5ವರ್ಷದೊಳಗಿನ ಮಕ್ಕಳಿಗೆ ತಪ್ಪದೆ ಪೋಲಿಯೋ ಹನಿ ಹಾಕಿಸಿ – ಡಾ ಪ್ರದೀಪಕುಮಾರ.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮಾ.3 :- ಪೋಲಿಯೋ ಮುಕ್ತ ಭಾರತವಾಗಿದ್ದರೂ ಅಕ್ಕಪಕ್ಕದ ದೇಶಗಳಲ್ಲಿ ಪೋಲಿಯೋ ಪೀಡಿತರು ಇರುವುದರಿಂದ ದೇಶದ ಹಿತದೃಷ್ಟಿಯ ಮುಂಜಾಗ್ರತೆಯಲ್ಲಿ ದೇಶದಲ್ಲಿ ಪೋಲಿಯೋ ಹನಿ ಹಾಕಲಾಗುತ್ತಿದ್ದು ತಪ್ಪದೆ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವಂತೆ ತಾಲೂಕು ವೈದ್ಯಾಧಿಕಾರಿ ಡಾ ಪ್ರದೀಪಕುಮಾರ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಅವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ  ಪಲ್ಸ್  ಪೋಲಿಯೋ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಗುವೊಂದಕ್ಕೆ ಪೋಲಿಯೋ ಹನಿ ಹಾಕಿ ಉದ್ಘಾಟನೆ ನೆರವೇರಿಸಿ ಮಾತನಾಡುತ್ತ ಕೂಡ್ಲಿಗಿ ತಾಲೂಕಿನಲ್ಲಿ ಒಟ್ಟು  3,43,074 ಜನಸಂಖ್ಯೆ ಇದ್ದು 65,474 ಮನೆಗಳಿದ್ದು ಅದರಲ್ಲಿ  38,001 ಐದು ವರ್ಷದೊಳಗಿನ ಮಕ್ಕಳು ಇರುವ ಮಾಹಿತಿ ತಿಳಿದಂತೆ ಈ ಎಲ್ಲಾ ಮಕ್ಕಳಿಗೂ  ಪೋಲಿಯೋ ಹನಿ ಹಾಕುವ ಗುರಿ ಹೊಂದಲಾಗಿದೆ. ಕೂಡ್ಲಿಗಿ ಆರೋಗ್ಯ ಇಲಾಖೆಯಿಂದ 272
ಬೂತ್ ಸಂಖ್ಯೆ ತೆರೆಯಲಾಗಿದ್ದು 4
ಮೊಬೈಲ್ ಟೀಮ್ ಗಳಿವೆ,15
ಟ್ರಾಂಜಿಟ್ ಟೀಮ್ ಗಳಿವೆ.177
ಮನೆ ಮನೆ ಭೇಟಿ ಮಾಡುವ ಟೀಮ್ ಮಾಡಲಾಗಿದ್ದು
ಒಟ್ಟು 196 ಟೀಮ್ ಗಳಿವೆ. ಇವುಗಳ ಮೇಲುಸ್ತುವಾರಿಯಾಗಿ 41
ಸೂಪರ್ವೈಸರ್ಸ್ಗಳು ಸೇರಿ ಒಟ್ಟು 600 ಸಿಬ್ಬಂದಿಗಳನ್ನು  ನಿಯೋಜನೆಗೊಳಿಸಲಾಗಿದೆ ಇದರಲ್ಲಿ  ವೈದ್ಯರು, ನರ್ಸಿಂಗ್ ಆಫೀಸರ್, ಆರೋಗ್ಯ ಸುರಕ್ಷಾಧಿಕಾರಿ ಗಳು, ಆರೋಗ್ಯ ನಿರೀಕ್ಷಣಾಧಿಕಾರಿ ಗಳು, ಸಮುದಾಯ ಆರೋಗ್ಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರು ಹಾಗೂ ಸಹಾಯಕಿಯರು ನಡೆಯುವ ನಾಲ್ಕು ದಿನದ ಪೋಲಿಯೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ತಾಲೂಕು ವೈದ್ಯಾಧಿಕಾರಿ ಡಾ ಪ್ರದೀಪ್ ತಿಳಿಸಿದರು.
ಕೂಡ್ಲಿಗಿ ಪ ಪಂ ಸದಸ್ಯೆ ಲಕ್ಷ್ಮೀದೇವಿ ಬಸವರಾಜ ಮಾತನಾಡಿ ತಪ್ಪದೆ ತಮ್ಮ ಮನೆಯಲ್ಲಿರುವ ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೋ  ಹನಿ ಹಾಕಿಸಿ ಮಕ್ಕಳ ಆರೋಗ್ಯ ಹಾಗೂ ಸುರಕ್ಷತೆ ಕಾಪಾಡಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮಧು, ಬಸವರಾಜ ಹಾಗೂ ಆಸ್ಪತ್ರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.