ಆದಿನಾಥ ತೀರ್ಥಂಕರ ಬೆಳ್ಳಿ ಮಹೋತ್ಸವ
ಚನ್ನಮ್ಮನ ಕಿತ್ತೂರ,ಮಾ4: ಸಮೀಪದ ಖಾನಾಪೂರ ತಾಲೂಕಿನ ಮಲಪ್ರಭಾ ನದಿದಟ್ಟದ ಪ್ರದೇಶದಲ್ಲಿ ನೆಲೆಸಿರುವ ನಾಡಿನ ಪ್ರಖ್ಯಾತ ಚಾಪಗಾಂವ(ಚಂಪಾವತಿ ನಗರ)ದಲ್ಲಿ ಭಗವಾನ್ ಶ್ರೀ 1008 ಆದಿನಾಥ ತೀರ್ಥಂಕರವರ 25ನೇ ವರ್ಷದ ಬೆಳ್ಳಿ ಮಹೋತ್ಸವ ಹಾಗೂ ಸಮ್ಮೇದ ಶಿಖರ್ಜಿ ವಿಧಾನ ಅದ್ದೂರಿಯಿಂದ ಜರುಗಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ. ಆದಿನಾಥರು 1000 ವರ್ಷಗಳ ಕಾಲ ಕಠಿಣ ತಪಸ್ಸನ್ನು ಮಾಡಿ ಕೈವಲ್ಯ ಜ್ಞಾನವನ್ನು ಪಡೆದರು. ಜಗತ್ತಿಗೆ ಜೈನ ಧರ್ಮದ ತತ್ವಗಳನ್ನು ಸಾರಿದರು. ಸರ್ವರ ಶ್ರೇಯೋಭಿವೃದ್ಧಿಯನ್ನು ಬಯಸುವ ಜೈನ ಧರ್ಮ ಅನಾದಿಯಾದದ್ದು. ಈ ಧರ್ಮದ ತತ್ವಗಳು ವಾಸ್ತವತೆಯ ನೆಲೆಗಟ್ಟಿನ ಮೇಲೆ ಗಟ್ಟಿಯಾಗಿ ಬೇರೂರಿವೆ. ಅಹಿಂಸೆ ಸಾರಿದ ಜೈನ ಧರ್ಮ ವಿಶ್ವಕ್ಕೆ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದ್ದು. ಅಹಿಂಸೆ ಮತ್ತು ದಯೆ ಜೈನ ಧರ್ಮದ ಮೂಲಮಂತ್ರಗಳಾಗಿವೆ. ಆದ್ದರಿಂದ ಮಾನವರಾದ ನಾವು ದಾನ ಮಾಡಬೇಕು. ದಾನ ಮಾಡಿದ್ದು ಮನೆಯಲ್ಲಿ ದೀಪ ಹಚ್ಚಿದಂತೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಉದ್ಯಮಿ ಪ್ರಮೋದ ಕೊಚೇರಿ ಮಂದಿರದ ಸವಿಸ್ತಾರ ಮಾಹಿತಿ ತಿಳಿಸಿದರು.
ಧರ್ಮಿಯರ ಬಹುದಿನಗಳ ಬೇಡಿಕೆಯಾಗಿದ್ದ 108 ಶ್ರೀ ಸೌಭಾಗ್ಯ ಮುನಿಮಹಾರಾಜರ ಪಾದುಕೆ ನಂದಗಡದ ಸಿದ್ದಾರ್ಥ ಕಬ್ಬೂರ ಇವರಿಂದ ಸ್ಥಾಪನೆಯಾಯಿತು.
ಖಾನಾಪೂರ ಜೈನ ಯುವ ಸಂಘಟನೆಯವರಿಂದ ಮಂದಿರ ಮೇಲಿರುವ ಶಿಖರದ ಮೇಲೆ ಕಳಸಾರೋಹಣ ಜರುಗಿತು.
ಶ್ರಾವಕರಿಂದ ಭಗವಂತರಿಗೆ ಕುಂಭ ಜಲಾಭಿಷೇಕ ನಡೆಯಿತು.
ಇದಕ್ಕೂ ಪೂರ್ವ ಸಹಸ್ರಾರು ಜೈನ ಧರ್ಮಿಯರು ಮಂದಿರದಲ್ಲಿ ಭಗವಂತರಿಗೆ ಪಂಚಾಮೃತ ಅಭಿಷೇಕ, ಧ್ವಜಾರೋಹಣ, ದೀಪ ಪ್ರಜ್ವಲನೆ ನೆರವೇರಿಸಿದರು.
ಈ ಕಾರ್ಯಕ್ರಮವು ಶ್ರಾವಕ ಅಭಯ ಅವಲಕ್ಕಿಯವರ ಮುಂದಾಳತ್ವದಲ್ಲಿ ಜರುಗಿತು. ಪ್ರತಿಷ್ಟಾಚಾರ್ಯ ವಿದ್ಯಾಸಾಗರ ಉಪಾಧ್ಯೆ ಇವರ ತಂಡದವರಿಂದ ಪೂಜೆ ನೇರವೇರಿತು.
ಚೇತನ ಬೆಂಡಿಗೇರಿ, ಕೋಮಲ ಹಾರೂಗೊಪ್ಪ, ರಾಜಕುಮಾರ ಪಾಟೀಲ, ಸಚಿನ್ ಕಲಘಟಗಿ, ದೀಪಕ ಕೊಚೇರಿ, ಸಂದೀಪ ಶೇಬಣ್ಣವರ, ಡಿ.ಡಿ.ಪಾಟೀಲ, ಅಶೋಕ ಬೆಂಡಿಗೇರಿ, ಭೂಷಣ ದಡೋತ್ತಿ, ರಾಜು ಕಂಚಿ, ರಾಜು ಜಕ್ಕಣ್ಣವರ, ರಾಜು ಬೆಂಡಿಗೇರಿ, ಅನಿಲ್ ಕಬ್ಬೂರ, ವೃಷಭ ಪಾಟೀಲ, ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ, ಸರ್ವಸದಸ್ಯ, ಸುತ್ತಮುತ್ತಲಿನ ಗ್ರಾಮಸ್ಥರು, ಗಣ್ಯರು, ಗ್ರಾಮದ ಹಿರಿಯರು, ಖಾನಾಪೂರ-ಬೆಳಗಾವ ಜೈನ ಯುವ ಸಂಘಟನೆಯವರು. ಜಿಲ್ಲೆ ಹಾಗೂ ರಾಜ್ಯ, ಹೊರರಾಜ್ಯಗಳಿಂದ ಜೈನ ಶ್ರಾವಕ-ಶ್ರಾವಕೀಯರು ಭಾಗಿಯಾಗಿದ್ದರು.