ಕೋರ್ಸ್ ಆಯ್ಕೆ ಕುರಿತು ಪಾಲಕರ ಒತ್ತಾಯ ಬೇಡ:ಸಾಗರ ಖಂಡ್ರೆ
ಭಾಲ್ಕಿ:ಮಾ.4:ಪಾಲಕರು ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಒತ್ತಡ ಹೇರದೆ, ಮಕ್ಕಳು ಸ್ವತಂತ್ರವಾಗಿ ಕೋರ್ಸ್ ಆಯ್ಕೆ ಮಾಡಿಕೊಳ್ಳಲು ಸಹಕರಿಸಬೇಕು ಎಂದು ಎನ್‍ಎಸ್‍ಯುಐ ರಾಜ್ಯ ಕಾರ್ಯದರ್ಶಿ ಮತ್ತು ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸಾಗರ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ಬಿಯಾಣಿ ದಾಲ್‍ಮಿಲ್ ಆವರಣದಲ್ಲಿ ಶಾರದಾ ಪಬ್ಲಿಕ್ ಶಾಲೆಯವರು ಹಮ್ಮಿಕೊಂಡ 13ನೇ ಶಾಲಾ ವಾರ್ಷಿಕೋತ್ಸವ ಸಮಾರಂಭದ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಶಿಕ್ಷಣ ಜೊತೆಗೆ ಉತ್ತಮ ಸಂಸ್ಕಾರ ನೀಡಿ ಬೆಳೆಸುವುದು ಅವಶ್ಯಕವಾಗಿದೆ. ತಮಗೆ ದೊರೆತ ಅವಕಾಶವನ್ನು ಬಳಸಿಕೊಂಡು ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ನಿರ್ಮಿಸಿಕೊಳ್ಳಬೇಕು. ಪೋಷಕರು ತಮ್ಮ ಮಕ್ಕಳನ್ನು ಇತರ ವಿದ್ಯಾರ್ಥಿಗಳೊಂದಿಗೆ ಹೋಲಿಕೆ ಮಾಡುವುದು ಸರಿಯಲ್ಲ. ಇದರಿಂದ ಮಕ್ಕಳ ಮನಸ್ಸಿನಲ್ಲಿ ಖಿನ್ನತೆಯ ಭಾವನೆ ಮೂಡಿ ಅವರ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀಳುವ ಸಾಧ್ಯತೆಯಿದೆ.ವಸಂತರಾವ ಪಾಟೀಲ್ ಅವರ ಉಸ್ತುವಾರಿಯಲ್ಲಿ ಶಾರದಾ ಶಿಕ್ಷಣ ಸಂಸ್ಥೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಹಜರ ಹುಸೇನ್ ಮಾತನಾಡಿ, ಗಡಿ ಭಾಗದ ಮಕ್ಕಳು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಛಲ ಹೊಂದಿದ್ದಾರೆ.ಶಾರದಾ ಪಬ್ಲಿಕ್ ಶಾಲೆಯ ದಿಶಾ ನೆಲವಾಡೆ ಜಾವಲಿನ್ ಥ್ರೋ ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಕಲ್ಯಾಣ-ಕರ್ನಾಟಕ ಭಾಗದ ಕೀರ್ತಿ ಹೆಚ್ಚಿಸಿದ್ದಾಳೆ.ಪ್ರತಿಭೆಯುಳ್ಳ ಮಕ್ಕಳಿಗೆ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ ಎಂದು ಹೇಳಿದರು.
ಪಿಎಸ್‍ಐ ಯಶೋಧಾ ಕರಾಟೆ ಮಾತನಾಡಿ, ಇದು ಸ್ಪರ್ಧಾತ್ಮಕ ಯುಗವಾಗಿದ್ದು, ವಿದ್ಯಾರ್ಥಿಗಳಲ್ಲಿ ಕೌಶಲ್ಯತೆ ಮತ್ತು ಗ್ರಹಿಕಾ ಮಟ್ಟ ಹೆಚುತ್ತಿದೆ. ವಿದ್ಯಾರ್ಥಿಗಳು ಗುರಿ ತಲುಪುವವರೆಗೆ ಛಲ ಬಿಡದೇ ಪ್ರಯತ್ನಿಸಬೇಕು. ದುಶ್ಚಟಗಳಿಂದ ದೂರ ಉಳಿದು, ನಕಲು ಜೀವನಕ್ಕೆ ಅವಕಾಶ ನೀಡದೆ, ಶಿಸ್ತು ಮತ್ತು ಏಕಾಗ್ರತೆಯಿಂದ ಅಧ್ಯಯನ ಮಾಡಿ ಉನ್ನತ ಮಟ್ಟಕ್ಕೇರಬೇಕು ಎಂದು ತಿಳಿಸಿದರು.
ಶಾರದಾ ಪಬ್ಲಿಕ್ ಶಾಲೆಯ ಅಧ್ಯಕ್ಷ ವಸಂತರಾವ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಜನಾರ್ಧನರಾವ ಬಿರಾದಾರ, ಆರ್.ಡಿ.ಬಿರಾದಾರ, ಚನ್ನಬಸವ ಬಳತೆ, ವಿನೋದಕುಮಾರ ಜಾಧವ, ಅಶೋಕ ರಾಜೋಳೆ, ಡಾ.ವಿಲಾಸ ಕನಸೆ, ಸಹದೇವ ಗೌಂಡಗಾವೆ, ಅಂಬರಿಷ್ ಖಂಡ್ರೆ, ಖಾಜಾಮಿಯಾ ಮಿರದೆ, ಉತ್ತಮ ಪುರಿ, ನ್ಯಾ.ದಯಾನಂದ ಪವಾರ, ಜೈರಾಜ ದಾಬಶೆಟ್ಟಿ, ಚಂದ್ರಕಾಂತ ಪಾಟೀಲ, ಗಣಪತಿ ಬೋಚರೆ, ಶರದ ಪಾಟೀಲ, ಪ್ರಶಾಂತ ರಾಜೋಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ನೃತ್ಯ:ವಿವಿಧ ವರ್ಗದ ಪುಟಾಣಿ ಮಕ್ಕಳ ನೃತ್ಯ ಸಭಿಕರ ಗಮನ ಸೆಳೆಯಿತು.
“ಇಂದಿನ ಆಧುನಿಕ ಯುಗದಲ್ಲಿ ಪೈಪೋಟಿ ಹೆಚ್ಚಾಗಿದ್ದು, ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುವ ಅವಕಾಶವಿದೆ. ಕೇವಲ ಇಂಜಿನಿಯರಿಂಗ್, ಮೆಡಿಕಲ್ ಕೋರ್ಸ್‍ಗಳಿಗೆ ಮಾತ್ರ ಬೆಲೆಯಿದೆ ಎಂಬುದು ತಪ್ಪು ಕಲ್ಪನೆಯಾಗಿದೆ. ವಾಣಿಜ್ಯ ಮತ್ತು ಕಲಾ ವಿಭಾಗದಲ್ಲಿ ವಿಪುಲ ಉದ್ಯೋಗಾವಕಾಶಗಳಿದ್ದು ತಾವು ಇಚ್ಛಿಸಿದ ಕೋರ್ಸ್‍ಗಳಲ್ಲಿ ಆಸಕ್ತಿ ಮತ್ತು ಪರಿಶ್ರಮದಿಂದ ಅಭ್ಯಸಿಸಿದರೆ ಸ್ವಾವಲಂಬಿ ಜೀವನ ನಡೆಸಬಹುದು.”-ಸಾಗರ ಖಂಡ್ರೆ ಯುವನಾಯಕ ಭಾಲ್ಕಿ.