ವಿದ್ಯಾರ್ಥಿಗಳ ಸಾಧನೆ ಗುರುವಿನ ಆಶಯ
ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.04: ತಮ್ಮ ಕೈಯಲ್ಲಿ ಕಲಿತ ವಿದ್ಯಾರ್ಥಿಗಳು ತಮಗಿಂತ ಉನ್ನತ ಹುದ್ದೆಯಲ್ಲಿರಬೇಕು ಹಾಗೂ ಉತ್ತಮ ನಾಗರಿಕರಾಗಿ ಸಮಾಜಮುಖಿಯಾಗಿ ಬಾಳಬೇಕೆಂದು ಪ್ರತಿಯೊಬ್ಬ ಶಿಕ್ಷಕ ಆಶಿಸುತ್ತಾನೆ ಎಂದು ಚೇಳ್ಳಗುರ್ಕಿ ಸರ್ಕಾರಿ ಪ್ರೌಢಶಾಲೆ ನಿವೃತ್ತ ಗಣಿತ ವಿಜ್ಞಾನ ಶಿಕ್ಷಕರಾದ ಕೃಷ್ಣಾರೆಡ್ಡಿ ಹೇಳಿದರು.
ತಾಲೂಕಿನ ಶ್ರೀ ಕ್ಷೇತ್ರ ಚೇಳ್ಳಗುರ್ಕಿಯ ಶ್ರೀ ಎರ್ರಿತಾತನವರ ಸರ್ಕಾರಿ ಪ್ರೌಢಶಾಲೆಯ ಮೈದಾನದಲ್ಲಿ 1996ನೇ ಸಾಲಿನ ಎಸ್ ಎಸ್ ಎಲ್ ಸಿ ಹಳೆ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ತಾತನವರ ಸನ್ನಿಧಿಯಲ್ಲಿ ಶಿಕ್ಷಣ ಪಡೆದು ವಿವಿಧ ಕ್ಷೇತ್ರಗಳಲ್ಲಿನ ನಿಮ್ಮ ಸಾಧನೆ ಕಂಡು,ಕೇಳಿ ಆನಂದವಾಗುತ್ತಿದೆ.ಇದೇ ನೀವು ನಮಗೆ ಕೊಡುವ ದೊಡ್ಡ ಗುರುಕಾಣಿಕೆ ಎಂದು ಹೇಳಿದರು.
ನಿವೃತ್ತ ಕನ್ನಡ ಪಂಡಿತರಾದ  ಕೆ.ಪಂಪನಗೌಡ ಜೋಳದರಾಶಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ನೀವು ಮಾಡುವ ಉದ್ಯೋಗ, ಕೆಲಸದಲ್ಲಿ ಪ್ರಾಮಾಣಿಕತೆ ಇರಲಿ. ಅದು ಸದಾ ನಿಮ್ಮನ್ನು ,ನಿಮ್ಮ ಆರೋಗ್ಯ ಹಾಗೂ ಕುಟುಂಬವನ್ನು ನೆಮ್ಮದಿಯಿಂದ ಇರಿಸುತ್ತದೆ ಎಂದು ಹೇಳಿದರು.
ಬಳ್ಳಾರಿ ಡಯಟ್ ನ ಉಪನ್ಯಾಸಕಿ ಪ್ರಭಾವತಿ, ತೋಟಗಾರಿಕೆ ನಿವೃತ್ತ ಶಿಕ್ಷಕ ಶಿವರುದ್ರಪ್ಪ, ಉದಯ ಶಂಕರ್,ದೈಹಿಕ ಶಿಕ್ಷಕ ಕೊಟ್ರೇಶ್, ಶಿಕ್ಷಣ ಇಲಾಖೆಯ ಜಿಲ್ಲಾ ಕೌಶಲ್ಯ ಪರಿವೀಕ್ಷಕರಾದ ವೇದಾವತಿ, ಚಂದ್ರಮೌಳಿ,ದಾಕ್ಷಾಯಿಣಿ,ಶಕುಂತಲಾ ಬಾಯಿ ಅವರನ್ನು ಸನ್ಮಾನಿಸಿ,ಗೌರವಿಸಲಾಯಿತು.
ಹಳೇ ವಿದ್ಯಾರ್ಥಿಗಳಾದ ಪಂಪನಗೌಡ,ಕೆಎಎಸ್ ಅಧಿಕಾರಿ, ವಿಧಾನ ಸೌಧ ಬೆಂಗಳೂರು, ನಿಟ್ಟೂರು ಮಂಜುನಾಥ್, ಕಾರೇಕಲ್ಲು ಶಂಕರ್ ಗೌಡ,ಪ್ರೊಫೆಸರ್ ನಾಗನಗೌಡ,ಶಂಕರಬಂಡೆ ಹನುಮಂತ, ಹೊಸಮನಿ ಸುನೀತ ಮುಂತಾದವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಡಾ.ಮುಕುಂದ ಪ್ರಾಸ್ತಾವಿಕವಾಗಿ ಮಾತನಾಡಿ ನಿರೂಪಿಸಿದರೆ,ಶಿಕ್ಷಕರಾದ ರವಿಚೇಳ್ಳಗುರ್ಕಿ ಸ್ವಾಗತಿಸಿದರು.
ಪಿ.ಡಿ.ಹಳ್ಳಿ ಶ್ರೀನಿವಾಸ ನಾಯಕ,ರಾಮಚಂದ್ರ, ಜಾಯಿಗನೂರು ಎರ್ರಿಸ್ವಾಮಿ,ಬೇನಳ್ಳಿ ಎರ್ರಿಸ್ವಾಮಿ, ನಿರ್ಮಲ,ನಾಗವೇಣಿ, ಬಸವರಾಜ, ರಾಮಕೃಷ್ಣ, ಪಿಡ್ಡನಗೌಡ,ರವಿ,ಲಿಂಗಣ್ಣ, ನಾಗರಾಜ ಶೆಟ್ಟಿ,ಸೊನ್ನ ಮಲ್ಲಿಕಾರ್ಜುನ, ಕೊಟ್ರೇಶ್,ಬ್ರಹ್ಮ ಮುಂತಾದವರು ಉಪಸ್ಥಿತರಿದ್ದರು.