ಔರಾದ್‍ನಲ್ಲಿ ಫಲಾನುಭವಿಗಳ ಸಂಪರ್ಕ ಅಭಿಯಾನ ಕಾರ್ಯಾಗಾರ
ಬೀದರ:ಮಾ.4:ಭಾರತೀಯ ಜನತಾ ಪಕ್ಷ ಔರಾದ(ಬಿ) ಮಂಡಲ ವತಿಯಿಂದ ಮಾರ್ಚ್ 1 ರಂದು ಪಟ್ಟಣದ ಪಕ್ಷದ ಕಾರ್ಯಾಲಯದ ಆವರಣದಲ್ಲಿ ಫಲಾನುಭವಿಗಳ ಸಂಪರ್ಕ ಅಭಿಯಾನದ ಕುರಿತು ಪಕ್ಷದ ಬೂತ್ ಪ್ರಮುಖರಿಗಾಗಿ ಒಂದು ದಿನದ ಕಾರ್ಯಾಗಾರ ನಡೆಸಲಾಯಿತು.
ಮಾಜಿ ಶಾಸಕರಾದ ಗುಂಡಪ್ಪ ಬಿರಾದಾರ ಅವರು ಸಸಿಗೆ ನೀರೆರೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ರಾಷ್ಟ್ರದ ಬಡವರು, ರೈತರು, ಕೂಲಿ ಕಾರ್ಮಿಕರು, ಮಹಿಳೆಯರು, ಯುವಕರಿಗಾಗಿ ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಈ ಎಲ್ಲ ಯೋಜನೆಗಳನ್ನು ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಪ್ರಚಾರ ಮಾಡಿ ಸರ್ಕಾರದ ಯೋಜನೆಗಳನ್ನು ಜನತೆಗೆ ತಲುಪುವಂತೆ ಮಾಡಬೇಕೆಂದು ಹೇಳಿದರು.
ಬೂತ್ ಜಯಿಸಿದಲ್ಲಿ ಮಾತ್ರ ಚುನಾವಣೆ ಗೆಲ್ಲಲು ಸಾಧ್ಯವಿದೆ. ಫಲಾನುಭವಿಗಳ ಸಂಪರ್ಕ ಅಭಿಯಾನದ ಯಶಸ್ವಿಯಾಗಿ ನಡೆಸಿದಲ್ಲಿ ಮಾನ್ಯ ಪ್ರದಾನಿಯವರ ಆಶಯದಂತೆ ಬೂತ್ ಗೆಲ್ಲಲು ಸಹಕಾರಿಯಾಗಲಿದೆ. ಕಾರ್ಯಕರ್ತರು ಪ್ರಧಾನಿಯವರನ್ನು ಗೆಲ್ಲಿಸಲು ಇನ್ನಷ್ಟು ಚುರುಕಿನಿಂದ ಕೆಲಸ ಮಾಡಬೇಕೆಂದು ತಿಳಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕಿರಣ ಪಾಟೀಲ ಅವರು ಮಾತನಾಡಿ, ಪ್ರತಿ ಬೂತ್‍ನಲ್ಲಿ ಫಲಾನುಭವಿಗಳ ಸಂಪರ್ಕ ಅಭಿಯಾನವನ್ನು ಯಶಸ್ವಿಗೊಳಿಸಲು ಕಾರ್ಯಕರ್ತರು ಮಾಡಬೇಕಾದ ಕೆಲಸ ಕಾರ್ಯಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಡಲ ಅಧ್ಯಕ್ಷರಾದ ರಾಮಶೆಟ್ಟಿ ಪನ್ನಾಳೆ ಮಾತನಾಡಿ, ಪ್ರತಿ ಮನೆಯಲ್ಲಿ ಒಂದಿಲ್ಲೊಂದು ವಿಧವಾಗಿ ಕೇಂದ್ರ ಸರ್ಕಾರದ ಸೌಲಭ್ಯ ಪಡೆದವರಿದ್ದಾರೆ. ಕಾರ್ಯಕರ್ತರು ಪ್ರತಿ ಮನೆಗೆ ಭೇಟಿ ನೀಡಿ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ತಿಳಿಸುವ ಜೊತೆಗೆ ಮುಂದಿನ ದಿನಗಳಲ್ಲಿ ನರೇಂದ್ರ ಮೋದಿಯವರನ್ನು ಮೂರನೇ ಅವಧಿಗೆ ಪ್ರಧಾನಿಯನ್ನಾಗಿಸಲು ಪಕ್ಷಕ್ಕೆ ಆಶೀರ್ವಾದ ಮಾಡಬೇಕೆಂದು ಮನವಿ ಮಾಡಬೇಕು. ಪ್ರಧಾನಿಯವರ ಆಶಯದಂತೆ ರಾಷ್ಟ್ರದಲ್ಲಿ ಪಕ್ಷವನ್ನು ಅಭೂತಪೂರ್ವವಾಗಿ ಗೆಲ್ಲಿಸಲು ಎಲ್ಲರೂ ಪ್ರಯತ್ನ ವಹಿಸಬೇಕು ಎಂದರು.
ಜಿಲ್ಲಾ ಪ್ರಕೋಷ್ಟಗಳ ಸಂಚಾಲಕರಾದ ಶ್ರೀಕಾಂತ ಮೋದಿ ಅವರು ಕಾರ್ಯಾಗಾರ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿಯಾಗಿ ನೇಮಕರಾದ ಕಿರಣ ಪಾಟೀಲ ಅವರನ್ನು ಮಂಡಲ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಾಗಾರದಲ್ಲಿ ಮುಖಂಡರಾದ ಖಂಡೋಬಾ ಕಂಗಟೆ, ಧೊಂಡಿಬಾ ನರೋಟೆ, ಪ್ರಕಾಶ ಅಲ್ಮಾಜೆ, ರಮೇಶ ಬಿರಾದಾರ, ಫಲಾನುಭವಿ ಪ್ರಕೋಷ್ಟದ ತಾಲ್ಲೂಕು ಸಂಚಾಲಕರಾದ ಅಶೋಕ ಅಲ್ಮಾಜೆ, ಸಹ ಸಂಚಾಲಕರಾದ ಪ್ರವೀಣ ಕಾರಬಾರಿ, ಅಶೋಕ ಮೇತ್ರೆ, ಗುಂಡಪ್ಪ ಬಿರಾದಾರ, ಪಕ್ಷದ ಮುಖಂಡರು, ಬೂತ್ ಅಧ್ಯಕ್ಷರು, ಪ್ರಮುಖರು, ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.