ದೇವರು ಕೊಟ್ಟ ಅವಕಾಶವನ್ನು ಕೈ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ
ಸಂಜೆವಾಣಿ ವಾರ್ತೆ
ಸಾಲಿಗ್ರಾಮ: ಮಾ.05:- ಕೆಲವರಿಂದ ಅಧಿಕಾರ ಕೈ ತಪ್ಪಿರ ಬಹುದು ಆದರೆ ದೇವರು ಕೊಟ್ಟ ಅವಕಾಶವನ್ನು ಕೈ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಚುಂಚನಕಟ್ಟೆ ಸಮೀಪದ ಕೆಸ್ತೂರು ಕೊಪ್ಪಲು ಗ್ರಾಮದ ತೋಟದ ಮನೆಯಲ್ಲಿ ಕಾಂಗ್ರೆಸ್ ಮುಂಖಂಡರು ಹಾಗೂ ಕಾರ್ಯಕರ್ತರು ಸರಳವಾಗಿ ಹಮ್ಮಿಕೊಂಡಿದ್ದ ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮಿಗೌಡ ಹಾಗೂ ಅವರ ಪತ್ನಿ ವನಜಾಕ್ಷಮ್ಮ ಅವರ 52 ನೇ ವಿವಾಹ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ಕುಟುಂಬ ರಾಜಕೀಯ ಕ್ಷೇತ್ರಕ್ಕೆ ಬಂದ ದಿನದಿಂದ ಸೋಲು-ಗೆಲುವು, ಕಷ್ಟ-ಸುಖಗಳನ್ನು ಖಂಡಿದ್ದೇವೆ ಆದರೂ ಸಾರ್ವಜನಿಕ ವಲಯದಲ್ಲಿ ಹಲವು ರೀತಿಯ ವೈಯಕ್ತಿಕ ಸೇವೆಗಳನ್ನು ತಾಲೂಕಿನ ಜನತೆಗೆ ಮಾಡಿಕೊಂಡು ಬಂದಿರುವ ನಮಗೆ ರಾಜಕೀಯವಾಗಿ ಶಕ್ತಿ, ಯಾವುದೇ ಅಧಿಕಾರ ಇಲ್ಲದಂತಹ ಸಮಯದಲ್ಲಿಯೂ ಕೂಡ ನಮಗೆ ಆಶ್ರಯ ಕೊಟ್ಟು ಬೆನ್ನಿಗೆ ನಿಂತವರು ಇಂದು ನಮಗೆ ರಾಜಕೀಯವಾಗಿ ಶಕ್ತಿ ಹಾಗೂ ಅಧಿಕಾರ ಕೊಟ್ಟಿರುವ ಈ ತಾಲೂಕಿನ ಜನತೆಗೆ ನಾನು ಮತ್ತು ನಮ್ಮ ಕುಟುಂಬ ಸದಾ ಆಸರೆಯಾಗಿರುತ್ತೇವೆ ಎಂದು ಭರವಸೆ ನೀಡಿದರು.
ಜೀವನದಲ್ಲಿ ದ್ವೇಷ, ಸ್ವಾರ್ಥ, ಅಸೂಹೆಯಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ, ಪ್ರೀತಿ, ವಿಶ್ವಾಸ, ನಂಬಿಕೆ, ನಿಸ್ವಾರ್ಥ ಮನಸ್ಸಿದ್ದರೆ ಇದ್ದರೆ ಮಾತ್ರ ಸಾರ್ವಜನಿಕ ಕ್ಷೇತ್ರದಲ್ಲಿ ಶಾಶ್ವತವಾಗಿ ಬದುಕಲು ಸಾಧ್ಯ. ಈ ತಾಲೂಕಿನ ಶಾಸಕನಾಗಿ ಸಂಪಾದನೆ ಮಾಡಬೇಕೆಂಬ ಕೆಟ್ಟ ಅಲೋಚನೆಯಾಗಲಿ, ದುರಾಸೆಯ ಮನಸ್ಥಿತಿಯಲ್ಲಿ ಜನ ಸೇವೆ, ರಾಜಕೀಯ ಮಾಡಿಕೊಂಡು ಬಂದಿಲ್ಲ. ಅಂದು ಅಧಿಕಾರ ಇಲ್ಲದಿರುವಾಗ ಇದ್ದ ಸಾರ್ವಜನಿಕ ವರ್ತನೆ. ಇಂದು ಅಧಿಕಾರ ಇರುವಾಗ ನಮ್ಮ ಸಾರ್ವಜನಿಕ ಬದುಕಿನ ನಡೆ ನುಡಿಯಲ್ಲಿ ಯಾವುದೇ ಬದಲಾವಣೆ ಇಲ್ಲ, ನಮ್ಮ ಕುಟುಂಬ ನಮ್ಮ ಬದುಕು ಕಟ್ಟಿಕೊಳ್ಳಲು ಈ ರಾಜಕೀಯ ಕ್ಷೇತ್ರಕ್ಕೆ ಬಂದಿಲ್ಲ, ಬಡವರ ಬದುಕು ಕಟ್ಟಿಕೊಡಲು ನಂಬಿದವರ ಜನರಿಗೆ ಕೈಲಾದ ಸಹಾಯ ಮಾಡಿ ಕೊಡಲು ಸಾರ್ವಜನಿಕ ಕ್ಷೇತ್ರಕ್ಕೆ ಬಂದಿದ್ದೇವೆ ಎಂದು ಹೇಳಿದರು.
ವಿವಾಹ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮಿಗೌಡ ಹಾಗೂ ಅವರ ಪತ್ನಿ ವನಜಾಕ್ಷಮ್ಮ ಅವರಿಗೆ ಮುಖಂಡರು ಹಾಗೂ ಕಾರ್ಯಕರ್ತರು ಸನ್ಮಾನಿಸಿ ಸಿಹಿ ವಿತರಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ತಾ.ಪಂ.ಮಾ. ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ರಾಜ್ಯ ಕಾಂಗ್ರೆಸ್ ಎಸ್.ಟಿ ಘಟಕದ ಉಪಾಧ್ಯಕ್ಷ ಕಲ್ಲಹಳ್ಳಿ ಶ್ರೀನಿವಾಸ್. ತಾಲೂಕು ಎಸ್. ಟಿ ಘಟಕದ ಅಧ್ಯಕ್ಷ ತಿಪ್ಪೂರು ಮಹದೇವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್ ಶಂಕರ್, ಮಹದೇವ್, ಮುಂಜನಹಳ್ಳಿ ಮಹದೇವ್, ಡೇರಿ ಮಾದು, ರಮೇಶ್, ಅಡ್ಡು, ಸಂಘಟನೆ ಮಂಜುನಾಥ್, ರಘು, ಚಲುವ, ಗೋವಿಂದ್, ಸಂತೋಷ್, ಪ್ರೀತಮ್, ಆಪ್ತ ಸಹಾಯಕ ನವೀನ್, ಪುನೀತ್ ಸೇರಿದಂತೆ ಕಾರ್ಯಕರ್ತರು ಹಾಗೂ ಮುಖಂಡರು ಇದ್ದರು.