ಬೆಂಗಳೂರು ಬಾಂಬ್ ಸ್ಫೋಟ ಆಘಾತಕಾರಿ: ಎಸ್‍ಡಿಪಿಐ
ಕಲಬುರಗಿ,ಮಾ.3: ಬೆಂಗಳೂರಿನ ಹೋಟೆಲ್ ಒಂದರಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು ಆಘಾತಕಾರಿ ಬೆಳವಣಿಗೆಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗುಪ್ತಚರ ಇಲಾಖೆಗಳ ವೈಫಲ್ಯದಿಂದ ಇದು ಸಂಭವಿಸಿದ್ದು,ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಹೊಣೆಯಾಗಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಹೇಳಿದ್ದಾರೆ.
ಈ ಪ್ರಕರಣದಿಂದ ನಗರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಆದಷ್ಟು ಬೇಗ ಅದನ್ನು ಹೋಗಲಾಡಿಸಲು ಮತ್ತು ಜನರಿಗೆ ಭದ್ರತೆಯ ಭಾವನೆ ಮೂಡಿಸಲು ಭಾಗಿಯಾಗಿರುವವರನ್ನು ಪತ್ತೆಹಚ್ಚಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಮಜೀದ್ ತಮ್ಮ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ಯಾವುದೇ ಘಟನೆಗೆ ಮುಸ್ಲಿಂ ಸಮುದಾಯವನ್ನು ಅನುಮಾನಿಸುವ ಬಿಜೆಪಿಯ ದ್ವೇಷ ರಾಜಕಾರಣ ಈ ಪ್ರಕರಣದಲ್ಲೂ ಮುಂದುವರಿದಿದೆ. ವಿನಾಕಾರಣ ಮುಸ್ಲಿಂ ಸಮುದಾಯವನ್ನು ದೂರುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಂತಹ ದ್ವೇಷದ ಹೇಳಿಕೆಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಜೀದ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.