ಸ್ಮಶಾನ ಜಾಗಗಳ ಸಮಸ್ಯೆ ಬಗೆಹರಿಸಲು ಆಗ್ರಹ
ಕೋಲಾರ,ಮಾ,೪- ಜಿಲ್ಲೆಯಾದ್ಯಂತ ಬಹುತೇಕ ಕಡೆಗಳಲ್ಲಿ ಸ್ಮಶಾನಕ್ಕೆ ಜಾಗವಿಲ್ಲದೆ ತೀವ್ರ ಸಮಸ್ಯೆ ಎದುರಿಸುತ್ತಿದ್ದು, ಜಿಲ್ಲಾಡಳಿತ ಕೂಡಲೇ ಎಚ್ಚೆತ್ತು ಸಮಸ್ಯೆ ಬಗೆಹರಿಸಬೇಕೆಂದು ದಲಿತ ಸಮಾಜ ಸೇನೆ ರಾಜ್ಯಾಧ್ಯಕ್ಷ ಸೂಲಿಕುಂಟೆ ಆನಂದ್ ಆಗ್ರಹಿಸಿದರು.
ನಗರದ ನಚಿಕೇತನ ನಿಲಯದಲ್ಲಿ ಅವರು ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಕಡೆ ಸ್ಮಶಾನಗಳು ಒತ್ತುವರಿಯಾಗಿವೆ. ಇನ್ನೂ ಕೆಲವು ಕಡೆ ಜಾಗ ಇಲ್ಲದಾಗಿದ್ದು, ಕೆಲವು ಕಡೆ ಸ್ಮಶಾನದ ದಾರಿಗಳೂ ಒತ್ತುವರಿಯಾಗಿವೆ ಆದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕ್ಕೆ ಮುಂದಾಗದಿರುವುದು ಖಂಡನೀಯ ಎಂದರು.
ಸ್ಮಶಾನ ಜಾಗದ ಸಮಸ್ಯೆಗಳಿಗೆ ತಾಲೂಕು ಆಡಳಿತ, ಎಸಿ, ಡಿಸಿ ಕಚೇರಿಯಲ್ಲಿ ಸಾರ್ವಜನಿಕರು ಸಲ್ಲಿಸಿರುವಂತ ಅರ್ಜಿಗಳು ಧೂಳು ಹಿಡಿಯುತ್ತಿವೆ. ಈ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಎಲ್ಲಾ ತಾಲೂಕು ಆಡಳಿತಗಳ ಸಭೆ ಕರೆದು ವಿಶೇಷ ತಂಡ ರಚಿಸಿ ಯಾವ ಗ್ರಾಮಗಳಲ್ಲಿ ಸಮಸ್ಯೆಯಿದೆ ಎನ್ನುವುದನ್ನು ಗುರುತಿಸಿ ಪರಿಹರಿಸ ಬೇಕೆಂದು ಒತ್ತಾಯಿಸಿದರು.
ಕೆಜಿಎಫ್‌ನಲ್ಲಿ ಬ್ರಿಟೀಷರ ಕಾಲದಲ್ಲಿ ನಿರ್ಮಿಸಿರುವ ಸ್ಮಶಾನ ಹಾಗೆಯೇ ಇದೆ. ೨-೩ ಎಕರೆಯಲ್ಲಿ ಮಾತ್ರವೇ ಸ್ಮಶಾನವಿದ್ದು, ನಗರ ಪ್ರದೇಶದಲ್ಲಿ ಲಕ್ಷಾಂತರ ಮಂದಿ ಇರುವ ಕಾರಣ ಅಂತ್ಯ ಸಂಸ್ಕಾರಕ್ಕೆ ತೊಂದರೆಯಾಗುತ್ತಿದೆ. ಅಸ್ತಿಪಂಜರಗಳನ್ನು ಹೊರತೆಗೆದು ಅಂತ್ಯಸಂಸ್ಕಾರ ಮಾಡಲಾಗುತ್ತಿದೆ. ಬಿಜಿಎಂಎಲ್‌ನಲ್ಲಿ ಸಾವಿರಾರು ಎಕರೆಯಿದ್ದು, ಜಿಲ್ಲಾಡಳಿತ ಮನಸ್ಸು ಮಾಡಿ ಪ್ರತಿ ಸಮುದಾಯಕ್ಕೆ ತಲಾ ೨ ಎಕರೆ ಮಂಜೂರಾತಿ ಮಾಡಿದಲ್ಲಿ ಅನುಕೂಲವಾಗಲಿದೆ ಎಂದರು.
ಜಿಲ್ಲೆಯಲ್ಲಿ ವಿವಿಧ ತಾಲ್ಲೂಕುಗಳಲ್ಲಿರುವ ಸ್ಮಶಾನ ಜಾಗದ ಸಮಸ್ಯೆ ಬಗೆ ಹರಿಸುವಂತೆ ಒತ್ತಾಯಿಸಿ ಅನೇಕ ಬಾರಿ ಹೋರಾಟ ನಡೆಸಿದರೂ ನೀಡದೇ ಇರುವುದು ಖಂಡನೀಯ. ಕೂಡಲೇ ಸರ್ವೇ ಕಾರ್ಯ ನಡೆಸಿ ಸ್ಮಶಾನಕ್ಕೆ ಜಾಗ ಮಂಜೂರು ಮಾಡದೇ ಇದ್ದರೆ ಸಂಘಟನೆಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಗೌತಮ್, ಮುಖಂಡರಾದ ನಕ್ಕನಹಳ್ಳಿ ವೆಂಕಟೇಶ್, ಆಟೋ ಕರ್ಣ, ಸರವಣ, ಮಿಟ್ಟಿಗಾನಹಳ್ಳಿ ಮಂಜು, ಮುನಿರಾಜು ಮುಂತಾದವರಿದ್ದರು.