ಕರವೇ ವತಿಯಿಂದ ಕನ್ನಡ ನಾಮಫಲಕ ಕಡ್ಡಾಯ ಎರಡನೇ ಹಂತದ ಹೋರಾಟ ನಾಳೆಯಿಂದ
ಬೀದರ:ಮಾ.4: ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮಾರ್ಚ್ 5 ರಂದು ಪರಭಾಷೆ ನಾಮಫಲಕ ಕಿತ್ತೊಗೆದು ಕನ್ನಡ ನಾಮಫಲಕ ಅಳವಡಿಸುವಂತೆ ನಗರದಲ್ಲಿ ಹೋರಾಟ ಮಾಡಲಾಗುತ್ತಿದೆ. ಆದ್ದರಿಂದ ಶಾಲಾ-ಕಾಲೇಜು, ಹೊಟೇಲ್, ಬಟ್ಟೆ ಅಂಗಡಿ, ಮಾಲ್‍ಗಳು, ಆಸ್ಪತ್ರೆಗಳು ಸೇರಿದಂತೆ ಇನ್ನಿತರ ಅಂಗಡಿಗಳ ಮೇಲೆ ಶೇ. 60 ರಷ್ಟು ಕನ್ನಡ ಭಾಷೆಯುಳ್ಳ ನಾಮಫಲಕ ಅಳವಡಿಸಬೇಕು. ಇಲ್ಲದಿದ್ದರೆ ಪರಭಾಷೆ ನಾಮಫಲಕಗಳನ್ನು ಕಿತ್ತೆಸೆಯಲಾಗುವುದು ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಸೋಮನಾಥ ಮುಧೋಳ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಮಾರ್ಚ್ 5 ರಂದು ವೇದಿಕೆಯ ಸುಮಾರು 500 ರಿಂದ 600 ಕಾರ್ಯಕರ್ತರು ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದು, ಐದು ತಂಡಗಳನ್ನು ರಚಿಸಲಾಗಿದೆ. ಒಂದೊಂದು ತಂಡದಲ್ಲಿ ಸುಮಾರು ನೂರು ಜನ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಸಿದ್ಧಾರ್ಥ ಕಾಲೇಜಿನಿಂದ, ಚಿಟ್ಟಾಕ್ರಾಸ್‍ನಿಂದ, ನೌಬಾದನಿಂದ, ಫತ್ತೆ ದರ್ವಾಜಾದಿಂದ ಮತ್ತು ಶಹಾಪುರ ಗೇಟ್‍ನಿಂದ ಬಸವೇಶ್ವರ ವೃತ್ತದವರೆಗೆ ಪರಭಾಷೆ ನಾಮಫಲಕಗಳನ್ನು ಕಿತ್ತೊಗೆದು ಕನ್ನಡ ನಾಮಫಲಕ ಅಳವಡಿಸುವಂತೆ ಜಾಗೃತಿ ಮೂಡಿಸಲಾಗುವುದು. ಅದಕ್ಕೂ ಕೇಳದಿದ್ದರೆ ಕಿತ್ತೆಸೆಯಲಾಗುವುದು. ಈ ಹಿಂದೆಯೂ ಕನ್ನಡ ನಾಮಫಲಕ ಬಳಸುವಂತೆ ಬೀದರ ನಗರದಲ್ಲಿ ಹೋರಾಟ ಮಾಡಲಾಗಿತ್ತು. ಆದರೆ ಜಿಲ್ಲಾಧಿಕಾರಿಗಳಾಗಲಿ, ನಗರಸಭೆದವರಾಗಲಿ ಒಂದೇ ಒಂದು ಸಭೆ ಕರೆದಿಲ್ಲ. ಆದ್ದರಿಂದ ಹೋರಾಟ ಅನಿವಾರ್ಯವಾಗಿದೆ ಎಂದರು.
2023ರ ಡಿ. 27 ರಂದು ಕನ್ನಡ ನಾಮಫಲಕ ಕಡ್ಡಾಯವಾಗಿ ಅಳವಡಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರು ಬೆಂಗಳೂರಿನಲ್ಲಿ ಬೃಹತ್ ಹೋರಾಟ ನಡೆಸಿದ್ದರು. ರಾಜ್ಯ ಸರ್ಕಾರ ನಾರಾಯಣಗೌಡ ಸೇರಿದಂತೆ 29 ಕಾರ್ಯಕರ್ತರನ್ನು ಬಂಧಿಸಿ, ಸುಮಾರು 14 ದಿವಸಗಳ ಕಾಲ ನ್ಯಾಯಾಂಗ ಬಂಧನದಲ್ಲಿಟ್ಟಿದ್ದರು.
ಡಿ. 29, 2023 ರಂದು ಸಿಎಂ ಸಿದ್ಧರಾಮಯ್ಯನವರು ಸಭೆ ಕರೆದು ಶೇ. 60ರ ಅನುಪಾತದ ಅಡಿಯಲ್ಲಿ ಕನ್ನಡ ನಾಮಫಲಕ ಅಳವಡಿಸಲು ಸುಗ್ರೀವಾಜ್ಞೆ ಹೊರಡಿಸಿದ್ದರು. ಫೆ. 28, 2024 ರ ವರೆಗೆ ಕೊನೇ ಗಡುವು ಕೂಡಾ ಸರ್ಕಾರ ನೀಡಿತ್ತು. ಆದರೆ ಬಂಡವಾಳಶಾಹಿಗಳ ಓಲೈಕೆಗೆ ಸರ್ಕಾರ ಮತ್ತೆ ಎರಡು ವಾರಗಳ ಕಾಲ ವಿಸ್ತರಣೆ ಮಾಡಿದೆ. ಇದಕ್ಕೆ ನಾವು ಒಪ್ಪುವುದಿಲ್ಲ. ಮಾರ್ಚ್ 5 ರಂದು ಬೆಂಗಳೂರು ಗ್ರಾಮಾಂತರ ಮತ್ತು ನಗರ ಹೊರತುಪಡಿಸಿ ಇನ್ನುಳಿದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಹೋರಾಟ ಮಾಡಲಾಗುತ್ತಿದೆ. ಯಾವುದೇ ಹೆದರಿಕೆಗೆ ಬೆದರಿಕೆಗೆ ಬಗ್ಗುವುದಿಲ್ಲ. ಕನ್ನಡ ಭಾಷೆ ಉಳಿವಿಗಾಗಿ ಜೈಲಿಗೆ ಹೋಗಲು ಸಿದ್ಧರಾಗಿದ್ದೇವೆ. ಮುಂದಿನ ಪೀಳಿಗೆಗೆ ಕನ್ನಡ ಭಾಷೆಯ ಬಗ್ಗೆ ತಿಳಿಸುವುದು. ಕನ್ನಡ ನಾಡು ನುಡಿ ಉಳಿಸಿ ಬೆಳೆಸುವುದು ನಮ್ಮ ಪ್ರಮುಖ ಗುರಿಯಾಗಿದೆ ಎಂದು ಸೋಮನಾಥ ಸ್ವಾಮಿ ತಿಳಿಸಿದರು.
ಇದೇ ವೇಳೆ ವೇದಕೆಯ ಔರಾದ ತಾಲೂಕಾಧ್ಯಕ್ಷ ಅನೀಲ ಹೆಡೆ, ಬೀದರ ದಕ್ಷಿಣದ ಅಧ್ಯಕ್ಷ ವೀರಶೆಟ್ಟಿ ಗೌಸಪುರೆ, ಕಮಲನಗರ ತಾಲೂಕಾಧ್ಯಕ್ಷ ಸುಭಾಷ ಗಾಯಕವಾಡ, ಬೀದರ ಉತ್ತರದ ಅಧ್ಯಕ್ಷ ಸಚಿನ ಬೆನಕನಳ್ಳಿ, ಪ್ರಮುಖರಾದ ವಿನಾಯಕರೆಡ್ಡಿ ಬುಧೆರಾ, ವಿವೇಕ ನಿರ್ಮಳೆ, ಪ್ರಭು ಯಾಕತಪುರ, ಸೋಮಶೇಖರ ಸಜ್ಜನ್, ಉದಯಕುಮಾರ ಅಷ್ಟೂರೆ, ಗೋಪಾಲ ಕುಲಕರ್ಣಿ, ಮಹೇಶ ಕಾಪಸೆ, ಲಕ್ಷ??ಣ ಅಟಕಾರ, ವಿಶ್ವನಾಥಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.