ವಾರ್ಡ್ 32ರಲ್ಲಿ ನೀರಿನ ಸಮಸ್ಯೆ; ರಸ್ತೆತಡೆ ಚಳವಳಿ ಎಚ್ಚರಿಕೆ
ಕಲಬುರಗಿ,ಮಾ.4:ಇಲ್ಲಿನ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ಕ್ರಮಾಂಕ 32ರಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು ಈ ನಿಟ್ಟಿನಲ್ಲಿ ಒಂದು ವಾರದೊಳಗೆ ಸೂಕ್ತ ಕ್ರಮ ಕೈಗೊಳ್ಳದೆ ಹೋದರೆ ಬಸವೇಶ್ವರ ಆಸ್ಪತ್ರೆ ಎದುರಿನ ಖರ್ಗೆ ಪೆಟ್ರೋಲ್ ಬಂಕ್ ಸರ್ಕಲ್ ಬಳಿ ಖಾಲಿ ಕೊಡಗಳೊಂದಿಗೆ ರಸ್ತೆ ತಡೆ ಚಳವಳಿ ನಡೆಸಲಾಗುವುದು ಎಂದು ವಾರ್ಡ್ ಸದಸ್ಯೆ ಯಂಕಮ್ಮ ಗುತ್ತೇದಾರ್ ಹೇಳಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ನಾಲ್ಕರಿಂದ ಐದು ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿತ್ತು. ಆದರೆ, ಈಗ 10ರಿಂದ 12 ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ಇದರಿಂದ ವಾರ್ಡ್ ವ್ಯಾಪ್ತಿಯ ವಿದ್ಯಾನಗರ, ರಾಜಾಪುರ, ಸಾಯಿನಗರ, ಗುಬ್ಬಿ ಕಾಲೊನಿ, ಜಯನಗರ, ಓಂ ನಗರ ಬಡಾವಣೆಗಳ ಸುಮಾರು 8000 ನಿವಾಸಿಗಳು ನೀರಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸದಸ್ಯೆ ಯಂಕಮ್ಮ ಗುತ್ತೇದಾರ್ ಅವರ ಪತಿ ಜಗದೇವ ಗುತ್ತೇದಾರ್ ಮಾತನಾಡಿ, ಎಲ್ ಅಂಡ್ ಟಿ ಇಂಜಿನಿಯರ್ ಉದ್ದೇಶಪೂರ್ವಕವಾಗಿಯೇ ತಾವು ವಾಸಿಸುವ ಬಡಾವಣೆ ಸೇರಿದಂತೆ ಕೆಲವು ಪ್ರದೇಶಗಳಿಗೆ ಮೂರನಾಲ್ಕು ದಿನಕ್ಕೊಮ್ಮೆ ನೀರು ದೊರಕುವಂತೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಉಳಿದಂತೆ ವಿದ್ಯಾನಗರ, ರಾಜಾಪುರ, ಸಾಯಿನಗರ, ಗುಬ್ಬಿ ಕಾಲೊನಿ, ಜಯನಗರ, ಓಂ ನಗರ ಬಡಾವಣೆಗಳಿಗೆ ಹತ್ತರಿಂದ 12 ದಿನಕ್ಕೊಮ್ಮೆ ನೀರು ಬಿಡುಗಡೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಉದ್ದೇಶಪೂರ್ವಕವಾಗಿಯೇ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಪ್ರತಿ 10-12 ದಿನಕ್ಕೊಮ್ಮೆ ನೀರು ಬಿಟ್ಟರೂ ಕೇವಲ ಅರ್ಧ ತಾಸಿಗೆ ನೀರು ಬಂದ್ ಮಾಡಲಾಗುತ್ತದೆ. ಹೀಗೆ ಅರ್ಧ ತಾಸಿನ ಅವಧಿಯಲ್ಲಿ ಫೆÇೀರ್ಸ್ ಇಲ್ಲದ ಕಾರಣಕ್ಕಾಗಿ ಕೇವಲ ಕಾಟಾಚಾರಕ್ಕೆ ನೀರು ಬಿಟ್ಟಂತಾಗುತ್ತಿದೆ. ಇದರಿಂದ ಜನರಿಗೆ ನೀರು ಮಾತ್ರ ಸರಿಯಾಗಿ ಲಭಿಸುತ್ತಿಲ್ಲ ಎಂದು ಟೀಕಿಸಿದರು.
ವಾರ್ಡ್ ಕ್ರಮಾಂಕ 32ರ ವ್ಯಾಪ್ತಿಯ ಕೆಲವು ಬಡಾವಣೆಗಳಲ್ಲಿ ಉದ್ದೇಶಪೂರ್ವಕವಾಗಿ ನೀರು ಬಿಡುಗಡೆ ವ್ಯವಸ್ಥೆಯಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಸಾಕಷ್ಟು ಬಾರಿ ಪಾಲಿಕೆಯ ಕಮಿಷನರ್ ಅವರಿಗೆ ದೂರು ಸಲ್ಲಿಸಿದರೂ ಪ್ರಯೋಜನ ಆಗಿಲ್ಲ. ಪದೇಪದೆ ದೂರು ಸಲ್ಲಿಸಿದರೂ ಕಮಿಷನರ್ ಮನವಿಗೆ ಹಿಂಬರಹ ಸಹ ನೀಡುತ್ತಿಲ್ಲ. ಹೀಗಾಗಿ, ಈಗ ಅನಿವಾರ್ಯವಾಗಿ ಹೋರಾಟದ ಹಾದಿ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಗುತ್ತೇದಾರ್ ನುಡಿದರು.
ಸಾಮಾಜಿಕ ಕಾರ್ಯಕರ್ತ ಹಾಗೂ ಗುಬ್ಬಿ ಕಾಲೊನಿ ನಿವಾಸಿ ಸಿದ್ದರಾಜ್ ಬಿರಾದಾರ್, ನೀಲಕಂಠ, ಸೂರ್ಯಕಾಂತ ಸಿರಗಾಪುರ, ಭೀಮಾಶಂಕರ ಸೇರಿದಂತೆ ವಾರ್ಡ್ ನಿವಾಸಿಗಳು ಉಪಸ್ಥಿತರಿದ್ದರು.
ಸರಕಾರಿ ಬೋರ್ ವೆಲ್ ಒತ್ತುವರಿ ಆರೋಪ
ಖರ್ಗೆ ಪೆಟ್ರೋಲ್ ಬಂಕ್ ಸರ್ಕಲ್ ಸಮೀಪದ ಹೇರ್ ಕಟಿಂಗ್ ಸಲೂನ್ ಬಳಿ ಇರುವ ಮಹಾನಗರ ಪಾಲಿಕೆಯ ಬೋರ್ ವೆಲ್ ಒತ್ತುವರಿಯಾಗಿದೆ. ಈ ಪ್ರದೇಶದ ಯಾರೊಬ್ಬರೂ ಈ ಬೋರ್ ವೆಲ್ ನೀರು ಪಡೆಯದಂತೆ ದೌರ್ಜನ್ಯ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಪಾಲಿಕೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಜಗದೇವ ಗುತ್ತೇದಾರ್ ಒತ್ತಾಯಿಸಿದರು.