ಅವ್ಯವಸ್ಥೆಯ ಆಗರ ಈ ವಸತಿ ಶಾಲೆ
ಕುಂದಗೋಳ ಮಾ. 5 : ಮಕ್ಕಳು ವ್ಯವಸ್ಥಿತವಾಗಿ ಶಿಕ್ಷಣ ಕಲಿಯಲೆಂದು ಸರ್ಕಾರ ವಸತಿ ಶಾಲೆಗಳನ್ನು ತೆರೆದಿದ್ದು, ಅವುಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬುದಕ್ಕೆ ಕುಂದಗೋಳ ತಾಲೂಕಿನ ಮತ್ತಿಗಟ್ಟಿ ಮುರಾರ್ಜಿ ದೇಸಾಯಿ ಶಾಲೆಯ ದು:ಸ್ಥಿತಿಯೆ ಸಾಕ್ಷಿ!
ಹೌದು, ವಸತಿ ಶಾಲಾವರಣ ಪ್ರವೇಶಿಸುತ್ತಿದ್ದಂತೆ ಅವ್ಯವಸ್ಥೆಯ ವಸತಿ ಕಟ್ಟಡ ಸ್ವಾಗತಿಸುತ್ತದೆ. ಜೀರ್ಣೋದ್ಧಾರ ಕ್ಕೆ ಸಜ್ಜಾದ, ಕಳೆದ 15 ವರ್ಷಗಳಿಂದ ಸುಣ್ಣ ಬಣ್ಣ ಕಾಣದೆ, ಕಿಟಕಿಗಳು ತುಕ್ಕು ಹಿಡಿದಿದ್ದು ಭೂತ ಬಂಗಲೆಯಂತೆ ಭಾಸವಾಗುವ ಈ ವಸತಿ ಶಾಲೆಯಲ್ಲಿ ಮಕ್ಕಳು ಅದೇಗೆ ಶಿಕ್ಷಣ ಕಲಿಯಬೇಕು?
ಮುರಿದ ಬಾಗಿಲಿನ ಕದ, ಜೋತು ಬಿದ್ದ ವಿದ್ಯುತ್ ವೈರ್, ಸಮರ್ಪಕ ವಿಲ್ಲದ ಬೆಂಚು-ಹಾಸಿಗೆಗಳು, ಗೀಚು ಬಿದ್ದು ವರ್ಷಗಟ್ಟಲೆ ಬಣ್ಣಕ್ಕಾಗಿ ಹಾತೊರೆಯುತ್ತಿರುವ ಗೋಡೆಗಳು. ಅಲ್ಲಲ್ಲಿ ಒಡೆದು ಹಾಳಾದ ಕಟ್ಟಡಗಳು. ಮಕ್ಕಳ ಕಲಿಕೆಗೆ ಸೂಕ್ತವಾಗಬಹುದೆ? ಎಂಬ ಪ್ರಶ್ನೆ ಎದುರಾಗುತ್ತದೆ.
ಮಕ್ಕಳೇ ಹೇಳುವಂತೆ ಕೊಠಡಿಯಲ್ಲಿ ಅನೇಕ ಬಾರಿ ಬೆಕ್ಕು, ನಾಯಿಗಳು ಬಂದು ಮಲಗಿದ್ದುಂಟು. ಇನ್ನು ಸೊಳ್ಳೆಗಳ ಕಾಟವಂತೂ ಹೇಳತೀರದು. ಒಂದು ಮಂಚದಲ್ಲಿ ಓರ್ವ ವಿದ್ಯಾರ್ಥಿ ಮಲಗುವ ಬದಲು, ಇಬ್ಬರಿಗೊಂದರಂತೆ ಹಂಚಿಕೆ ಮಾಡಿದರೂ ಅನೇಕ ಮಕ್ಕಳು ನೆಲದ ಮೇಲೆಯೇ ಮಲಗುವ ದು:ಸ್ಥಿತಿ ಕಂಡು ಪಾಲಕರ ಮನ ಮರಗದಿರುವದೆ?
ಕಳೆದ 4-5 ತಿಂಗಳಿಂದ ಮಕ್ಕಳಿಗೆ ಬರಬೇಕಾದ ಸಾಬೂನು, ಪೇಸ್ಟ್, ಬ್ರಶ್ ಸೇರಿದಂತೆ ಹಲವಾರು ವಸ್ತುಗಳ ಕಿಟ್ ಬಂದಿಲ್ಲ, ಕುಡಿಯಲು ನೀಡುವ ಮಜ್ಜಿಗೆ-ಚಹ ನೀರು ನೀರಾಗಿರುತ್ತದೆ. ಚನ್ನಾಗಿ ಬೇಯಿಸಲಾರದ ಚಪಾತಿ, ಮತ್ತೆ ಬೇಕೆಂದರೂ ನೀಡಲಾಗದು. ಅನೇಕ ಬಾರಿ ಊಟದಲ್ಲಿ ಕಡ್ಡಿ, ಕೂದಲು ಕಂಡು ಬಂದಿದ್ದು ಮಕ್ಕಳಿಗೆ ಊಟೋಪಚಾರ ಹಿಡಿಸೀತೆ?
ಬಡಮಕ್ಕಳಿಗೆ ಪೂರಕ ಶಿಕ್ಷಣ ನೀಡಲು ಸರ್ಕಾರಗಳು ಅನೇಕ ಯೋಜನೆ, ವ್ಯವಸ್ಥೆ ಕೈಗೊಳ್ಳುತ್ತಿದ್ದರೂ ವಸತಿ ನಿಲಯಗಳ ನಿರ್ವಹಣೆಗೆ ನಿರ್ಲಕ್ಷ್ಯ ವಹಿಸಿರುವುದು ಮತ್ತಿಗಟ್ಟಿ ಮುರಾರ್ಜಿ ವಸತಿ ಶಾಲಾ ಮಕ್ಕಳ ದುರ್ದೈವವೇ ಸರಿ.