ಭೂಮಿಪೂಜೆ ಕಾರ್ಯಕ್ರಮ
ಬ್ಯಾಡಗಿ,ಮಾ4: ದೈವಾರಾಧನೆಯು ಯಾವುದೇ ಜಾತಿ, ಧರ್ಮಗಳಿಗೆ ಒಳಪಟ್ಟದುದಲ್ಲ. ದೈವಗಳು ಸಮಾಜದ ಎಲ್ಲರ ಆರಾಧ್ಯ ಶಕ್ತಿಗಳಾಗಿವೆ. ಇಂದು ದೈವರಾಧನಾ ಕ್ಷೇತ್ರಗಳು ಪರಂಪರೆಯನ್ನು ಉಳಿಸಿ ನಡೆಸಬೇಕಾದ ಆವಶ್ಯಕತೆಯಿದೆ ಎಂದು ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ತಾಲೂಕಿನ ಗುಂಡೇನಹಳ್ಳಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ಮತ್ತು ಜುಂಜೇಶ್ವರ ದೇವಸ್ಥಾನಗಳ ಕಟ್ಟಡದ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ನಮ್ಮಲ್ಲಿ ಹಣ ಸಂಪತ್ತು ಎಷ್ಟೇ ಇದ್ದರೂ ದೇವರನ್ನು ಕಾಣಲು ಸಾಧ್ಯವಿಲ್ಲ. ಭಕ್ತಿ ಪೂಜೆ ಭಜನೆಯಿಂದ ಭಗವಂತನನ್ನು ಆರಾಧನೆ ಮಾಡಿದರೆ ಮಾತ್ರ ಸಾಧ್ಯವಿದೆ. ದೇವಾಲಯಗಳು ಶಾಂತಿ ಸಾಮರಸ್ಯ ಬೆಳೆಸುವ ಪವಿತ್ರ ಕೇಂದ್ರಗಳಾಗಿವೆ. ಇಂತಹ ಸತ್ಕಾರ್ಯ ಗ್ರಾಮದಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ ಎಂದರು.
ಸಾನಿಧ್ಯ ವಹಿಸಿದ್ದ ರಟ್ಟಿಹಳ್ಳಿ ಕಬ್ಬಿಣಕಂತಿಮಠದ ಶಿವಾಚಾರ್ಯ ಶ್ರೀಗಳು ಮಾತನಾಡಿ, ಭಾರತದಲ್ಲಿ ಹಲವಾರು ಧರ್ಮಗಳು ಮತ್ತು ಆಚರಣೆಗಳು ಬೆಳೆದು ಬಂದಿವೆ. ಸತ್ಯ ಸಂಸ್ಕೃತಿ ಮತ್ತು ಆದರ್ಶಗಳನ್ನು ಎತ್ತಿ ಹಿಡಿಯಲು ಈ ನಾಡಿನ ಮಠ ಮಂದಿರಗಳು ಕಾರ್ಯ ಮಾಡುತ್ತಾ ಬಂದಿವೆ. ದೇವಾಲಯಗಳ ಮೇಲಿರುವ ನಂಬಿಗೆ ದೇವರಲ್ಲಿಟ್ಟಿರುವ ಶೃದ್ಧೆ ಅಪಾರ. ಆಧುನಿಕತೆಯ ಹೆಸರಿನಲ್ಲಿ ಜನರ ಭಾವನೆಗಳನ್ನು ಕಲುಷಿತಗೊಳಿಸಬಾರದು. ಗ್ರಾಮಸ್ಥರು ದೇವಾಲಯ ನಿರ್ಮಿಸುವುದರ ಉದ್ದೇಶ ಧರ್ಮದ ದೂರದೃಷ್ಟಿ ಮತ್ತು ಸಾಮಾಜಿಕ ಚಿಂತನೆಗೆ ಸಾಕ್ಷಿಯಾಗಿದೆ ಎಂದರು
ಕಾರ್ಯಕ್ರಮದಲ್ಲಿ ತಾಲೂಕಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ದಾನಪ್ಪ ಚೂರಿ, ಮುಖಂಡರಾದ ಮುತ್ತಣ್ಣ ಶಿಗ್ಗಾವಿ, ಬಸವರಾಜ ಹೊಸಮನಿ, ಫಕ್ಕೀರಪ್ಪ ಕಿಳ್ಳಿ, ಬಸವರಾಜ ವೀರಾಪುರ, ನಾಗರಾಜ್ ಆನ್ವೇರಿ, ಶಿವಪುತ್ರಪ್ಪ ಅಗಡಿ, ರವಿ ಪೂಜಾರ, ಯಲ್ಲಪ್ಪ ಶಿಗ್ಗಾಂವಿ ಸೇರಿದಂತೆ ಇತರರಿದ್ದರು.