ಅದ್ದೂರಿಯಾಗಿ ಗ್ರಾಮದೇವತೆಯ ಜಾತ್ರಾಮಹೋತ್ಸವಕ್ಕೆ  ಸಿದ್ಧತೆ.
ಸಂಜೆವಾಣಿ ವಾರ್ತೆ
ಹೊಸಪೇಟೆ, ಮಾ.03:  ಗ್ರಾಮ ದೇವತೆ ಊರಮ್ಮ ದೇವಿಯ ಜಾತ್ರೆಯನ್ನು ಸರ್ವ ಧರ್ಮೀಯರೂ ಸೇರಿ ಆಚರಿಸಲು ನಿರ್ಧರಿಸಿದ್ದು ಹೊಸಪೇಟೆಯ ಗ್ರಾಮೋತ್ಸವಾಗಿ ಅವಿಸ್ಮರಣೀಯವಾಗಿಸಲು ಸಭೆ ನಿರ್ಧರಿಸಿತು.
ಕೊಟ್ಟೂರು ಮಠದಲ್ಲಿ ಶನಿವಾರ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಶಾಸಕ ಎಚ್.ಆರ್‌.ಗವಿಯ‍ಪ್ಪ ಅವರು ₹ 10 ಲಕ್ಷದ ದೇಣಿಗೆ ಭರವಸೆಯ ಜತೆಗೆ, ಅಗತ್ಯಬಿದ್ದರೆ ಮತ್ತಷ್ಟು ಅನುದಾನ ನೀಡುವುದಾಗಿ ಭರವಸೆ ನೀಡಿದರು. ‘ನಮ್ಮ ಮಕ್ಕಳಿಗೆ ನಮ್ಮ ಪರಂಪರೆಯ ಪರಿಚಯ ಆಗಬೇಕಿದ್ದರೆ ಇಂತಹ ಆಚರಣೆಗಳು ನಡೆಯುತ್ತಿರಬೇಕು’ ಎಂದರು.
ಜಿಲ್ಲಾ ಕಾಂಗ್ರೆಸ್ ಘಟಕದ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಎನ್.ಎಫ್‌.ಇಮಾಮ್‌ ನಿಯಾಜಿ ಮಾತನಾಡಿ, ಇದು ನಮ್ಮೆಲ್ಲರ ಉತ್ಸವ, ಮುಸ್ಲಿಂ ಸಮುದಾಯ ಸಹ ಅಗತ್ಯದ ಸಹಕಾರ, ನೆರವು ನೀಡಲಿದೆ ಎಂದರು.
ಕೊಟ್ಟೂರು ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ ಧಾರ್ಮಿಕ ಆಚರಣೆಗಳ ಜಾತ್ರೆಗಳು ಸಮುದಾಯಗಳ ಸಾಮರಸ್ಯಕ್ಕೆ ಕಾರಣವಾಗಲಿವೆ ಎಲ್ಲಾ ಸಮಾಜದ ಮುಖಂಡರನ್ನು ಕರೆದು ಆಚರಿಸಲು ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದರು.
ದೇವಸ್ಥಾನದ ಜೀರ್ಣೋದ್ಧಾರ ಅಭಿವೃದ್ಧಿಯ ಸಮಿತಿಯ ಅಧ್ಯಕ್ಷ ಬಂಡೆ ಶ್ರೀನಿವಾಸ್ ಪ್ರಾಸ್ತಾವಿಕ ಮಾತನಾಡಿ, ಈ ಹಿಂದೆ 12 ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತಿತ್ತು. 2010ರಿಂದ 5 ವರ್ಷಕ್ಕೊಮ್ಮೆ ನಡೆಸುವ ತೀರ್ಮಾನ ಕೈಗೊಳ್ಳಲಾಯಿತು. ಎರಡು ಬಾರಿ ಅದರಂತೆಯೇ ನಡೆಯಿತು. 2020ರಲ್ಲಿ ಕೋವಿಡ್ ಕಾರಣಕ್ಕೆ ಜಾತ್ರೆ ನಡೆಸುವುದು ಸಾಧ್ಯವಾಗಲಿಲ್ಲ. 9 ವರ್ಷದ ಬಳಿಕ ಏಪ್ರಿಲ್‌ 2 ಮತ್ತು 3ರಂದು ಜಾತ್ರೆ ನಡೆಯುತ್ತಿದೆ. ಇದಕ್ಕೆ 30  ಲಕ್ಷ ವೆಚ್ಚ ತಗಲುವ ಅಂದಾಜಿದೆ ಎಂದರು.
ನಗರದ ಪ್ರಮುಖರಾದ ಭೂಪಾಳ ರಾಘವೇಂದ್ರ ಶೆಟ್ಟಿ, ರಾಮಪ್ಪ, ಅಶ್ವಿನ್ ಕೋತಂಬರಿ, ಆರ್‌.ಕೆ.ರವಿ, ವೈ.ಯಮುನೇಶ್‌, ಕೆ. ದಿವಾಕರ ಭಟ್, ಕೊಟ್ರೇಶ್‌, ಎಂ.ಕೆ.ಹನುಮಂತಪ್ಪ, ರೂಪೇಶ್‌ ಕುಮಾರ್ ಇತರರು ಸಲಹೆ ನೀಡಿದರು.
One attachment • Scanned by Gmail