ಅದ್ದೂರಿಯಾಗಿ ಜರುಗಿದ ಕೊಟ್ಟೂರೇಶ್ವರ ರಥೋತ್ಸವ
ಸಂಜೆವಾಣಿ ವಾರ್ತೆ
ಕೊಟ್ಟೂರು, ಮಾ.05:  ಪಟ್ಟಣದ ಆರಾಧ್ಯ ದೈವ ಪವಾಡ ಪುರುಷ ಎಂದೇ ಪ್ರಖ್ಯಾತವಾಗಿರುವ ಶ್ರೀ ಗುರುಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.
ಸಾಯಂಕಾಲ ಮೂಲನಕ್ಷತ್ರ ಕೂಡಿದ ನಂತರ ಸುಮಾರು 5:20 ಸಮಯಕ್ಕೆ  ರಥವು ತನ್ನಷ್ಟಕ್ಕೆ ತಾನೇ ಸ್ವಲ್ಪ ಮುಂದೆ ಉರುಳುವುದರ ಮೂಲಕ ರಥೋತ್ಸವಕ್ಕೆ ಚಾಲನೆ ದೊರೆಯಿತು.
ಕೊಟ್ಟೂರೇಶ್ವರ ಸ್ವಾಮಿಯ ಮೂರ್ತಿಯನ್ನು ದೇವಸ್ಥಾನದಿಂದ ಪಲ್ಲಕ್ಕಿಯಲ್ಲಿ ಕರೆತರಲಾಯಿತು. ಮೂರ್ತಿಗೆ ದಲಿತ ಮಹಿಳೆಯರು ಆರತಿಯನ್ನು  ಬೆಳಗಿದರು. ಅಲ್ಲಿಂದ  ತೇರು ಬಯಲು ಬಸವೇಶ್ವರ ದೇವಸ್ಥಾನದ ಮುಂಭಾಗದ ರಥದ ಬಳಿ ಸಕಲ ವಾದ್ಯಗಳೊಂದಿಗೆ ಮೂರ್ತಿಯನ್ನು ಕರೆತರಲಾಯಿತು. ರಥದ ಸುತ್ತು ಮೂರು ಪ್ರದರ್ಶಿಸಿದ ನಂತರ ರಥದಲ್ಲಿ ಮೂರ್ತಿಯನ್ನು ಕುಳ್ಳಿರಿಸಿದ ನಂತರ ರಥೋತ್ಸವಕ್ಕೆ ಚಾಲನೆ ದೊರೆಯುತ್ತಿದ್ದಂತೆ, ಅಸಂಖ್ಯಾತ ಭಕ್ತರು ಕೊಟ್ಟೂರೇಶ್ವರ ಸ್ವಾಮಿಯ ಜಯ ಘೋಷಣೆ ಕೂಗಿ ಕಾಯಿ ಮತ್ತು ಬಾಳೆಹಣ್ಣನ್ನು ಎಸೆಯುವುದರ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು.     ರಥವು ಬಯಲು ಬಸವೇಶ್ವರ ದೇವಸ್ಥಾನದ ಮುಂಭಾಗದಿಂದ ಸಾಗಿ ಹ್ಯಾಳ್ಯಾ ರಸ್ತೆಯಲ್ಲಿರುವ ಬನ್ನಿ ಮರದವರೆಗೆ ಸಾಗಿ, ನಂತರ ಪುನಃ ಕೊಟ್ಟೂರೇಶ್ವರ ಸ್ವಾಮಿಯ ತೇರು ಮನೆಯ ಹತ್ತಿರ ಬಂದು ಸೇರಿತು.
ಸಕಲ ವಾದ್ಯಗಳೊಂದಿಗಳ ಶಬ್ಧದ ನಾದಕ್ಕೆ ಭಕ್ತಾದಿಗಳು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಧರ್ಮಕರ್ತರಾರ ಸಿ ಎಚ್ ಎಂ ಗಂಗಾಧರ್, ಇಒ ಕೃಷ್ಣಪ್ಪ, ಸಂಸದ ದೇವೇಂದ್ರಪ್ಪ ಇನ್ನು ಮುಂತಾದವರು ಭಾಗವಹಿಸಿದ್ದರು.
ಕೊಟ್ಟೂರೇಶ್ವರ  ಸ್ವಾಮಿಯ ರಥವು 30 ನಿಮಿಷಗಳ ಕಾಲ ತಡವಾಗಿ ಜರುಗಿತು. ತೇರಿನ ಗಾಲಿಯು ಕೆಸರಿನಲ್ಲಿ ಸಿಕ್ಕಿಕೊಂಡಿದ್ದರಿಂದ ಮಿಣಿ(ಹಗ್ಗ)ಯೂ ಭಕ್ತಾದಿಗಳ ಎಳೆತಕ್ಕೆ ಹರಿದು ಹೋಗಿತ್ತು, ನಂತರ ಹೊಸ ಹಗ್ಗವನ್ನು ಹಾಕಿ ಎಳೆದಾಗ ಸರಾಗವಾಗಿ ರಥ ಮುಂದೆ ಸಾಗಿತು.