ಮಹಿಳಾ ಸ್ವಾವಲಂಬನೆಗೆ ಸೌರಶಕ್ತಿ ಜೀವನೋಪಾಯ ಅನುಕೂಲ : ಡಾ. ಗಿರೀಶ ಬದೋಲೆ
ಬೀದರ:ಸೆ.16: ಮಹಿಳೆಯರು ಸ್ವ-ಉದ್ಯೋಗ ಮಾಡುವುದರ ಜೊತೆಗೆ ಆರ್ಥಿಕವಾಗಿ ಮತ್ತು ಕೌಟುಂಬಿಕವಾಗಿ ಸಫಲತೆ ಹೊಂದಲು ಸೌರಶಕ್ತಿ ಜೀವನೋಪಾಯ ಯೋಜನೆ ಅನುಕೂಲಕರವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗಿರೀಶ ದಿಲೀಪ ಬದೋಲೆ ತಿಳಿಸದಿರು.
ಸೆಲ್ಕೋ ಫೌಂಡೇಶನ್ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಜರುಗಿದ ಬೀದರ ಸೌರಶಕ್ತಿ ಚಾಲಿತ ಜೀವನೋಪಾಯ ಪರಿಕರಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಸ್ವಯಂ ಅಭಿವೃದ್ಧಿಯ ಜೊತೆಗೆ ತಮ್ಮ ಅಕ್ಕಪಕ್ಕದವರಿಗೆ ತಿಳಿಸಿ ಗೃಹ ಕೈಗಾರಿಕೆ ಮತ್ತು ಚಿಕ್ಕ ಉದ್ಯಮಗಳನ್ನು ಬೆಳೆಸುವ ಪ್ರಯತ್ನ ಮಾಡಬೇಕು. ಗ್ರಾಮೀಣ ಭಾಗದಲ್ಲಿ ಜನರು ಆರ್ಥಿಕವಾಗಿ ಸ್ವಾವಲಂಬಿಯಾಗಲು ಇದು ಸಹಕಾರಿಯಾಗಿದೆ. ಇದರಿಂದ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ. ಈ ಜಾಗೃತಿ ಕಾರ್ಯಕ್ರಮದ ಸುವರ್ಣ ಅವಕಾಶವನ್ನು ಪ್ರತಿಯೊಬ್ಬರೂ ಸದುಪಯೋಗ ಪಡೆದುಕೊಂಡು ನಿರುದ್ಯೋಗ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಬೇಕೆಂದು ಪ್ರತಿಪಾದಿಸಿದರು.
ಸೆಲ್ಕೋ ಫೌಂಡೇಶನ್‍ನ ಉಪ ಪ್ರಧಾನ ವ್ಯವಸ್ಥಾಪಕ ಪ್ರಸನ್ನ ಹೆಗಡೆ ಮಾತನಾಡಿ ಮಹಿಳೆಯರ ಸ್ವಾವಲಂಬಿ ಬದುಕಿಗಾಗಿಯೇ ಸೌರ ಉದ್ಯೋಗ ಮಳಿಗೆಗಳನ್ನು ರಂಗಮಂದಿರದ ಆವರಣದಲ್ಲಿ ಹಾಕಲಾಗಿದೆ. ಸೌರಶಕ್ತಿ ಉದ್ಯೋಗದೊಂದಿಗೆ ನಿಮ್ಮ ಜೀವನ ಮತ್ತು ಕುಟುಂಬದ ಅಭಿವೃದ್ಧಿಪಡಿಸಿಕೊಳ್ಳಿ. ಮಹಿಳೆ ಯಾವುದೇ ಫಲಾಪೇಕ್ಷಿಯಿಲ್ಲದೆ ಪ್ರತಿನಿತ್ಯ ಕೆಲಸ ಮಾಡುತ್ತಾಳೆ. ಆದರೆ ತಾವು ಮಾಡುವ ಕಾರ್ಯಕ್ಕೆ ಒಂದಿಷ್ಟು ಆರ್ಥಿಕ ಸ್ಪರ್ಶ ನೀಡಿದರೆ ಸಬಲಳಾಗಬಲ್ಲಳು ಎಂಬ ಸದುದ್ದೇಶದಿಂದ ಈ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ವೇದಿಕೆ ಮೇಲೆ ಎನ್‍ಆರ್‍ಎಲ್‍ಎಂ ಯೋಜನಾಧಿಕಾರಿ ಜಗನ್ನಾಥ ಮೂರ್ತಿ, ಸಂಸ್ಥೆಯ ಎಲ್‍ಡಿಎಂ ಸತೀಶ ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕ್‍ನ ಅಧಿಕಾರಿಗಳು, ಜಿಲ್ಲಾ ಅಂಗವಿಕಲ ಅಧಿಕಾರಿ ಮಹಾದೇವ, ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, ಫೌಂಡೇಶನ್ ಹಿರಿಯ ವ್ಯವಸ್ಥಾಪಕ ಫಣಿಂದ್ರ ಸಿಂಗ್, ಸೆಲ್ಕೋ ಕಲಬುರಗಿ ವಲಯ ವ್ಯವಸ್ಥಾಪಕ ಯಲ್ಲಾಲಿಂಗ ದೊಡ್ಡಮನಿ, ಬೀದರ ಶಾಖಾ ವ್ಯವಸ್ಥಾಪಕ ಶಿವರಾಜ ತಳೊಳ್ಳಿ, ಧಾರವಾಡ ವಲಯ ವ್ಯವಸ್ಥಾಪಕಿ ಉಮಾ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ತಂತ್ರಜ್ಞಾನದ ಪ್ರದರ್ಶನಗಳಾದ ವಿವಿಧ ರೀತಿಯ ರೊಟ್ಟಿ ಯಂತ್ರ, ಕಬ್ಬಿನ ರಸಯಂತ್ರ, ಚಿಪ್ಸ್ ಯಂತ್ರ, ಚಕ್ಲಿಯಂತ್ರ, ಮಡಿಕೆ ತಯಾರಿಸುವ ಯಂತ್ರ ಮತ್ತು ಹಪ್ಪಳ ಯಂತ್ರ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಜೀವನೋಪಾಯ ಪರಿಕರಗಳ ಯಂತ್ರಗಳನ್ನು ಪ್ರದರ್ಶನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಒಂದು ಸಾವಿರಕ್ಕೂ ಅಧಿಕ ಸ್ವಸಹಾಯ ಗುಂಪುಗಳ 1500 ಜನ ಮಹಿಳೆಯರು ಪಾಲ್ಗೊಂಡಿದ್ದರು. ಯಲ್ಲಾಲಿಂಗ ದೊಡ್ಮನಿ ಸ್ವಾಗತಿಸಿದರು. ಉಮಾ ಪಾಟೀಲ ನಿರೂಪಿಸಿದರೆ ಶಿವರಾಜ ತಳ್ಳೋಳ್ಳಿ ವಂದಿಸಿದರು.