ಮಹಿಳಾ ವಸತಿ ನಿಲಯ ಲೋಕಾರ್ಪಣೆಗೊಳಿಸಿದ ಪ್ರತಾಪಸಿಂಹ
ಸಂಜೆವಾಣಿ ನ್ಯೂಸ್
ಮೈಸೂರು: ಮಾ.05:- ಮಹಿಳಾ ಅಂಚೆ ನೌಕರರಿಗೆ ತರಬೇತಿ ನೀಡುವ ಸಲುವಾಗಿ ನಜರ್‍ಬಾದ್‍ನಲ್ಲಿರುವ ಅಂಚೆ ತರಬೇತಿ ಕೇಂದ್ರ(ಪಿಟಿಸಿ)ದ ಆವರಣದಲ್ಲಿ 4.28 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಮಹಿಳಾ ವಸತಿನಿಲಯ ಹಂಸ ಕಟ್ಟಡ ಸಂಕೀರ್ಣವನ್ನು ಸಂಸದ ಪ್ರತಾಪ ಸಿಂಹ ಸೋಮವಾರ ಉದ್ಘಾಟಿಸಿದರು.
ದಕ್ಷಿಣ ಭಾರತದ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡು ರಾಜ್ಯಗಳಿಂದ ತರಬೇತಿಗೆ ಬರುವ ಮಹಿಳಾ ಪ್ರಶಿಕ್ಷಣಾರ್ಥಿಗಳಿಗೆ ವಾಸ್ತವ್ಯ ಕಲ್ಪಿಸಿ ತರಬೇತಿ ನೀಡಲು 2018ರ ನ.30ರಂದು ಸಚಿವ ಮನೋಜ್ ಸಿಂಹ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಇದೀಗ ಕಟ್ಟಡ ನಿರ್ಮಾಣ ಪೂರ್ಣಗೊಂಡಿದ್ದು, ಸಂಸದ ಪ್ರತಾಪಸಿಂಹ ಉದ್ಘಾಟಿಸಿದರು. ಇಲ್ಲಿ ಕೇವಲ ವಾಸ್ತವ್ಯ ಮಾತ್ರವಲ್ಲದೆ ಪಠ್ಯ ಕಲಿಕೆಯೊಂದಿಗೆ ವ್ಯಕ್ತಿತ್ವ ವಿಕಸನಕ್ಕೂ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ನೂತನ ಕಟ್ಟದ ಅತ್ಯಾಧುನಿಕವಾಗಿದ್ದು, ಸೂಕ್ತ ಭದ್ರತೆ ವ್ಯವಸ್ಥೆಯನ್ನೊಳಗೊಂಡಿದೆ.
ಮೊದಲ ಮಹಿಳಾ ವಸತಿ ಸಂಕೀರ್ಣ: ನೂತನ ಕಟ್ಟಡದಲ್ಲಿ 36 ಕೊಠಡಿಗಳಿದ್ದು, ಏಕಕಾಲಕ್ಕೆ 100 ಮಹಿಳೆಯರಿಗೆ ವಾಸ್ತವ್ಯ ಕಲ್ಪಿಸಬಹುದು. ಅಂಚೆ ಇಲಾಖೆ ಮೈಸೂರು ಸೇರಿದಂತೆ ದೇಶದ ಆರು ಕಡೆಗಳಲ್ಲಿ ಪಿಟಿಸಿಗಳನ್ನು ಹೊಂದಿದ್ದು, ಅವುಗಳಲ್ಲಿ ದೇಶದ ಮೊಟ್ಟ ಮೊದಲ ಮಹಿಳಾ ವಸತಿ ಸಂಕೀರ್ಣ ಇದಾಗಿದೆ. ಸೌರವಿದ್ಯುತ್ ಬಳಕೆ, ಜೈವಿಕ ಪದಾರ್ಥಗಳ ಮರುಬಳಕೆಗೂ ಆದ್ಯತೆ ನೀಡಲಾಗಿದೆ. 906 ಚ.ಮೀ. ವಿಸ್ತೀರ್ಣ ಹೊಂದಿದೆ.
ಬಳಿಕ ಮಾತನಾಡಿದ ಪ್ರತಾಪ ಸಿಂಹ, ನಾಲ್ಕೈದು ದಿನಗಳಲ್ಲಿ ಲೋಕಸಭಾ ಚುನಾವಣೆಯ ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದೆ. ಹೀಗಾಗಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ದೇಶಕ್ಕೆ ಸಮರ್ಪಿಸುತ್ತಿದ್ದೇವೆ ಎಂದು ತಿಳಿಸಿದರು.
ನಾನು ಸಂಸದನಾಗುವ ಮುನ್ನ ಮೈಸೂರಿಗೆ ಸಮರ್ಪಕ ಸಂಪರ್ಕದ ಕೊರತೆ ಇತ್ತು. ಇದರಿಂದಾಗಿ ಕೈಗಾರಿಕೆಗಳು ಬರುವುದಕ್ಕೆ ತೊಡಕಾಗಿತ್ತು. ಹೀಗಾಗಿ ನಾನು ಹೆದ್ದಾರಿ ರೈಲು ಹಾಗೂ ವಿಮಾನ ಸಂಪರ್ಕ ವ್ಯವಸ್ಥೆ ವೃದ್ಧಿಗೆ ಆದ್ಯತೆ ನೀಡಿದ್ದೇನೆ ಎಂದು ತಿಳಿಸಿದರು.
ಹಿಂದಿದ್ದ ಸಂಸದರು 2004ರಿಂದ 2014ರವರೆಗೆ ಒಂದೇ ಒಂದು ಹೊಸ ರೈಲನ್ನೂ ತಂದಿರಲಿಲ್ಲ. ನಾನು ಹಲವು ರೈಲುಗಳ ಸಂಪರ್ಕ ಕಲ್ಪಿಸಿದ್ದೇನೆ. ವಿಮಾನ ನಿಲ್ದಾಣದ ರನ್‍ವೇ ವಿಸ್ತರಣೆಗೂ ಕ್ರಮ ಕೈಗೊಳ್ಳಲಾಗಿದೆ. ಅದನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಮೇಲ್ದರ್ಜೆಗೆ ಏರಿಸಲಾಗುವುದು. ಮೈಸೂರು ಈಗ ದೊಡ್ಡ ಮಟ್ಟದ ಆಭಿವೃದ್ಧಿಗೆ ಸಜ್ಜಾಗಿದೆ. ಹಲವು ಕಂಪನಿಗಳು ಬರಲಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಂಚೆ ಸೇವೆಗಳ ದಕ್ಷಿಣ ಕರ್ನಾಟಕ ವಲಯದ ನಿರ್ದೇಶಕ ಟಿ.ಎಸ್.ಅಶ್ವತ್ಥನಾರಾಯಣ, ಪಿಟಿಸಿ ನಿರ್ದೇಶಕ ಆಶಿಶ್ ಸಿಂಗ್ ಠಾಕೂರ್, ಉಪ ನಿರ್ದೇಶಕ ಕೆ.ವಿ.ಎಲ್.ಎನ್.ಮೂರ್ತಿ ಭಾಗವಹಿಸಿದ್ದರು.