ವಿದ್ಯಾರ್ಥಿಗಳಿಗೆ ವಂಚನೆ-ಕ್ರಮಕ್ಕೆ ಒತ್ತಾಯ
ಕೋಲಾರ ಮಾ.೪-:ಲಕ್ಷಾಂತರ ರೂಪಾಯಿ ಶುಲ್ಕ ಪಡೆದು ನೀಟ್, ಸಿ.ಇ,ಟಿ ತರಬೇತಿ ನೀಡುತ್ತೇವೆಂದು ವಿದ್ಯಾರ್ಥಿಗಳನ್ನು ವಂಚಸುತ್ತಿರುವ ಆಕಾಶ್ ಬೈಜುಸ್ ಸಂಸ್ಥೆ ವಿರುದ್ದ ಕ್ರಿಮಿನಲ್ ಮೊಕದಮ್ಮೆ ದಾಖಲು ಮಾಡಿ ನೊಂದಿರುವ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ರೈತ ಸಂಘವು ಶಿಕ್ಷಣ ಸಂಸ್ಥೆ ಮುಂದೆ ಪ್ರತಿಭಟಿಸಿ ಆರಕ್ಷಕ ಉಪನಿರೀಕ್ಷಕರಾದ ಸಹೀದ್ ಅಹಮದ್ ಮುಖಾಂತರ ಜಿಲ್ಲಾಧಿಕರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಶಿಕ್ಷಣ ವ್ಯವಸ್ಥೆ ವ್ಯಾಪಾರದ ಕಾರ್ಪೊರೇಟ್ ಕಂಪನಿಗಳ ಕಪಿ ಮುಷ್ಟಿಯಲ್ಲಿ ಸಿಲುಕಿ ಕೋಟ್ಯಾಂತರ ಪೋಷಕರ ಕನಸು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚಲ್ಲಾಟ ವಾಡುತ್ತಿದ್ದರು ಶಿಕ್ಷಣ ವ್ಯವಸ್ಥೆ ಹಾಗೂ ಕಾರ್ಪೋರೇಟ್ ಶಿಕ್ಷಣ ಸಂಸ್ಥೆ ಹೆಸರಿನಲ್ಲಿ ತರಬೇತಿ ನೀಡುವ ಪರವಾನಿಗೆ ಇಲ್ಲದ ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ಶಿಕ್ಷಣ ಸಚಿವರು ವಿಫಲವಾಗಿದ್ದಾರೆಂದುಅವ್ಯವಸ್ಥೆ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ನಾಯಿ ಕೊಡೆಗಳಂತೆ ತಲೆ ಎತ್ತಿರುವ ಖಾಸಗಿ ಶಾಲಾ ಕಾಲೇಜುಗಳು ಪ್ರಥಮ ಮತ್ತು ದ್ವಿತೀಯ ಪಿಯುಸಿ (ವಿಜ್ಞಾನ) ತರಗತಿಗಳಿಗೆ ಹಾಜರಾತಿ ದಾಖಲು ಮಾಡಿಕೊಳ್ಳುವಾಗ ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ನಮ್ಮ ಶಾಲೆಗೆ ಸೇರಿಸಿ ನಿಮ್ಮ ಮಕ್ಕಳ ಭವಿಷ್ಯ ನಿಮ್ಮ ಕನಸನ್ನು ನನಸು ಮಾಡಲು ನೀಟ್, ಸಿಇಟಿ ವೃತ್ತಿಪರ ಕೋರ್ಸುಗಳಿಗೆ ಉಚಿತವಾಗಿ ತರಬೇತಿ ನೀಡುತ್ತೇವೆಂದು ದಾಖಲು ಮಾಡಿಕೊಂಡು ಆ ನಂತರ ಯಾವುದೇ ತರಬೇತಿ ಇಲ್ಲದೆ ವಂಚನೆ ಮಾಡುವ ಕಾಲೇಜುಗಳ ಹಗಲು ದರೋಡೆಗೆ ಕಡಿವಾಣ ಹಾಕುವಲ್ಲಿ ಶಿಕ್ಷಣ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕಿಡಿಕಾರಿದರು.
ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಜಿಲ್ಲಾಡಳಿತ ಮುಂದೆ ಬಂದು ವಂಚಿತ ರೈತ ಕೂಲಿ ಕಾರ್ಮಿಕರ ಮಕ್ಕಳಿಗೆ ನ್ಯಾಯ ಕೊಡಿಸಬೇಕು. ಇಲ್ಲವಾದರೆ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಂಡಿರುವಂತ ನೊಂದಿರುವ ವಿದ್ಯಾರ್ಥಿಗಳಿಂದ ಆತ್ಮಹತ್ಯೆಗಳು ನಡೆದು ಹೋಗುವ ಮೊದಲು ಜಿಲ್ಲಾಡಳಿತ ಎಚ್ಚೆತು ಕೊಳ್ಳ ಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ತೊಂದರೆಯಾಗದ ರೀತಿ ಕ್ರಮ ವಹಿಸಿ ಒಂದು ವೇಳೆ ವಿದ್ಯಾರ್ಥಿಗಳಿಗೆ ತರಬೇತಿ ನೀಡದೇ ಇದ್ದರೆ, ಆಕಾಶ್ ಬೈಜುನ್ ಶಿಕ್ಷಣ ಸಂಸ್ಥೆ ವಿರುದ್ದ ಕ್ರಿಮಿನಲ್ ಮೊಕದಮ್ಮೆ ದಾಖಲು ಮಾಡುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಮಂಗಸಂದ್ರ ತಿಮ್ಮಣ್ಣ, ಮುದುವಾಡಿ ಚಂದ್ರಪ್ಪ, ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ನೂರಾರು ಪೋಷಕರು, ವಿದ್ಯಾರ್ಥಿಗಳು, ಹಾಜರಿದ್ದರು.