ಕೊಲ್ಹಾರ ಬಳಿ ರಸ್ತೆ ಮೇಲೆ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ
ಕೊಲ್ಹಾರ:ಸೆ.16: ಕೊಲ್ಹಾರ ಯು.ಕೆ.ಪಿ ಸಮೀಪದ ಬನ್ನಿ ಹಳ್ಳದ ಪಕ್ಕದ ರಸ್ತೆಯ ಮೇಲೆ ಶನಿವಾರ ತಡರಾತ್ರಿ ಬೃಹತ್ ಗಾತ್ರದ ಮೊಸಳೆಯೊಂದು ಪ್ರತ್ಯಕ್ಷವಾಗಿ ರೈತರಲ್ಲಿ ಆತಂಕ ಮೂಡಿಸಿದೆ.
ಅರ್ಜುನ ಬ್ಯಾಲ್ಯಾಳ ಎಂಬ ರೈತ ಶನಿವಾರ ರಾತ್ರಿ ತಮ್ಮ ಜಮೀನ ಕಡೆಗೆ ಹೋರಟಾಗ ರಸ್ತೆ ಮೇಲೆ ಮೊಸಳೆ ಪ್ರತ್ಯಕ್ಷವಾಗಿದೆ.ಭಯಬೀತನಾದ ಅರ್ಜುನ ರೈತ ಪಕ್ಕದ ಇನ್ನೊರ್ವ ರೈತ ಸುರೇಶ ಶಿವಣ್ಣವರರವರಿಗೆ ಮೊಸಳೆ ಇದ್ಹ ಬಗ್ಗೆ ಮಾಹಿತಿ ತಿಳಿಸಿದ್ದಾನೆ.ಇವರೊಂದಿಗೆ ಅಕ್ಕ ಪಕ್ಕದ ಜಮೀನಿನ ಹತ್ತಾರು ರೈತರು ಸ್ಥಳಕ್ಕೆ ಆಗಮಿಸಿದ್ದಾರೆ.ರೈತರನ್ನು ಕಂಡ ಮೊಸಳೆ ಪ್ರಾಣೇಶ ಪತ್ತಾರವರ ಗೋವಿನಜೋಳದ ಮೂಲಕ ಹಾದು ಪಕ್ಕದಲ್ಲಿದ್ದ ಕಿರು ಕಾಲುವೆ ಬದಿಯಲ್ಲಿ ಮುಳ್ಳು ಕಂಟಿಯಲ್ಲಿ ಸೇರಿಕೊಂಡಿದೆ.ರೈತರು ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಉಪ ವಲಯ ಅರಣ್ಯ ಅಧಿಕಾರಿ ಬಸವರಾಜ ಕೊಣ್ಣೂರ ಹಾಗೂ ನಿಡಗುಂದಿ -ಕೊಲ್ಹಾರ ವಲಯದ ಮೊಸಳೆ ರಕ್ಷಣೆ ಅಧಿಕಾರಿ ನಾಗೇಶ ರವರು ಸ್ಥಳಕ್ಕೆ ಆಗಮಿಸಿ ರೈತರ ಸಹಾಯದಿಂದ ಮೊಸಳೆ ಸೆರೆ ಹಿಡಿದು ತಡರಾತ್ರಿ ಕೊರ್ತಿ -ಕೊಲ್ಹಾರ ಸೇತುವೆ ಬಳಿ ಕೃಷ್ಣಾ ನದಿ ಹಿನ್ನಿರಿಗೆ ಬಿಟ್ಟಿದ್ದಾರೆ. ಕೃಷ್ಣಾ ನದಿ ಹಿನ್ನಿರು ಬನ್ನಿ ಹಳ್ಳದವರೆಗೆ ಹರಿದು ಬರುತ್ತಿದ್ದು ಅದರ ಮೂಲಕ ಈ ಮೊಸಳೆಯು ಬಂದಿರಬಹುದು ಎಂದು ಶಂಕಿಸಲಾಗಿದೆ.