ಆಳುವವರಿಗಾಗಿ ಅಲ್ಲ ಅಳುವವರಿಗಾಗಿ ಸಾಹಿತ್ಯ ರಚಿಸಬೇಕು : ತರಿಕೆರೆ
ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.05: ಹಿಂದಿನ ಕಾಲದಲ್ಲಿ ಆಳರಸರಿಗಾಗಿ ಆಸ್ತಾನ ಕವಿಗಳು ಸಾಹಿತ್ಯವನ್ನು ಬರೆದು ಅವರನ್ನು ಮೆಚ್ಚಿಸುತ್ತಿದ್ದರು, ಈಗಲೂ ಅದೇ ಪದ್ದತಿ ಚಾಲ್ತಿಯಲ್ಲಿದೆ, ಆಗ ರಾಜರನ್ನು ಮೆಚ್ಚಿಸುತ್ತಿದ್ದರು, ಈಗ ರಾಜಕಾರಣಿಗಳನ್ನು ಮೆಚ್ಚಿಸಲು ಬರೆಯುತ್ತಿದ್ದಾರೆ, ಇದು ನಿಲ್ಲಬೇಕು, ಸಮಾಜದಲ್ಲಿ ಬಡವರ, ಮಹಿಳೆಯರ ಅಶಕ್ತರ ಪರವಾಗಿ ಸಾಹಿತ್ಯ ರಚನೆಯಾಗಬೇಕು ಆಗ ನುಡಿ ಮಾತು ಆಶಯ ಸಾರ್ಥಕವಾಗುತ್ತದೆ ಎಂದು ಹಂಪಿ ವಿಶ್ವ ವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ರೆಹಮತ್ ತರಿಕೆರೆ ಅಭಿಪ್ರಾಯಪಟ್ಟರು.
ಅವರು ನಗರದ ತಾಳೂರು ರಸ್ತೆಯ ನುಡಿ ಕೆಫೆಯಲ್ಲಿ ನುಡಿ ಮಾತು ಕನ್ನಡ ಮಾತು ತಲೆ ಎತ್ತುವ ಬಗೆ ವಿನೂತನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ತಲೆ ಎತ್ತಬೇಕಾದಲ್ಲಿ ಎಲ್ಲೋ ಒಂದು ಕಡೆ ತೆಲೆ ತಗ್ಗಿಸಿರಬೇಕು, ಭಾಷೆಯನ್ನು ಬಳಸುವಾಗ ಜನ ಸಾಮಾನ್ಯರಿಗೆ ಅರ್ಥವಾಗುವಂತೆ ಮನೋರಮಾಳ ಅಭಿಲಾಷೆಯಂತೆ ಬಳಸಬೇಕೆ ಹೊರತು ರಾಜಭಾಷೆಯಲ್ಲಿ ಅಲ್ಲ ಆಗ ಮಾತ್ರ ಕನ್ನಡ ಭಾಷೆ ತಲೆ ಎತ್ತಿ ನಿಲ್ಲುವಲ್ಲಿ ಯಶಸ್ವಿಯಾಗಲಿದೆ, ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿ ಸಂದಿರಬಹುದು ಅದು ಭಾಷೆ ಬೆಳವಣಿಗೆಗೆ ಮಾನದಂಡವಾಗುವುದಿಲ್ಲ, ಪರಭಾಷೆಗಳ ಜೊತೆಯಾಗಿ ಅದನ್ನು ಮೀರಿ ಕನ್ನಡ ಭಾಷೆ ಬೆಳೆಯಬೇಕಾಗಿದೆ, ಪೂರ್ಣಚಂದ್ರ ತೇಜಸ್ವಿಯಂತೆ ಪರಿಸರದ ಜೊತೆಗೆ, ನಾಗೇಶ್ ಹೆಗಡೆಯಂತೆ ವಿಜ್ಞಾನದ ಜೊತೆಗೆ ಸಮೀಕರಣಗೊಳ್ಳಬೇಕು ಆಗ ಮಾತ್ರ ಗಟ್ಟಿಯಾಗಿ ನಿಲ್ಲಲು ಸಹಕಾರಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ದಂತವೈದ್ಯರಾದ ಡಾ.ಮಂಜುನಾಥ್, ಪ್ರೊಫೆಸರ್ ವೆಂಕಟಗಿರಿ ದಳವಾಯಿ, ಅಹಿರಾಜ್, ಮೇದಾ ಕಾಲೇಜಿನ ಸುಮಾ, ಈ.ಜಿ. ರೆಡ್ಡಿ, ದಸ್ತಗಿರಿಸಾಬ್ ದಿನ್ನಿ, ವಿ ಬಿ ಮಲ್ಲಪ್ಪ, ವೀರೇಂದ್ರ ರಾವಿಹಾಳ್, ಖಲಂದರ್, ಚಾಂದ್‍ಭಾಷಾ, ಜೆ.ಕ.ರ.ವೇ ಶ್ಯಾಮ್ ಸುಂದರ್, ದೇವರೆಡ್ಡಿ ಸೇರಿದಂತೆ ಹಲವಾರು ಜನರಿದ್ದರು.  ನುಡಿ ಕೆಫೆಯ ಹಂದ್ಯಾಳ್ ಶಿವಲಿಂಗಪ್ಪ ಪ್ರಸ್ತಾವಿಕವಾಗಿ ಮಾತನಾಡಿದರು.