ಕಲಾವಿದರ ಸೂಕ್ಷ್ಮ ಸಂವೇದನೆಯಿಂದ ಮಾನವೀಯ ಸಮಾಜ ನಿರ್ಮಾಣ ಸಾಧ್ಯ : ಪ್ರೊ. ಆರ್. ಕೆ. ಹುಡುಗಿ
ಕಲಬುರಗಿ:ಮಾ.03: ಆದುನಿಕ ಸಮಾಜದಲ್ಲಿ ಮಾನವೀಯ ಮೌಲ್ಯ ಮಾಯವಾಗಿದೆ. ಇಡೀ ಮನುಕುಲ ಮನುಷ್ಯತ್ವದ ಬರಗಾಲವನ್ನು ಅನುಭವಿಸುತ್ತಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಸೂಕ್ಷ್ಮ ಸಂವೇದನೆ ಮತ್ತು ಮಾನವತ್ವ ಪ್ರಜ್ಞೆಯುಳ್ಳ ಕಲಾಕೃತಿಗಳನ್ನು ರಚಿಸುವ ಮೂಲಕ ಮನುಷ್ಯತ್ವ ಪ್ರಜ್ಞೆ ಬೆಳೆಸಿ ಸಮಾಜವನ್ನು ಸಂರಕ್ಷಿಸಲು ಕಲಾವಿದರಿಂದ ಮಾತ್ರ ಸಾಧ್ಯ ಎಂದು ಹಿರಿಯ ಸಾಹಿತಿ ಹಾಗೂ ಸಾಂಸ್ಕøತಿಕ ಚಿಂತಕ ಪ್ರೊ. ಆರ್. ಕೆ. ಹುಡುಗಿ ಅಭಿಪ್ರಾಯಪಟ್ಟರು.
ಕಲಬುರಗಿಯ ದೃಶ್ಯ ಬೆಳಕು ಸಾಂಸ್ಕøತಿಕ ಸಂಸ್ಥೆ ಹಾಗೂ ಬೆಂಗಳೂರು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಕಲಬುರಗಿ ರಂಗಾಯಣದಲ್ಲಿ ಆಯೋಜಿಸಿದ ದೃಶ್ಯ ಬೆಳಕು ಪ್ರಶಸ್ತಿ ಪ್ರದಾನ ಗೌರವ ಪುರಷ್ಕಾರ ಹಾಗೂ 10ನೇ ವಾರ್ಷಿಕ ಕಲಾ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ದೇಶದಲ್ಲಿ ಸರ್ವಶ್ರೇಷ್ಠ ಪ್ರಜಾಪ್ರಭುತ್ವ ವ್ಯವಸ್ಥೆಯಿದ್ದರು ಸಹ ವರ್ತಮಾನದ ಕೃಷಿ ಕಾಯ್ದೆಗಳನ್ನು ದಿಕ್ಕರಿಸಿ ಹೋರಾಟ ಮಾಡಬೇಕಾದ ದುಸ್ಥಿತಿ ಬಂದಿದೆ. ರೈತರ ಹೋರಾಟದಲ್ಲಿ 734 ರೈತ ಹೋರಾಟಗಾರರು ಸಾವನಪ್ಪಿದ್ದಾರೆ. ಪ್ರಸ್ತುತ ನಡೆಯುತ್ತಿರುವ ರೈತ ಹೋರಾಟದಲ್ಲಿ 5 ಜನರನ್ನು ಕೊಲೆ ಮಾಡಲಾಗಿದೆ. ಆದರೆ ಇಡೀ ದೇಶಕ್ಕೆ ಅನ್ನದಾತರಾಗಿರುವ ರೈತರ ಪರ ಧ್ವನಿ ಅಡಗಿಸುವ ಹುನ್ನಾರ ನಡೆಯುತ್ತಿದ್ದರು ಜನರು ಮೌನವಾಗಿರುವುದು ಸರಿಯೇ. ರೈತರಿಗೆ ಗೌರವ ನೀಡದಿರುವ ಈ ಸಮಾಜ ಮಾನವೀಯ ಸಮಾಜವೇ ಎಂದು ಪ್ರಶ್ನಿಸಿದ ಅವರು ಕೃಷಿಕರು ಹಾಗೂ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಇಡೀ ವ್ಯವಸ್ಥೆ ಆಳುವ ವರ್ಗವನ್ನು ರಕ್ಷಿಸುತ್ತಿದೆ. ಚಿತ್ರ ಕಲಾವಿದರು ಇಂತಹ ಅಮಾನವೀಯ ಘಟನೆಗಳನ್ನು ಚಿತ್ರಗಳ ಮೂಲಕ ಜನರಿಗೆ ಸಂದೇಶ ತಲುಪಿಸಬೇಕಿದೆ. ರೈತರು, ಕೂಲಿ ಕಾರ್ಮಿಕರು, ದುರ್ಬಲರು, ದೀನದಲಿತರ ಮೇಲೆ ನಿರಂತರವಾಗಿ ನಡೆಯುತ್ತಿರುವ ಅಮಾನವೀಯ ಘಟನೆಗಳನ್ನು ವಿರೋಧಿಸುವ ಮನಸ್ಥಿತಿಯನ್ನು ಬೆಳೆಸಿ ಸಮಾಜವನ್ನು ಪುನರ್ ರೂಪಿಸಬೇಕಿರುವುದು ಇಂದಿನ ಅಗತ್ಯವಿದೆ ಎಂದರು.
ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ದೃಶ್ಯ ಬೆಳಕು ದಿನದರ್ಶಿಕೆ ಬಿಡುಗಡೆಗೊಳಿಸಿ ಮಾತನಾಡಿ ಕಲ್ಯಾಣ ಕರ್ನಾಟಕ ಭಾಗದ ಕಲಾವಿದರ ಪ್ರಾವೀಣ್ಯತೆಯಿಂದ ರಚಿಸಿದ ಕಲೆಗಳಿಂದ ಚರಿತ್ರೆಯನ್ನು ನೆನೆಪಿಸುತ್ತವೆ. ಇಲ್ಲಿ ಕಲಾವಿದರ ಸೇವೆಯಿಂದ ದಾಖಲಾರ್ಹ ಕೃತಿಗಳು ಮೂಡಿವೆ. ದೃಶ್ಯ ಬೆಳಕು ವೇದಿಕೆ ನಿರಂತರವಾಗಿ ಮಾಡುತ್ತಿರುವ ಶಿಬಿರ ಮತ್ತು ಕಾರ್ಯಕ್ರಮಗಳಿಂದ ಸಮಾಜದ ಜನರಿಗೆ ಜಾಗೃತಿ ಮತ್ತು ಸಮುದಾಯ ಪ್ರಜ್ಷೆ ಬೆಳೆಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ. ಈ ನಾಡಿಗೆ ಕೀರ್ತಿ ತರುವ ಕೆಲಸ ಈ ಬಾಗದ ಕಲಾವಿದರಿಂದ ಅಗುತಿರುವುದು ಅಭಿನಂದನಾರ್ಹ ಕೆಲಸ ಎಂದರು.
ದೃಶ್ಯ ಬೆಳಕು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೇಷ್ಠ ಚಿತ್ರ ಕಲಾವಿದ ಡಾ. ಬಾಬುರಾವ ನಡೋಣಿ ಮಾತನಾಡಿ ಮನುಷ್ಯರನ್ನು ಮನುಷ್ಯರಂತೆ ಕಾಣಬೇಕಿದೆ. ಜೀವಂತ ಸಮಾಜ ಬೆಳವಣಿಗೆಗೆ ಅಗತ್ಯವಿರುವ ಮಾನವೀಯ ಮೌಲ್ಯಗಳನ್ನು ಕಲಾವಿದರು ನೀಡಬೇಕಿದೆ. ವಿಮರ್ಶೆ ಗುಣಗಳಿಂದ ಸಮಾಜ ಮತ್ತು ಸಮುದಾಯದಲ್ಲಿ ನಡೆಯುತ್ತಿರುವ ಅನ್ಯಾಯ ಮತ್ತು ದೌರ್ಜನ್ಯಗಳನ್ನು ಕಲೆಗಳ ಮೂಲಕ ಬಿಂಬಿಸಿ ಅರಿವೆಗೆ ತರಬೇಕಿದೆ. ಒಬ್ಬ ವೈದ್ಯನ ತಪ್ಪಿನಿಂದ ಒಬ್ಬ ವ್ಯಕ್ತಿ ಸಾಯುತ್ತಾನೆ. ಆದರೆ ಒಬ್ಬ ಸಾಹಿತಿ, ಬರಹಗಾರ, ವಿಮರ್ಶಕ ಹಾಗೂ ಕಲಾವಿದರು ತಪ್ಪು ಸಂದೇಶ ಪ್ರದರ್ಶಿಸಿದರೆ ಅದರ ಹಾನಿ ಇಡೀ ಸಮಾಜಕ್ಕೆ ಹಾನಿಯಾಗುತ್ತದೆ. ಆದರಿಂದ ಕಲಾವಿದರು ಸೂಕ್ಷ್ಮ ಪ್ರಜ್ಞೆ ಮತ್ತು ಸಂವೇದನೆಗೆ ಒತ್ತು ನೀಡಿದರೆ ಕಲಾವಿದ ಭವಿಷ್ಯದ ಅತ್ಯುತ್ತಮ ಸಮಾಜವನ್ನು ರೂಪಿಸಲು ಸಾಧ್ಯವಿದೆ. ಪ್ರಶಸ್ತಿ ನೀಡಿ ಗೌರವಿಸಿರುವುದು ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ಭಾವಿಸುತ್ತೇನೆ ಎಂದರು.
ಹಿರಿಯ ಕಲಾವಿದ ಬಸವರಾಜ ಎಲ್. ಜಾನೆ ಅದ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಅಮರ ಶಿಲ್ಪಿ ಜಕಣಾಚಾರಿ ಪ್ರಶಸ್ತಿ ಪುರಷ್ಕøತ ಮಹದೇವಪ್ಪ ಎಸ್ ಶಿಲ್ಪಿ, ಕರ್ನಾಟಕ ಸರ್ಕಾರದ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಪುರಷ್ಕøತ ಬಸವರಾಜ ಎಲ್. ಜಾನೆ ಅವರನ್ನು ಸನ್ಮಾನಿಸಲಾಯಿತು. 10ನೇ ವಾರ್ಷಿಕ ಕಲಾ ಶಿಬಿರದಲ್ಲಿ ಅತ್ಯುತ್ತಮ ಚಿತ್ರಕಲಾಕೃತಿಗಳನ್ನು ರಚಿಸಿದ ಚಿತ್ರಕಲಾವಿದರಾದ ಜಗದೀಶ್ ಕಾಂಬಳೆ, ಸಬ್ರೀನ್ ತಾಜ್, ಬಿ.ಎನ್. ಪಾಟೀಲ್, ಸಿದ್ದಾರೆಡ್ಡಿ ಯಲ್ಲಪ್ಪ, ದಾನಯ್ಯ ಚೌಕಿಮಠ ಹಾಗೂ ಶಿವಶರಣ ಡೊಣ್ಣೂರಕರ್ ಅವರನ್ನು ಗೌರವಿಸಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿ ಎರಡು ದಿನಗಳ ಕಲಾಶಿಬಿರದಲ್ಲಿ ಭಾಗವಿಸಿ ಕಲಾಕೃತಿ ರಚಿಸಿದ ಕಲಾವಿದರಿಗೆ ನೆನಪಿನ ಕಾಣಿಕೆ ಮತ್ತು ಪ್ರಮಾಣಪತ್ರ ನೀಡಲಾಯಿತು.
ದೃಶ್ಯ ಬೆಳಕು ಸಾಂಸ್ಕøತಿಕ ಸಂಸ್ಥೆಯ ಅಧ್ಯಕ್ಷ ಡಾ. ಪಿ. ಪರಶುರಾಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ. ಸಂತೋಷ್ ಕಂಬಾರ ಅತಿಥಿಗಳನ್ನು ಸ್ವಾಗತಿಸಿ ಪ್ರಶಸ್ತಿ ಪುರಷ್ಕøತರನ್ನು ಪರಿಚಯಿಸಿದರು. ಚಿತ್ರಕಲಾ ಶಿಕ್ಷಕ ಸೂರ್ಯಕಾಂತ ನಂದೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕು. ಗಂಗಮ್ಮ ಪ್ರಾರ್ಥಿಸಿದರು.
ಕಲಾವಿದರು ಕಲಾಭಿವ್ಯಕ್ತಿ ಮೂಲಕ ಸಮಾಜದ ಜನರ ದೃಷ್ಠಿಕೋನವನ್ನು ಬದಲಾಯಿಸಬಹುದು. ಕಲಾವಿದರು ಅನ್ಯಾಯವನ್ನು ಹಠವಾದಿ ಮನಸ್ಥಿತಿಯಿಂದ ಕ್ರಾಂತಿಕಾರಕ ಚಿತ್ರಕಲೆಗಳನ್ನು ರಚಿಸಿ ಇಡೀ ಮನುಕುಲಕ್ಕೆ ಸಂವೇದನೆ, ಭಾತೃತ್ವ ಭಾವನೆ, ವೈಚಾರಿಕ ಚಿಂತನೆ ಅರಿವು ಮೂಡಿಸಬೇಕಿದೆ. ನೊಂದವರಿಗೆ ಸ್ಪಂಧನೆಯ ಗುಣವನ್ನು ಬಿಂಬಿಸಬೇಕಿದೆ. ಶಿಬಿರದಲ್ಲಿ ಭಾಗವಹಿಸಿ ಬಿಡಿಸಿರುವ ಚಿತ್ರಗಳು ಇಡೀ ಚರಿತ್ರೆಯಲ್ಲಿನ ನಿಜ ಸಂಗತಿಗಳನ್ನು ಹೇಳುತ್ತವೆ. ಇಂತಹ ಶಿಬಿರಗಳಲ್ಲಿ ಜನರು ಆಸಕ್ತಿಯಿಂದ ಭಾಗವಹಿಸಿ ಆಳುವ ವರ್ಗದ ದುರವಸ್ಥೆಯನ್ನು ಪ್ರಶ್ನಿಸಬೇಕಿದೆ. ನಾವು ಮನುಷ್ಯರು ಮನುಷ್ಯತ್ವದ ಸಮಾಜವನ್ನು ನಿರ್ಮಿಸಲು ಎಲ್ಲರೂ ಪ್ರಯತ್ನಿಸಬೇಕು. ಕೃಷಿಕರು, ಮಹಿಳೆಯರು ಮತ್ತು ದುರ್ಬಲರ ಪರವಾದ ಭಾವನೆಗಳಿಗೆ ಸ್ಪಂದಿಸುವ ಮೂಲಕ ಪ್ರಜಾಪ್ರಭುತ್ವ ವಿರೋಧಿ ನಿಯಮಗಳ ವಿರುದ್ಧ ಧ್ವನಿ ಮಾಡಬೇಕು.