ಖರೀದಿ ಕೇಂದ್ರದಲ್ಲಿ ಅವ್ಯವಸ್ಥೆ: ಅಧಿಕಾರಿಗಳ ವಿರುದ್ಧ ಆಕ್ರೋಶ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮಾ.05: ರಾಜ್ಯದಾದ್ಯಂತ ಸೋಮವಾರದಿಂದ ಉಂಡೆ ಕೊಬ್ಬರಿ ಖರೀದಿ ಕೇಂದ್ರಗಳನ್ನು ಆರಂಬಿಸಿರುವ ಹಿನ್ನೆಲೆಯಲ್ಲಿ ಪಟ್ಟಣದ ಎ.ಪಿ.ಎಂ.ಸಿ ಆವರಣದಲ್ಲಿ ಸ್ಥಾಪಿಸಿರುವ ಉಂಡೆ ಕೊಬ್ಬರಿ ಖರೀದಿ ಕೇಂದ್ರದ ಫ್ರೂಟ್ ಐಡಿಯಲ್ಲಿ ಹೆಸರು ನೊಂದಾಯಿಸಲು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ಖರೀದಿ ಕೇಂದ್ರದಲ್ಲಿ ನೂಕು ನುಗ್ಗಲು ಉಂಟಾಗಿತ್ತು. ಹನುಮಂತನ ಬಾಲದಂತೆ ಬೆಳೆದಿರುವ ಸರತಿಯ ಸಾಲಿನಲ್ಲಿ ನಿಂತು ರೈತರು ತಮ್ಮ ಹೆಸರು ನೊಂದಾವಣೆಗೆ ಪ್ರಯಾಸ ಪಡುತ್ತಿದ್ದರು. ಸರತಿಯ ಸಾಲಿನಲ್ಲಿ ನಿಂತಿದ್ದ ರೈತರಿಗೆ ನೀರು ಮತ್ತು ನೆರಳಿನ ಸಮಸ್ಯೆ ಎದುರಾಗಿದ್ದು ಸುಡುಬಿಸಿಲಿನಲ್ಲಿಯೇ ನಿಂತು ತಾಳ್ಮೆ ಕಳೆದುಕೊಂಡ ಕೆಲವು ರೈತರು ಖರೀದಿ ಕೇಂದ್ರದಲ್ಲಿನ ಅವ್ಯವಸ್ಥೆಯ ಬಗ್ಗೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಕೊಬ್ಬರಿ ಮಾರಾಟ ಮಾಡುವ ವರ್ತಕರು ರೈತರ ಹೆಸರಿನಲ್ಲಿ ಕೊಬ್ಬರಿ ಖರೀದಿ ಕೇಂದ್ರದಲ್ಲಿ ಹೆಸರನ್ನು ನೋಂದಾಯಿಸುತ್ತಿರುವುದರಿಂದ ಕೊಬ್ಬರಿ ಮಾರಾಟ ಮಾಡುವ ರೈತರ ಸಂಖ್ಯೆಯು ದಿಢೀರ್ ಹೆಚ್ಚಾಗಲು ಕಾರಣವಾಗಿದೆ ಎಂದು ಕೆಲವರು ಆರೋಪಿಸುತ್ತಿದ್ದರು.
ಕರ್ನಾಟಕ ರಾಜ್ಯ ಸರ್ಕಾರವು ಕೊಬ್ಬರಿ ಖರೀದಿಗೆ ಬೆಂಬಲ ಬೆಲೆ ಘೋಷಿಸಿರುವ ಹಿನ್ನೆಲೆಯಲ್ಲಿ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕೊಬ್ಬರಿ ಖರೀದಿ ಕೇಂದ್ರ ಆರಂಭವಾಗಿದ್ದು ರೈತ ಬಾಂಧವರು ತಮ್ಮ ಹೆಸರನ್ನು ಫ್ರೂಟ್ಸ್ ಐಡಿಯಲ್ಲಿ ನೋಂದಾಯಿಸಲು ಒಮ್ಮೆಲೆ ಮುಗಿ ಬಿದ್ದಿರುವುದರಿಂದ ನೋಂದಣಿ ಕೇಂದ್ರದ ಆವರಣದಲ್ಲಿ ನೂಕು ನುಗ್ಗಲು ಉಂಟಾಗಿದೆ. ಕೆ.ಆರ್.ಪೇಟೆ ಎ.ಪಿ.ಎಂ.ಸಿ ಆಭರಣದಲ್ಲಿ ಸ್ಥಾಪಿಸಿರುವ ಕೊಬ್ಬರಿ ಖರೀದಿ ಕೇಂದ್ರದ ನೊಂದಣಿ ಶಾಖೆಯಲ್ಲಿ ರೈತರು ತಮ್ಮ ಹೆಸರು ನೋಂದಾಯಿಸಲು 45 ದಿನಗಳ ಕಾಲ ಅವಕಾಶವಿದೆ. ಆದ್ದರಿಂದ ಯಾರೂ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಎಪಿಎಂಸಿ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಪ್ರಸ್ತುತ ತಾಲೂಕಿನ ಕೆ.ಆರ್.ಪೇಟೆ ಮತ್ತು ಕಿಕ್ಕೇರಿಯಲ್ಲಿ ಕೊಬ್ಬರಿ ಮಾರಾಟಕ್ಕೆ ರೈತರ ಹೆಸರುಗಳನ್ನು ನೊಂದಣಿ ಮಾಡಲಾಗುತ್ತಿದೆ. ಕೊಬ್ಬರಿ ಮಾರಾಟ ಖರೀದಿ ಫ್ರೂಟ್ ಐಡಿಯಲ್ಲಿ ರೈತರ ಹೆಸರು ನೋಂದಾಯಿಸಲು ನೆಟ್ ವರ್ಕ್ ನಲ್ಲಿ ಒತ್ತಡ ಇರುವುದರಿಂದ ರೈತರ ಹೆಸರನ್ನು ನೋಂದಾಯಿಸಲು ಸ್ವಲ್ಪ ತಡವಾಗುತ್ತಿದೆ. ಆದ್ದರಿಂದ ರೈತ ಬಾಂಧವರು ಸಹಕರಿಸಬೇಕು ಎಂದು ರಾಜ್ಯ ಸಹಕಾರ ಮಾರಾಟ ಮಂಡಲದ ಅಧಿಕಾರಿ ಶೀಲಾ ಮನವಿ ಮಾಡಿದ್ದಾರೆ.