ಒಣಮೆಣಸಿನಕಾಯಿ ಅಧಿಕ ಆವಕ
ಬ್ಯಾಡಗಿ,ಮಾ5 : ಪಟ್ಟಣದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯನ್ನು ಪಡೆದಿರುವ ಒಣಮೆಣಸಿನಕಾಯಿ ಮಾರುಕಟ್ಟೆಗೆ ಸೋಮವಾರ ಒಂದೇ ದಿನದಲ್ಲಿ 4 ಲಕ್ಷ 8 ಸಾವಿರಕ್ಕೂ ಅಧಿಕ ಮೆಣಸಿನಕಾಯಿ ಚೀಲಗಳು ಆವಕವಾಗಿದ್ದು, ಮಾರುಕಟ್ಟೆ ಇತಿಹಾಸಲ್ಲಿಯೇ ಇದೊಂದು ಐತಿಹಾಸಿಕ
ದಾಖಲೆಯಾಗಿದೆ.
ಪಟ್ಟಣದ ಒಣಮೆಣಸಿನಕಾಯಿ ಮಾರುಕಟ್ಟೆಗೆ ಕಳೆದ ಕೆಲ ವಾರಗಳಿಂದ ಅಧಿಕ ಪ್ರಮಾಣದಲ್ಲಿ ಮೆಣಸಿನಕಾಯಿ ಆವಕವಾಗುತ್ತ ಬರುತ್ತಿದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಮಾರುಕಟ್ಟೆಗೆ ಒಂದೇ ದಿನ ಸುಮಾರು ನಾಲ್ಕು ಲಕ್ಷ ಚೀಲಗಳ ಆವಕವಾಗಿತ್ತು. ಮತ್ತೇ ಕೇವಲ ಮೂರ್ನಾಲ್ಕು ದಿನ ಕಳೆಯುವಷ್ಟರಲ್ಲಿ ದಾಖಲೆಯ ಮಟ್ಟದಲ್ಲಿ ಹೆಚ್ಚಿನ ಮೆಣಸಿನಕಾಯಿ ಮಾರುಕಟ್ಟೆಗೆ ಆವಕವಾಗಿ ಇತಿಹಾಸ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಇದಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಮೆಣಸಿನಕಾಯಿ ಚೀಲಗಳು ಮಾರುಕಟ್ಟೆಗೆ ಬರಬಹುದೆಂದು ಅಂದಾಜಿಸಲಾಗಿದೆ.
ಪ್ರಸಕ್ತ ವರ್ಷ ಐತಿಹಾಸಿಕ ದಾಖಲೆಯ ಪ್ರಮಾಣದಲ್ಲಿ ಮೆಣಸಿನಕಾಯಿ ಬರಲು ಕಾರಣ ಮೆಣಸಿನಕಾಯಿ ಬೆಳೆಯುವ ರೈತರ ಸಂಖ್ಯೆಯಲ್ಲಿ ಏರಿಕೆಯಾಗಿರುವುದು. ಮೆಣಸಿನಕಾಯಿ ಬೆಳೆಯಲ್ಲಿನ ಹೊಸ ಹೊಸ ತಳಿಗಳು ರೈತರಿಗೆ ಪರಿಚಯವಾಗಿದ್ದು, ಮೆಣಸಿನಕಾಯಿ ಬೆಳೆಯಲ್ಲಿ ಹೆಚ್ಚಿನ ಇಳುವರಿಯು ಬರುತ್ತಿರುವುದು ಸಹ ಇದಕ್ಕೆ ಪ್ರಮುಖ ಕಾರಣವಾಗಿದೆ. ಇದು ಕೂಡ ಮಾರುಕಟ್ಟೆಗೆ ಅಧಿಕ ಪ್ರಮಾಣದ ಮೆಣಸಿನಕಾಯಿ ಆವಕಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.
ಪಟ್ಟಣದ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಪಾರದರ್ಶಕತೆ ಮತ್ತು ಇ ಟೆಂಡರ್ ವ್ಯವಸ್ಥೆ ಹೊಂದಿರುವುದರಿಂದ ಮೆಣಸಿನಕಾಯಿ ಮಾರಾಟಕ್ಕೆ ತಂದ ಯಾವುದೇ ರೈತನಿಗೆ ಯಾವುದೇ ವರ್ತಕರಿಂದ ಅನ್ಯಾಯವಾಗದೇ ಇರುವುದು. ಹಾಗೂ ವರ್ತಕರು ಸಹ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಮಾರಾಟಕ್ಕೆ ಬಂದಂತಹ ರೈತರೊಂದಿಗೆ ಆತ್ಮೀಯತೆಯಿಂದ ಮತ್ತು ಸ್ನೇಹದಿಂದ ಬೆರೆಯುವುದು. ಬಹು ಮುಖ್ಯವಾಗಿ ರೈತರಿಗೆ ಯಾವುದೇ ವರ್ತಕರಿಂದ ಮೋಸವಾಗಲು ಸ್ಥಳೀಯ ವರ್ತಕರ ಸಂಘವು ಬಿಡದೇ ಬಿಗಿ ನಿಲುವನ್ನು ಅಳವಡಿಸಿಕೊಂಡಿರುವುದು ಸಹ ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಮೆಣಸಿನಕಾಯಿ ಚೀಲಗಳು ಆವಕವಾಗಲು ಪ್ರಮುಖ ಕಾರಣವಾಗಿದೆ.
ಒಟ್ಟಾರೆ ಪಟ್ಟಣದ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ನಂಬಿಕೆ, ವಿಶ್ವಾಸ ಹಾಗೂ ಪಾರದರ್ಶಕವಾದ ವಾತಾವರಣ ಇರುವುದರಿಂದಾಗಿಯೇ ಸೋಮವಾರ 306 ದಲಾಲರ ಅಂಗಡಿಗಳಲ್ಲಿ 38762 ಲಾಟ್ ಸಂಖ್ಯೆಯಲ್ಲಿ 408609 ಮೆಣಸಿನ ಕಾಯಿ ಚೀಲಗಳು ಆವಕವಾಗಿದ್ದು ಹೊಸ ಇತಿಹಾಸವನ್ನು ಸೃಷ್ಟಿಸಿದೆ.