ಸ್ವಾವಲಂಬಿ ಶಿಕ್ಷಣಕ್ಕೆ ಮೆಚ್ಚುಗೆ-ಅರ್ಚನಾ
ಕೋಲಾರ,ಮಾ,೪- ಪ್ರೌಢಶಾಲಾ ಮಕ್ಕಳಿಗೆ ನ್ಯಾಷನಲ್ ಸ್ಕಿಲ್ ಕ್ವಾಲಿಟಿ ಪ್ರೇಂ ವರ್ಕ್‌ನಡಿ ಹಿಂದಿ ಬದಲಿಗೆ ಉದ್ಯೋಗ ಕೌಶಲ್ಯ ಬೆಳೆಸುವ ಆಟೋಮೊಬೈಲ್, ಮೆಕಾನಿಕಲ್, ಮಾಹಿತಿ ತಂತ್ರಜ್ಞಾನ ಶಿಕ್ಷಣ ನೀಡುವ ಪ್ರಯತ್ನ ಸ್ವಾವಲಂಬಿ ಶಿಕ್ಷಣಕ್ಕೆ ಮಾದರಿಯಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಜಂಟಿ ಕಾರ್ಯದರ್ಶಿ ಅರ್ಚನಾ ಶರ್ಮ ಅವಸ್ಥಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕೇಂದ್ರ ಯೋಜನೆಗಳ ಪ್ರಗತಿ ಹಾಗೂ ಯೋಜನೆಗಳಿಂದಾಗಿರುವ ಶೈಕ್ಷಣಿಕ,ಸಾಮಾಜಿಕ ಪ್ರಗತಿಯ ಕುರಿತು ಪರಿಶೀಲನೆ ನಡೆಸಲು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಅಧಿಕಾರಿಗಳ ತಂಡದ ನೇತೃತ್ವ ವಹಿಸಿ ಜಿಲ್ಲೆಗೆ ಆಗಮಿಸಿದ್ದ ಅವರು, ನರಸಾಪುರ ಕರ್ನಾಟಕ ಪಬ್ಲಿಕ್ ಶಾಲೆ,ರಾಮಸಾಗರದ ಕಸ್ತೂರಿಬಾ ಗಾಂಧಿ ಬಾಲಿಕಾ ವಿದ್ಯಾಲಯಗಳಿಗೆ ಭೇಟಿ ನೀಡಿ ಮಕ್ಕಳಿಗೆ ಸ್ವಾವಲಂಬಿ ಬದುಕಿಗೆ ಹಾದಿ ತೋರುವ ಪ್ರಯತ್ನ ಮೆಚ್ಚುವಂತದ್ದು ಅಭಿಪ್ರಾಯ ಪಟ್ಟರು.
ಕೆಪಿಎಸ್ ಶಾಲೆಯಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ವೀಕ್ಷಿಸಿ, ಕೌಶಲ್ಯಾಧಾರಿತ ಶಿಕ್ಷಣದ ಕುರಿತು ಮಕ್ಕಳೊಂದಿಗೆ ಸಂವಾದ ನಡೆಸಿದರು.ಇದೇ ಸಂದರ್ಭದಲ್ಲಿ ಕೆಪಿಎಸ್ ಶಾಲೆಯ ಪೂರ್ವ ಪ್ರಾಥಮಿಕ ಶಾಲೆಯ ಮಕ್ಕಳ ಇಂಗ್ಲೀಷ್ ಕಲಿಕೆ, ಶಿಕ್ಷಕರ ವಿದ್ಯಾರ್ಹತೆ, ಕಲಿಕಾ ವಿಧಾನ ಮತ್ತಿತರ ಅಂಶಗಳ ಕುರಿತು ಮಾಹಿತಿ ಸಂಗ್ರಹಿಸಿದರು.
ಜಿಲ್ಲೆಯ ರಾಮಸಾಗರದ ಕಸ್ತೂರಿಬಾ ಗಾಂಧಿ ಬಾಲಿಕಾ ವಿದ್ಯಾಲಯಕ್ಕೆ ಭೇಟಿ ನೀಡಿದ ಕೇಂದ್ರ ತಂಡದ ಅಧಿಕಾರಿಗಳು, ಉಭಯ ಮಾಧ್ಯಮ ತರಗತಿ ವೀಕ್ಷಿಸಿ ಮಕ್ಕಳ ಕಲಿಕಾ ಪ್ರಗತಿ ಪರೀಕ್ಷಿಸಿದರು. ಕಸ್ತೂರಿಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ ಮಾದರಿ-೧ ರಲ್ಲಿ ೬ರಿಂದ ೮ನೇ ತರಗತಿ ಮಕ್ಕಳಿಗೆ ಊಟ,ವಸತಿ ಶಾಲೆ ಸೌಲಭ್ಯ ಒದಗಿಸಿರುವ ಕುರಿತು ಮಾಹಿತಿ ಸಂಗ್ರಹಿಸಿ ಇದೊಂದು ದಿಟ್ಟ ಹೆಜ್ಜೆ ಎಂದರು.
ಅದೇ ರೀತಿ ಮಾದರಿ-೪ ರಡಿ ೯ ರಿಂದ ೧೨ ತರಗತಿ ಮಕ್ಕಳಿಗೆ ಊಟ ವಸತಿ ಸೌಲಭ್ಯಗಳನ್ನು ಗಮನಿಸಿದರು. ಶಾಲೆ,ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್, ಕ್ಷೀರಭಾಗ್ಯ ಮತ್ತಿತರ ಯೋಜನೆಗಳ ನಿರ್ವಹಣೆಯನ್ನು ಶ್ಲಾಘಿಸಿದರು.
ರಾಜ್ಯದಿಂದ ಸಮಗ್ರ ಶಿಕ್ಷಣ ಕರ್ನಾಟಕ ನಿರ್ದೇಶಕ ಮಾದೇಗೌಡ, ಡಿಎಸ್‌ಆರ್‌ಟಿ ನಿರ್ದೇಶಕರು ಸುಮಂಗಲ, ಹಿರಿಯ ಕಾರ್ಯಕ್ರಮ ಅಧಿಕಾರಿ ಶ್ರೀಕಾಂತ್ ಹೆಗಡೆ, ಡಿಎಸ್‌ಇಆರ್‌ಟಿ ಹಿರಿಯ ಕಾರ್ಯಕ್ರಮ ಅಧಿಕಾರಿ ಗಂಗಾಧರ್, ಉಪನಿರ್ದೇಶಕ ಜಯರಾಮರೆಡ್ಡಿ, ಎಸ್‌ಎಸ್‌ಕೆ ಕಾಯಕ್ರಮ ಅಧಿಕಾರಿಗಳಾ ಸಾಹಿರಾ ಬಾನು, ಮಂಜುಳಾ, ಪ್ರಮೀತಾ ಅಧೋನಿ, ಡಯಟ್ ಪ್ರಾಂಶುಪಾಲ ಕೆ.ಎನ್.ಜಯಣ್ಣ, ಡಿವೈಪಿಸಿಗಳಾದ ಗುರುಮೂರ್ತಿ, ಚಂದ್ರಕಲಾ, ಬಿಇಒ ಕನ್ನಯ್ಯ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಎವೈಪಿಸಿ ಮೋಹನ್ ಬಾಬು ಮತ್ತಿತರರಿದ್ದರು.