲೆ ೧೦ ತರಗತಿ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ
ಸಿರವಾರ.ಮಾಂ೪- ವಿದ್ಯಾರ್ಥಿ ಜೀವನದಲ್ಲಿ ಎಸ್‌ಎಸ್‌ಎಲ್‌ಸಿ ಹಂತ ಪ್ರಮುಖ ಹಂತವಾಗಿದೆ, ವಿದ್ಯಾರ್ಥಿಗಳು ಟಿ.ವಿ, ಮೊಬೈಲ್ ಎಂದು ಕಾಲಹರಣ ಮಾಡದ ಪುಸ್ತಕ ಅಭ್ಯಾಸ ಮಾಡಿದರೆ ಹೆಚ್ಚಿನ ಅಂಕ ಗಳಿಸಬಹುದು ಎಂದು ರಾಯಚೂರಿನ ಪ್ರಥಮ ದರ್ಜೆ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಮಿನ್ಹಾಜ್ ಉಲ್ ಹಸೈನ್ ಕಿವಿ ಮಾತು ಹೇಳಿದರು.ಪಟ್ಡಣದ ಶಾಂತನೀಕೇತನ ಪ್ರೌಢಶಾಲೆಯ ೧೦ ನೇ ತರಗತಿಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ ಬಿಳ್ಕೋಡುಗೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ತಮ್ಮ ಉತ್ತಮ ಭವಿಷ್ಯಕ್ಕಾಗಿ ಚೆನ್ನಾಗಿ ಅಧ್ಯಯನ ಮಾಡಬೇಕು. ಮೂಲ ಹಕ್ಕುಗಳು, ಕರ್ತವ್ಯಗಳನ್ನು ಮರೆಯದೇ ಸತ್ಪ್ರಜೆಗಳಾಗಿ ಹೊರಹೊಮ್ಮಬೇಕು. ಕರಾಟೆ, ಯೋಗದಿಂದ ಆರೋಗ್ಯ, ಏಕಾಗ್ರತೆ, ಧೈರ್ಯ, ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಶಿಲ್ಪಿಗಳಿದ್ದಂತೆ, ಅವರು ತಮ್ಮ ಜ್ಞಾನದ ಹರಿವು ಹೆಚ್ಚಿಸಿಕೊಳ್ಳುವುದರೊಂದಿಗೆ ವಿದ್ಯಾರ್ಥಿಗಳ ಪ್ರಗತಿಗೆ ಶ್ರಮಿಸುತ್ತಿದ್ದಾರೆ ಅವರ ಮತ್ತು ನಿಮ್ಮ ಪಾಲಕರ ಶ್ರಮಕ್ಕೆ ಗೌರವ ಸಿಗಬೇಕಾದರೆ, ನೀವು ಅಧಿಕ ಅಂಕಗಳಿಸಬೇಕು. ದೂರದರ್ಶನ, ಮೊಬೈಲ್‌ಗಳು ಮಕ್ಕಳ ಮನಸ್ಸನ್ನು ಆಕ್ರಮಿಸಿಕೊಂಡಿವೆ. ಅವುಗಳನ್ನು ದಾಟಿ ಯಶಸ್ಸಿಗೆ ವಿದ್ಯಾರ್ಥಿಗಳು ಶ್ರಮಿಸಬೇಕು. ಇದರಲ್ಲಿ ಪೋಷಕರ ಜವಾಬ್ದಾರಿಯೂ ಇದೆ ಎಂದರು. ಶಾರದಾ ಎಜುಕೇಶನ್ ಟ್ರಸ್ಟ್ ಅದ್ಯಕ್ಷ ಬಸವಲಿಂಗಪ್ಪ ಸಾಹುಕಾರ ಅದ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಯು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡುತ್ತ ಬಂದಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಧನೆಗೆ ಅವಿರತ ಶ್ರಮಬೇಕು. ನಮ್ಮ ಶಾಲೆಯ ವಿದ್ಯಾರ್ಥಿಗಳು ಬೇರೆ ಬೇರೆ ಕ್ಷೇತ್ರದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆಂದು ಹೇಳುವುದಕ್ಕೆ ಹೆಮ್ಮೆಯಾಗುತ್ತದೆ. ನೀವು ಅವರಂತೆ ಆಗಿ ಎಂದರು. ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಅನುರಾಧ, ಮುಖ್ಯೋಪಾಧ್ಯಾಯ ಹೆಚ್.ಎಂ.ಬಾಬು ಮತ್ತು ಶಿಕ್ಷಕರು ಮತ್ತು ೧೦ನೇ ಮತ್ತು ೯ ನೇ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.