ಡಿ.ಸಿ. ಆದೇಶ ಉಲ್ಲಂಘನೆ ಭೀಮಾನಾಯ್ಕ ಫ್ಲೆಕ್ಸ್ ತೆರವು
ಸಂಜೆವಾಣಿ ವಾರ್ತೆ
ಕೊಟ್ಟೂರು, ಮಾ.05: ಮಾಜಿ ಶಾಸಕ, ಹಾಲಿ ಕೆ.ಎಂ.ಎಫ್ ಅಧ್ಯಕ್ಷ ಭೀಮನಾಯ್ಕ ಮತ್ತವರ ಬೆಂಬಲಿಗರು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಶುಭಕೋರಿ ಕಟ್ಟಿದ್ದ ಫ್ಲೆಕ್ಸ್ ಪಪಂ ಆಡಳಿತ ಭಾನುವಾರ ತೆರವುಗೊಳಿಸಲಾಯಿತು.
ಜಿಲ್ಲಾಧಿಕಾರಿ ದಿವಾಕರ ನೇತೃತ್ವದಲ್ಲಿ ನಡೆದ ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವದ ಪೂರ್ವಭಾವಿ ಸಭೆಯಲ್ಲಿ ಭಕ್ತಾಧಿಗಳ ಹಿತದೃಷ್ಟಿಯಿಂದ ರಥೋತ್ಸವಕ್ಕೆ ಶುಭಕೋರಿ ಫ್ಲಕ್ಸ್, ಬ್ಯಾನರ್, ಬಂಟಿಂಗ್ಸ್ ಕಟ್ಟುವಂತ್ತಿಲ್ಲ ಎಂದು ಸಭೆಯಲ್ಲಿ ನಿರ್ಧರಿಸಲಾಗಿತ್ತು.
ಈ ಆದೇಶವನ್ನು ಚಾಚು ತಪ್ಪದೆ ಪಾಲಿಸುವಂತೆ ಕೊಟ್ಟೂರು ಪಪಂ ಆಡಳಿತ ಪ್ರಚಾರವನ್ನು ಮಾಡಿತ್ತು. ಇದು ಮಾಧ್ಯಮಗಳಲ್ಲಿ ಪ್ರಚಾರವೂ ಆಗಿತ್ತು. ಆದ್ದರಿಂದ ಪಟ್ಟಣದಲ್ಲಿ ರಥೋತ್ಸವಕ್ಕೆ ರಾಜಕಾರಣಿಗಳು, ಸಮಾಜಸೇವಕರು, ಭಕ್ತರು ಯಾರೂ ಸಹಾ ಶುಭಕೋರಿ ಪ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಕಟ್ಟಿರಲಿಲ್ಲ.
ಈ ಎಲ್ಲಾ ಆದೇಶ ಮತ್ತು ಎಚ್ಚರಿಕೆಯನ್ನು ಉಲ್ಲಂಘಿಸಿ ಮಾಜಿ ಶಾಸಕ ಹಾಗೂ ರಾಜ್ಯ ಕೆ.ಎಂ.ಎಫ್. ಅಧ್ಯಕ್ಷ ಭೀಮ ನಾಯ್ಕ್ ಮತ್ತವರ ಬೆಂಬಲಿಗರು ಪಟ್ಟಣದ ಎಪಿಎಂಸಿ ಹತ್ತಿರ ಫ್ಲಕ್ಸ್ ಕಟ್ಟಿದ್ದರು. ಇದನ್ನು ತೆರವುಗೊಳಿಸುವಂತೆ, ತೆರವುಗೊಳಿಸುವುದಿಲ್ಲವೆಂದು ಹಾಲಿ ಶಾಸಕ ನೇಮಿರಾಜ್ ನಾಯ್ಕ, ಮಾಜಿ ಶಾಸಕ ಭೀಮನಾಯ್ಕ ಬೆಂಬಗರ ನಡುವೆ ಬಿರುಸಿನ ರಾಜಕೀಯ ಆರಂಭವಾಯಿತು.
ಈ ಕುರಿತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಸರುಲ್ಲಾ ನೇತೃತ್ವದಲ್ಲಿ ಸಭೆ ನಡೆದು, ಪಪಂ ಕೆಲ ಸದಸ್ಯರು ವರ್ಷಕ್ಕೊಮ್ಮೆ ನಡೆಯುವ ಭವ್ಯ ರಥೋತ್ಸವದಲ್ಲಿ ಭಕ್ತರಿಗೆ ಶುಭಕೋರಿ ಫ್ಲಕ್ಸ್ ಕಟ್ಟಿದ್ದೇವೆ. ಇದರಲ್ಲೇನು ರಾಜಕೀಯವಿಲ್ಲ. ಬೇರೆಯವರು ರಥೋತ್ಸವದ ಸ್ಥಳದಲ್ಲಿ ಬಿಟ್ಟು ಬೇರೆ ಕಡೆ ಕಟ್ಟಬಹುದಲ್ಲ ಎಂಬ ವಾದ ಪ್ರತಿವಾದ ಮಂಡಿಸಿದರು.
ಈ ವಿಷಯ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳ ಗಮಕ್ಕೂ ಹೋಗಿ, ಹಾಲಿ ಶಾಸಕ ನೇಮಿರಾಜ್ ಮತ್ತು ಮತ್ತವರ ಬೆಂಬಲಿಗರು ಪಪಂ ಮುಖ್ಯಾಧಿಕಾರಿಗೆ ಒತ್ತಡ ತಂದು ತಕ್ಷಣವೇ ಭೀಮನಾಯ್ಕ ಮತ್ತವರ ಬೆಂಬಲಿಗರು ಇರುವ ಫ್ಲೆಕ್ಸ್ ತೆರವುಗೊಳಿಸುವಂತೆ ಒತ್ತಡ ಹೇರತೊಡಗಿದರು.
ಭೀಮನಾಯ್ಕ ಮತ್ತವರ ಬೆಂಗಲಿಗರು ರಾಜ್ಯದಲ್ಲಿ ನಮ್ಮದೇ ಪಕ್ಷ ಆಡಳಿತವಿದೆ. ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ಪಕ್ಷದವರೆ, ಅದೆಲ್ಲಕ್ಕಿಂತ ಮುಖ್ಯವಾಗಿ ಮುಖ್ಯಮಂತ್ರಿಗೆ ಭೀಮ ನಾಯ್ಕ್ ತೀರ ಆಪ್ತ ಆದ್ದರಿಂದ ಫ್ಲೆಕ್ಸ್ ತೆರವುಗೊಳಿಸದಿರುವಂತೆ ಪಪಂ ಆಡಳಿತಾಧಿಕಾರಿ ಗೆ ಒತ್ತಡ ಹೇರಿದ್ದರು.
   ಜಿಲ್ಲಾಧಿಕಾರಿ ದಿವಾಕರ ಆದೇಶದಂತೆ ಕೊನೆಗೂ ಭೀಮನಾಯ್ಕ ಮತ್ತವರ ಬೆಂಬಲಿಗರಿದ್ದ ಫ್ಲೆಕ್ಸ್ ನ್ನು ಕೊನೆಗೂ ಪಪಂ ಆಡಳಿತ ತೆರವುಗೊಳಿಸಿತು. ಡಿ.ಸಿ. ಆದೇಶ ಉಲ್ಲಂಘಿಸಿ ಭೀಮನಾಯ್ಕ ಫ್ಲೆಕ್ಸ್ ಕಟ್ಟಿದ್ದು ಸೂಕ್ತವಲ್ಲವೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದ್ದು, ಹಾಲಿ ಶಾಸಕ ನೇಮಿರಾಜ್ ಮತ್ತವರ ಬೆಂಬಲಿಗರು ಫ್ಲೆಕ್ಸ್, ಬಂಟಿಂಗ್ಸ್ ಕಟ್ಟದಿರುವ ಬಗ್ಗೆ ಸಾರ್ವಜನಿಕರಿಂದ ಮೆಚ್ಚಿಗೆಯೂ ವ್ಯಕ್ತವಾಗಿದೆ.