ವಿಜಯಪುರದಲ್ಲಿ ಮಹಾಮಂಡಳ ಗಣೇಶ ಉತ್ಸವ ಮೂರ್ತಿ ವಿಸರ್ಜನಾ ಪೂರ್ವ ಮೆರವಣಿಗೆ
ವಿಜಯಪುರ,ಸೆ.16: ಇಲ್ಲಿನ ಶ್ರೀ ಶಿವಾಜಿ ಮಹಾರಾಜ ವೃತ್ತದಲ್ಲಿ ಪ್ರತಿಷ್ಠಾಪಿಸಲಾಗಿರುವ ಶ್ರೀ ಗಜಾನನ ಮಹಾಮಂಡಳದ ಗಣೇಶ ಉತ್ಸವ ಮೂರ್ತಿಯ ವಿಸರ್ಜನಾ ಪೂರ್ವ ಮೆರವಣಿಗೆ ವೈಭವದಿಂದ ನಡೆಯಿತು.
ಈ ಬಾರಿ ಸರಳ ರೀತಿಯ ಮೆರವಣಿಗೆ ನಡೆಸಲಾಗಿತ್ತಾದರೂ ಅನೇಕ ರೀತಿಯ ಕಲಾ ತಂಡಗಳು ಮೆರವಣಿಗೆಯ ಸೊಬಗು ಹೆಚ್ಚಿಸಿದ್ದವು. ಗಜಾನನ ಮಹಾಮಂಡಳ ವತಿಯಿಂದ ಬೃಹತ್ ಫೈಬರ್ ಗಣೇಶನನ್ನು ಪ್ರತಿಷ್ಠಾಪಿಸಲಾಗಿದ್ದು, ಸಾಂಕೇತಿಕವಾಗಿ ಮಣ್ಣಿನ ಗಣೇಶನ ಉತ್ಸವ ಮೂರ್ತಿಯನ್ನು ಶ್ರದ್ಧಾ-ಭಕ್ತಿಪೂರ್ವಕವಾಗಿ ವಿಸರ್ಜಿಸಲಾಯಿತು.
ವಿಜಯಪುರದ ಶ್ರೀ ಶಿವಾಜಿ ವೃತ್ತದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿದ ಮಹಾಮಂಟಪದಲ್ಲಿ ಅರ್ಚಕರಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ವಿಸರ್ಜನಾ ಮೆರವಣಿಗೆ ಆರಂಭಗೊಂಡಿತು.
ವಿವಿಧ ಪುಷ್ಪಗಳಿಂದ ಸಾಲಂಕೃತ ರಥದಲ್ಲಿ ಗಣೇಶನ ಉತ್ಸವ ಮೂರ್ತಿಯನ್ನು ಇರಿಸಲಾಗಿತ್ತು. ಕಹಳೆ, ಕರಡಿ ಮಜಲು, ನವಿಲು ಕುಣಿತ, ಡೊಳ್ಳು ಹೀಗೆ ನಾನಾ ವೈದ್ಯ ವೈಭವಗಳ ಸದ್ದು ಮುಗಿಲು ಮುಟ್ಟಿತ್ತು. ಯುವಕರು ಭಕ್ತಿಯ ಹರ್ಷೋದ್ಘಾರದ ಮೂಲಕ ಮೆರವಣಿಗೆಯಲ್ಲಿ ಭಾಗವಹಿಸಿದರು.
ಶ್ರೀ ಶಿವಾಜಿ ಮಹಾರಾಜರ ವೃತ್ತದಿಂದ ಆರಂಭಗೊಂಡ ಮೆರವಣಿಗೆಯು ಉಪ್ಪಲಿ ಬುರುಜ್, ಮಿಲನ್ ವೃತ್ತ, ಲಕ್ಷ್ಮಿ ಗುಡಿ, ಗಾಂಧಿವೃತ್ತ ಸೇರಿದಂತೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ತಾಜ್ ಬಾವಡಿ ತಲುಪಿತು. ಅಲ್ಲಿ ನಿರ್ಮಿಸಲಾದ ತಾತ್ಕಾಲಿಕ ಹೊಂಡದಲ್ಲಿ ಪ್ರತಿಷ್ಠಾಪನೆ ಮಾಡಲಾದ ಮಣ್ಣಿನ ಗಣೇಶ ಮೂರ್ತಿಯನ್ನು ಭಕ್ತಿಪೂರ್ವಕವಾಗಿ ವಿಸರ್ಜಿಸಲಾಯಿತು.
ವಿಜಯಪುರ ರತ್ನ ಪ್ರಶಸ್ತಿ ಪ್ರದಾನ
ವಿಸರ್ಜನಾ ಪೂರ್ವ ಮೆರವಣಿಗೆಗೆ ಚಾಲನೆ ನೀಡಿದ ಸಂಸದ ರಮೇಶ ಜಿಗಜಿಣಗಿ, ವಿಘ್ನ ನಿವಾರಕ ಗಣೇಶ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತಾನೆ, ಗಣಪತಿಯನ್ನು ಭಕ್ತಿಭಾವದಿಂದ ಪ್ರಾರ್ಥಿಸಿದರೆ ಸಕಲ ವಿಘ್ನಗಳು ದೂರವಾಗಿ ಇಷ್ಟಾರ್ಥಗಳು ನೆರವೇರುತ್ತವೆ, ಭಕ್ತಿ ಎನ್ನುವುದು ನಮ್ಮ ಉಸಿರಾಗಬೇಕು ಎಂದರು.
ಪ್ರತಿ ವರ್ಷ ಗಜಾನನ ಮಹಾಮಂಡಳ ಗಣೇಶೋತ್ಸವಕ್ಕೆ ವಿಶೇಷ ಮೆರಗು, ಗಜಾನನ ಮಂಡಳಿಗಳಿಗೆ ಪಾರಿತೋಷಕ ಮೊದಲಾದ ರೀತಿಯ ಪೆÇ್ರೀತ್ಸಾಹ ನೀಡುತ್ತಾ ಬಂದಿದೆ, ಈ ರೀತಿಯ ಕಾರ್ಯಕ್ರಮಗಳು ಸದಾ ಮುಂದುವರೆಯಲಿ ಎಂದು ಹಾರೈಸಿದರು.
ಸಮಾಜಕ್ಕೆ ಸೇವೆ ಸಲ್ಲಿಸಿದ ಸಾಧಕರಿಗೆ ವಿಜಯಪುರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪೌರಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ಕನಕವ್ವಾ ತಿಕೋಟಿ, ಸೀತಾ ಸಂಗಾಪೂರ, ಮುತ್ತಪ್ಪ ಭೋವಿ, ಅನೇಕ ವರ್ಷಳಿಂದ ತಮ್ಮದೇ ಆದ ರೀತಿಯಲ್ಲ ಸಮಾಜ ಸೇವೆ ಮಾಡುತ್ತಿರುವ ಶಂಕರ ಕಟಗೆ, ಸಾವಯವ ಕೃಷಿ ಕ್ಷೇತ್ರದಲ್ಲಿ ಸಂಗಪ್ಪ ವಿಜಾಪೂರ, ನೀಟ್ ಪರೀಕ್ಷೆಯಲ್ಲಿ ಸಾಧನೆ ತೋರಿದ ರಾಜೇಶ್ವರಿ ಮಠ, ಕಲಾವಿದ ಚೆನ್ನಪ್ಪ ಪೂಜಾರಿ ಅವರಿಗೆ ವಿಜಯಪುರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬುರಾಣಪೂರ ಆರೂಢಾಶ್ರಮದ ಮಾತೋಶ್ರೀ ಯೋಗೇಶ್ವರಿ ಮಾತಾಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ಶಾಸಕ ರಮೇಶ ಭೂಸನೂರ, ಗಜಾನನ ಮಹಾಮಂಡಳದ ಅಧ್ಯಕ್ಷ ಆನಂದ ಮುಚ್ಚಂಡಿ ಪಾಲ್ಗೊಂಡಿದ್ದರು.