ಕುಡಿಯುವ ನೀರಿನ ಯೋಜನೆಕೆಲವೇ ದಿನಗಳಲ್ಲಿ ಕಾಮಗಾರಿ ಪ್ರಕ್ರಿಯೆ ಪ್ರಾರಂಭ: ಶಾಸಕ ನೇಮಿರಾಜ್ ನಾಯ್ಕ್
ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಮಾ.05: ಪಟ್ಟಣದ ಕುಡಿಯುವ ನೀರಿನ ಯೋಜನೆಯ ಟೆಂಡರ್ ಪ್ರಕ್ರಿಯ ಮುಗಿದಿದ್ದು ತಾಂತ್ರಿಕ ಸಮಸ್ಯೆಯಿಂದ ತಡವಾಗಿದೆ. ಕೆಲವೇ ದಿನಗಳಲ್ಲಿ ಇಂಜಿನಿಯರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿ ಕಾಮಗಾರಿಯ ಭೂಮಿ ಪೂಜೆ ನಡೆಸಲಾಗುವುದು ಎಂದು ಶಾಸಕ ಕೆ.ನೇಮಿರಾಜ್ ನಾಯ್ಕ್ ತಿಳಿಸಿದರು.
ಅವರು ಪಟ್ಟಣದಲ್ಲಿ  ಜಿಲ್ಲಾ ಖನಿಜಾ ಪ್ರತಿಷ್ಠಾನದ 2021-22ನೇ ಸಾಲಿನ ಅನುದಾನದಲ್ಲಿ 25 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾದ ನೂತನ ಗ್ರಂಥಾಲಯ ಕಟ್ಟಡವನ್ನು ಉದ್ಘಾಟಿಸಿ ಪತ್ರಕರ್ತರೊಂದಿಗೆ ಮಾತನಾಡಿದರು.
ಪ್ರಸ್ತುತ ಪಟ್ಟಣದಲ್ಲಿ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆಯ ಕುರಿತು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಪಟ್ಟಣ ಹಾಗೂ ಪ್ರತಿಯೊಂದು ಹಳ್ಳಿಗಳಲ್ಲಿ ಕುಡಿಯುವ ನೀರಿನ ಬೋರ್ ವೆಲ್ ಗಳನ್ನು ಕೊರೆಸಿ ಜನರಿಗೆ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು. ಅಲ್ಲದೇ ರೈತರ ಪಂಪ್ ಸೆಟ್ ಗಳನ್ನು ಬಾಡಿಗೆ ಪಡೆದು ಪಂಪ್ ಸೆಟ್ ನೀರನ್ನು  ಕುಡಿಯುವ ನೀರಿಗಾಗಿ ಜನರಿಗೆ ತಲುಪುವಂತೆ ಮಾಡಲಾಗುವುದು. ಜೊತೆಗೆ ಹೋಬಳಿ ವ್ಯಾಪ್ತಿಯಲ್ಲಿ 27.30. ಕೋಟಿ ರೂ.ಗಳ ವೆಚ್ಚದ ಚೆಕ್ ಡ್ಯಾಂ ಮತ್ತು ಕೆರೆ ನಿರ್ಮಿಸಲು ಟೆಂಡರ್ ಕರೆಯಲಾಗಿದ್ದು, ಕೆಲ ದಿನಗಳಲ್ಲಿ ಈ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು. ಅಲ್ಲದೇ 100 ಕೋಟಿ ರೂ.ಗಳ ವೆಚ್ಚದಲ್ಲಿ ಕೆ.ಎಮ್.ಅರ್.ಸಿ ಅಡಿಯಲ್ಲಿ  ಸಿ.ಸಿ ರಸ್ತೆಗಳನ್ನು ನಿರ್ಮಿಸಲು ಟೆಂಡರ್ ಕರೆಯಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜೆ.ಇ ತಿಪ್ಪೇಸ್ವಾಮಿ, ಓಬಪ್ಪ, ಉರವಕೊಂಡ ವೆಂಕಟೇಶ, ರಘುವೀರ, ಗುಂಡಾಸ್ವಾಮಿ, ಡಾ.ಈ.ಯರಿಸ್ವಾಮಿ,
ಗರಗ ಪ್ರಕಾಶ್, ಸೂರ್ಯಬಾಬು, ಕಲ್ಲಾಳ್ ಪರಸಪ್ಪ, ಎಲಿಗಾರ ಸಣ್ಣ ಮಂಜುನಾಥ, ನಂದೀಶ್, ಆನೆಮಾಹುತ ರಹೀಮ್, ರಾಜಭಕ್ಷಿ, ಇಮಾಂ, ರಾಘವೇಂದ್ರ ಹಾಗೂ ಇತರರು ಇದ್ದರು.