ಉಸ್ತುವಾರಿ ಸಚಿವರಿಂದ ಆಡಳಿತ ದುರ್ಬಳಕೆ: ಸೋಮನಾಥ ಪಾಟೀಲ
ಬೀದರ್: ಮಾ.4:ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಆಡಳಿತದ
ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸೋಮನಾಥ ಪಾಟೀಲ್ ಗಂಭೀರ ಆರೋಪ ಹೊರಿಸಿದ್ದಾರೆ.
ಮಾ.7ರಂದು ಬಸವಕಲ್ಯಾಣದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ. ಮಾಧ್ಯಮಗಳಲ್ಲಿ ಬಂದ ವರದಿಗಳ ಪ್ರಕಾರ ಇದು ಮಠಾಧೀಶರ ಒಕ್ಕೂಟ ಹಾಗೂ ಬಸವಪರ ಸಂಘಟನೆಗಳಿಂದ ಅಯೋಜಿಸಿದ ಕಾರ್ಯಕ್ರಮ. ಇದಕ್ಕೆ ನಮ್ಮದೇನೂ ತಕರಾರಿಲ್ಲ ಹಾಗೂ ಅಭ್ಯಂತರವೂ ಇಲ್ಲ. ಆದರೆ ಈ ಕುರಿತ ಪೂರ್ವಭಾವಿ ಸಭೆಯಲ್ಲಿ ಡಿಸಿ, ಎಸ್ಪಿ ಸೇರಿದಂತೆ ಅಧಿಕಾರಿಗಳ ದಂಡೇ ಪಾಲ್ಗೊಂಡಿರುವುದು ಸೋಜಿಗದ ಸಂಗತಿ. ಸಚಿವರು ಒತ್ತಡ ಹೇರಿ ಆಡಳಿತದ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳಿಗೆ ಇದು ಪುಷ್ಟಿ ನೀಡಿದೆ ಎಂದು ಕಿಡಿಕಾರಿದ್ದಾರೆ.
ಸದ್ಯ ಚುನಾವಣೆ ಸಮಯವಿದೆ. ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇಂಥ ಸಂದರ್ಭದಲ್ಲಿ ಜಿಲ್ಲೆಯ ಹಿರಿಯ ಅಧಿಕಾರಿಗಳು ನಿಷ್ಪಕ್ಷಪಾತತೆಯನ್ನು ಪ್ರದರ್ಶಿಸಬೇಕು. ವಿಶೇಷವಾಗಿ ಜಿಲ್ಲಾಧಿಕಾರಿಗಳು ಜಿಲ್ಲಾ ಚುನಾವಣಾಧಿಕಾರಿಗಳು ಸಹ ಆಗಿರುತ್ತಾರೆ. ಚುನಾವಣೆ ಸಮಯದಲ್ಲಿ ಎಂತಹ ವೇದಿಕೆ ಹಂಚಿಕೊಳ್ಳಬೇಕು ಎಂಬ ಅರಿವು ಅಧಿಕಾರಿಗಳು ಹೊಂದಿರಬೇಕು.
ಯಾರದೋ ಒತ್ತಡ, ಪ್ರಭಾವಕ್ಕೆ ಒಳಗಾಗಿ ಏನು ಮಾಡಿದರೂ ನಡೆಯುತ್ತದೆ ಎಂಬ ಧೋರಣೆ ಸರಿಯಲ್ಲ. ನಿಷ್ಪಕ್ಷಪಾತ, ಪಾರದರ್ಶಕ ಚುನಾವಣೆ ಬಗ್ಗೆ ಜನಜಾಗೃತಿ ಮೂಡಿಸುವ ಅಧಿಕಾರಿಗಳು ಖುದ್ದು ಏನು ಮಾಡುತ್ತಿದ್ದಾರೆ ಎಂಬ ಜನಸಾಮಾನ್ಯರ ಪ್ರಶ್ನೆಗೆ ಉತ್ತರ ನೀಡಬೇಕು. ಇಂತಹ ಬೆಳವಣಿಗೆಗೆ ಕಡಿವಾಣ ಬೀಳದಿದ್ದರೆ ಪಕ್ಷವು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಬೇಕಾಗುವುದು ಎಂದು ಎಚ್ಚರಿಸಿದ್ದಾರೆ.
ಎಷ್ಟು ಹಣ ಕೊಟ್ಟಿರಿ ತಿಳಿಸಿ:
ನೂತನ ಅನುಭವ ಮಂಟಪ ಕಾಮಗಾರಿಗೆ ಅನುದಾನ ಬಿಡುಗಡೆ ವಿಷಯದಲ್ಲಿ ಕೆಲವರು ತಪ್ಪು ಮಾಹಿತಿ ನೀಡುತ್ತಿದ್ದಾರೆ. ವಿಷಬೀಜ ಬಿತ್ತುತ್ತಿದ್ದಾರೆ ಎಂಬ ಸಚಿವ ಈಶ್ವರ ಖಂಡ್ರೆ ಅವರು ನೀಡಿರುವ ಹೇಳಿಕೆ ಅರ್ಥಹೀನವಾಗಿದೆ. ಬಸವಕಲ್ಯಾಣ ಶಾಸಕರಾದ ಶರಣು ಸಲಗರ ಅವರು ಈ ಬಗ್ಗೆ ಸುಳ್ಳು ಹೇಳಿಕೆ ನೀಡಿದ್ದಾರೆ ಎಂದಿರುವುದು ಖಂಡನೀಯ. ಈ ವಿಷಯದಲ್ಲಿ ಸ್ವತಃ ಈಶ್ವರ ಖಂಡ್ರೆ ಸಮಾಜಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಂತಿದೆ. ಅನುಭವ ಮಂಟಪ ಕಾಮಗಾರಿಗೆ 200 ಕೋಟಿ ರೂ. ಅನುದಾನ ಹಿಂದಿನ ಬಿಜೆಪಿ ಸರ್ಕಾರ ಬಿಡುಗಡೆ ಮಾಡಿದೆ. ಅದರಲ್ಲೇ ಕಾಮಗಾರಿ ನಡೆಯುತ್ತಿದೆ.
ಕಾಂಗ್ರೆಸ್ ಸರ್ಕಾರ ಬಂದ ನಂತರ ಈ ಕಾಮಗಾರಿಗಾಗಿ ಬಿಕೆಡಿಬಿಗೆ ಇದುವರೆಗೆ ನಯಾಪೈಸೆ ಹಣ ಬಿಡುಗಡೆ ಆಗಿಲ್ಲ ಎಂದು ಶಾಸಕರು ಹೇಳಿರುವುದರಲ್ಲಿ ತಪ್ಪೇನಿದೆ? ಹಣ ಬಿಡುಗಡೆ ಆಗಿದ್ದಾದರೆ ಸಚಿವರು ಮಾಹಿತಿ ಬಹಿರಂಗಪಡಿಸಲಿ. ಯಾವಾಗ ಎಷ್ಟು ಅನುದಾನ ಬಂತು ಎಂಬ ವಿವರ ಜನರಿಗೆ ಮಾಧ್ಯಮಗಳ ಮುಖಾಂತರ ತಿಳಿಸಲಿ ಎಂದು ಸವಾಲು ಹಾಕಿದ್ದಾರೆ.
ವೈದ್ಯಕೀಯ ಮಂತ್ರಿಗೆ ವಜಾಗೊಳಿಸಿ:
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಹಾಗೂ ವಿಧಾನಸೌಧದಲ್ಲಿ ಪಾಕ್ ಪರ ಕೂಗಿದ ಘೋಷಣೆ ಸಿಲ್ಲಿ ವಿಷಯ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ನೀಡಿದ ಹೇಳಿಕೆ ಖಂಡನೀಯ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ಇಂಥ ಬೇಜವಾಬ್ದಾರಿ ಹೇಳಿಕೆ ನೀಡಿರುವುದು ಅಚ್ಚರಿ ಮೂಡಿಸಿದೆ. ಕಾಂಗ್ರೆಸ್ ನವರ ಸಂಸ್ಕøತಿ, ಮನಸ್ಥಿತಿ ಹೇಗಿದೆ ಎಂಬುದಕ್ಕೆ ಈ ಹೇಳಿಕೆ ತಾಜಾ ಉದಾಹರಣೆಯಾಗಿದೆ. ಸಚಿವರು ನೀಡಿದ ಈ ಹೇಳಿಕೆ ಸಮಾಜಘಾತುಕರಿಗೆ, ಉಗ್ರರಿಗೆ, ದೇಶದ್ರೋಹಿಗಳಿಗೆ ಕುಮ್ಮಕ್ಕು ನೀಡುತ್ತದೆ. ಇವರು ಬೇಷರತ್ ನಾಡಿನ ಜನತೆಗೆ ಕ್ಷಮೆಯಾಚಿಸಬೇಕು. ಇವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.