ಮಾ.12 ರಾಯಚೋಟಿ ವೀರಭದ್ರದೇವರ ರಥೋತ್ಸವ
ಕಲಬುರಗಿ:ಮಾ.04:ವೀರಶೈವ ಧರ್ಮದ ಗೋತ್ರಪುರುಷ, ದುಷ್ಟರ ನಿಗ್ರಹದ ಮಹಾಶಕ್ತಿ ಶ್ರೀವೀರಭದ್ರದೇವರು ಭಾರತದ ನೆಲದಲ್ಲಿ ಪ್ರಪ್ರಥಮವಾಗಿ ಅವತಾರ ಹೊಂದಿರುವ ಆಂಧ್ರಪ್ರದೇಶ ರಾಜ್ಯದ ಅನ್ನಮಯ್ಯ ಜಿಲ್ಲೆಯ ರಾಯಚೋಟಿ ಕ್ಷೇತ್ರದ ಶ್ರೀಭದ್ರಕಾಳಿ ಸಮೇತ ವೀರಭದ್ರದೇವರ ವಾರ್ಷಿಕ ಮಹಾರಥೋತ್ಸವವು ಮಾರ್ಚ 12 ರಂದು (ಮಂಗಳವಾರ) ಸಂಜೆ 4.30 ಗಂಟೆಗೆ ಜರುಗಲಿದೆ ಎಂದು ರಾಯಚೋಟಿ ವೀರಭದ್ರ ದೇವಾಲಯದ ಧರ್ಮದರ್ಶಿ ಸಿ.ಎಂ. ಶಿವಶರಣಪ್ಪ ಕಲಬುರ್ಗಿ ತಿಳಿಸಿದ್ದಾರೆ.
ಮಾ.6 ಕಲ್ಯಾಣ ಉತ್ಸವ, ಮಯೂರವಾಹನೋತ್ಸವ, ಮಾ.7 ಯಾಳಿ ಮತ್ತು ಸಿಂಹ ವಾಹನೋತ್ಸವ, ಮಾ.8 ಗಜ ಮತ್ತು ಪುರಷಾಮೃಗ ವಾಹನೋತ್ಸವ, ಮಾ.9 ಹುಲಿ ಹಾಗೂ ರಾವಣ ವಾಹನೋತ್ಸವ ನಡೆಯಲಿವೆ. ಮಾ.10 ರಂದು ಮಹಾಶಿವರಾತ್ರಿ ಅಮಾವಾಸ್ಯೆಯ ದಿನ ಚಂಡಿಹೋಮ, ಶೇಷ ಮತ್ತು ಚಂದ್ರಪ್ರಭ ವಾಹನೋತ್ಸವ, ಪುಷ್ಪಾಲಂಕಾರ ವಿಶೇಷ ಪೂಜೆ, ಮಾ.11 ಸೂರ್ಯಪ್ರಭ ಉತ್ಸವ, ಶ್ರೀವೀರಭದ್ರ ದೇವರಿಗೆÉ ಮತ್ತು ಶ್ರೀಭದ್ರಕಾಳಿ ಅಮ್ಮನವರಿಗೆ ಚಿನ್ನದ ಕಿರೀಟ ಧಾರಣೆ ಮಹೋತ್ಸವ, ನಂದಿವಾಹನೋತ್ಸವ, ಅಹೋರಾತ್ರಿ ಭಜನೆ ಜರುಗುವವು.
ರಥೋತ್ಸವ : ಮಾ.12 ರಂದು (ಮಂಗಳವಾರ) ಪ್ರಾತಃಕಾಲ 4 ಗಂಟೆಗೆ ಅಗ್ನಿಕುಂಡ ಪ್ರವೇಶ, ಮುಂಜಾನೆ 11.45ರ ಶುಭ ಮುಹೂರ್ತದಲ್ಲಿ ಶ್ರೀವೀರಭದ್ರದೇವರಿಗೆ ವಜ್ರದ ತ್ರಿನೇತ್ರ ಧಾರಣೆ ಹಾಗೂ ಮಹಾನೈವೇದ್ಯ ನಡೆಯಲಿದೆ. ಅದೇ ದಿನ ಸಂಜೆ 4.30 ಗಂಟೆಗೆ ವಿವಿಧ ಜನಪದ ವಾದ್ಯಮೇಳಗಳೊಂದಿಗೆ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮುಂತಾದ ರಾಜ್ಯಗಳಿಂದ ಆಗಮಿಸುವ ಭಕ್ತಗಣದ ಜಯಘೋಷದ ಮಧ್ಯೆ ಶ್ರೀಭದ್ರಕಾಳಿ ಸಮೇತ ವೀರಭದ್ರದೇವರ ವಾರ್ಷಿಕ ಮಹಾರಥೋತ್ಸವವು ರಾಯಚೋಟಿ ನಗರದ ಎಲ್ಲ ಪ್ರಮುಖ ಬೀದಿಗಳಲ್ಲಿ ಜರುಗಲಿದೆ. ಮಾ.13 ರಂದು ಮಹಾಪೂರ್ಣಾಹುತಿ, ಕಂಕಣ ವಿಸರ್ಜನೆ, ವಸಂತೋತ್ಸವ, ಹಂಸವಾಹನೋತ್ಸವ, ಮಾ.14 ರಂದು ಸರಸ್ವತಿ ಪೂಜೆ, ಅಶ್ವ ವಾಹನೋತ್ಸವ ಹಾಗೂ ಮಾ.15 ರಂದು ಪಲ್ಲಕ್ಕಿ ಉತ್ಸವ, ಉಯ್ಯಾಲೆ ಉತ್ಸವ ನಡೆಯಲಿವೆ ಎಂದು ಧರ್ಮದರ್ಶಿ ಸಿ.ಎಂ. ಶಿವಶರಣಪ್ಪ ಕಲಬುರ್ಗಿ ತಿಳಿಸಿದರು.
ಹುಬ್ಬಳ್ಳಿ ಭಕ್ತರ ರಥ : ಹುಬ್ಬಳ್ಳಿ ನಗರದ ಭಕ್ತ ವೃಂದದ ಗಣ್ಯರಾದ ಗಿರೀಶಕುಮಾರ ಬುಡರಕಟ್ಟಿಮಠ, ನ್ಯಾಯವಾದಿ ಪ್ರಕಾಶ ಅಂದಾನಿಮಠ, ರಮೇಶ ಉಳ್ಳಾಗಡ್ಡಿ, ಪಿ.ಎಂ. ಚಿಕ್ಕಮಠ, ಎಂ.ಐ. ದೇಶನೂರ, ರಾಚಯ್ಯ ಮಠಪತಿ, ಶಿವಾನಂದ ನಾಗಠಾಣ, ಅನಿಲ ಉಳ್ಳಾಗಡ್ಡಿ, ರಮೇಶ ಬುಡರಕಟ್ಟಿಮಠ ಮುಂತಾದವರ ಸಂಘತ ಪ್ರಯತ್ನದ ಫಲವಾಗಿ ಉತ್ತರ ಕರ್ನಾಟಕ ಭಾಗದ ಭಕ್ತರು ಸುಮಾರು 9 ಲಕ್ಷ ರೂ.ಗಳ ವೆಚ್ಚದಲ್ಲಿ ಈಗ್ಗೆ 13 ವರ್ಷಗಳ ಹಿಂದೆಯೇ ನೂತನ ರಥವನ್ನು ನಿರ್ಮಾಣ ಮಾಡಿದ್ದು, ಪ್ರತೀ ವರ್ಷದ ಈ ರಥೋತ್ಸವಕ್ಕೆ ಕರ್ನಾಟಕದ ಸಹಸ್ರ ಸಹಸ್ರ ಸಂಖ್ಯೆಯ ಭಕ್ತರು ಸಾಕ್ಷಿಯಾಗುತ್ತಾರೆ.
ದಾಸೋಹ ಸೇವೆ : ರಾಯಚೂರಿನ ಭಕ್ತ ದಿ.ಅಮರಪ್ಪ ಅಂತರಗಂಗಿ ಅವರ ಹೆಸರಿನಲ್ಲಿ ವೀರಭದ್ರಪ್ಪ ಅಂತರಗಂಗಿ ಹಾಗೂ ಅಶೋಕ ಅಂತರಗಂಗಿ ಅವರು ಮಾ.11 ರಿಂದ 13 ರವರೆಗೆ ದಾಸೋಹ ಸೇವೆ ನಡೆಸುವರು. ಜೊತೆಗೆ ಗದಗ ಜಿಲ್ಲೆ ನರಗುಂದದ ನಾಗಠಾಣ ಕುಟುಂಬ ವರ್ಗ ಮತ್ತು ಕರ್ನಾಟಕದ ಭಕ್ತಗಣದಿಂದಲೂ ದಾಸೋಹ ಸೇವೆ ಜರುಗುವುದು ಎಂದೂ ಅವರು ಹೇಳಿದರು.