ವಿದ್ಯಾರ್ಥಿಗಳಿಗೆ ಧ್ಯಾನ ಮತ್ತು ಯೋಗ ತುಂಬಾ ಮುಖ್ಯ

ಸಂಜೆವಾಣಿ ವಾರ್ತೆ
ಹಿರಿಯೂರು.ಮಾ.೪: ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್  ಸಂಸ್ಥೆಯಲ್ಲಿ  ಸಂಸ್ಥೆಯ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಿರಿಯೂರು ನಗರಸಭೆಯ ಪೌರಾಯುಕ್ತಾರಾದ  ರಾಜು. ಕೆ ರವರು ಭಾಗವಹಿಸಿ ಪ್ರಾಕೃತಿಕ ಆರೋಗ್ಯ, ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ, ಧ್ಯಾನ, ಮತ್ತು ಯೋಗದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ವಾಸುದೇವ ಎನ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಆರೋಗ್ಯವನ್ನು ಸ್ವಾಸ್ಥ್ಯವಾಗಿರಿಸಿಕೊಳ್ಳುವ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಈ ಶಿಬಿರದಲ್ಲಿ ಚಿತ್ರದುರ್ಗದ  ಬಸವೇಶ್ವರ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ವೈದ್ಯಾಧಿಕಾರಿಗಳು ಭಾಗವಹಿಸಿ ಸುಮಾರು 250 ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳ ಆರೋಗ್ಯ ತಪಾಸಣೆಯನ್ನು ಮಾಡುವುದರ ಜೊತೆಗೆ ಹೆಣ್ಣು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ತಿಳುವಳಿಕೆ ನೀಡಿದರು. ಈ ಕಾರ್ಯಕ್ರಮವು ಸಂಸ್ಥೆಯ ಯುವ ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಡಾ. ನವೀನ್ ಕುಮಾರ್ ಹೆಚ್ ಎಸ್ ರವರ ನೇತೃತ್ವದಲ್ಲಿ ನಡೆಯಿತು ಮತ್ತು ನಿರೂಪಣೆಯನ್ನು ವೀರಣ್ಣ ವಿ ರವರು ನಿರೂಪಿಸಿದರು. ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.