ಮಾ. 11 ರಂದು ಕಲಬುರಗಿಯಲ್ಲಿ ವಿಶ್ವಕರ್ಮ ಮಠಾಧಿಪತಿಗಳ ಸಂಘಟನಾ ವೇದಿಕೆ ಉದ್ಘಾಟನೆಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ : ದೊಡ್ಡೆಂದ್ರ ಶ್ರೀಗಳು
ಬೀದರ:ಮಾ.3: ಇದೇ ತಿಂಗಳ ಮಾರ್ಚ್ 11ರಂದು ಕಲಬುರಗಿಯ ವೀರಭದ್ರೇಶ್ವರ ಸಭಾಭವನದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಠಾಧಿಪತಿಗಳ ಮತ್ತು ಸ್ವಾಮೀಜಿಗಳ ರಾಜ್ಯ ಮಟ್ಟದ ಸಂಘಟನಾ ವೇದಿಕೆ ಉದ್ಘಾಟನೆಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಾಜದ ವಿಶ್ವಕರ್ಮ ಸಮಾಜದ ರಾಜ್ಯಾದ್ಯಕ್ಷರಾದ ಕೆಪಿ ನಂಜುಂಡಿ ಪಾಲ್ಗೊಳ್ಳಲಿದ್ದಾರೆ. ಆದ್ದರಿಂದ ಜಿಲ್ಲೆಯ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸುಲೇಪೇಟದ ಏಕದಂಡಗಿ ಮಠದ ಪೂಜ್ಯ ಶ್ರೀ ದೊಡ್ಡೆಂದ್ರ ಸ್ವಾಮೀಜಿ ಕರೆ ನೀಡಿದರು. ನಗರದ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಸಮಾಜ ಮತ್ತು ಸ್ವಾಮೀಜಿಗಳು ಕೂಡಿ ಹೋರಾಟ ಮಾಡಿದರೆ ಸಮಾಜ ಸಂಘಟನೆ ದ್ವಿಗುಣವಾಗುತ್ತದೆ. ಈಗಾಗಲೇ ವಿಶ್ವಕರ್ಮ ಸಮಾಜದ ಏಳ್ಗೆಗಾಗಿ ಅನೇಕರು ಉಪವಾಸ, ಪಾದಯಾತ್ರೆ, ಹೋರಾಟಗಳನ್ನು ಮಾಡಿದ್ದಾರೆ. ಹೀಗಾಗಿ ಸಮಾಜ ಸಂಘಟನೆಯೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜದ ರಾಜ್ಯ ಕಾರ್ಯದರ್ಶಿ ಲೋಹಿತ್ ವೈ. ವಿಶ್ವಕರ್ಮ ಕಲ್ಲೂರ ಮಾತನಾಡಿ ತಮ್ಮ ತಮ್ಮ ಕಾಯಕದಲ್ಲಿ ತೊಡಗಿಸಿಕೊಂಡಿರುವ ವಿಶ್ವಕರ್ಮ ಸಮಾಜದ ಬಾಂಧವರು ತಪ್ಪದೇ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ತಿಳಿಸಿದರು.
ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಯುವ ಘಟಕದ ಅಧ್ಯಕ್ಷ ಪ್ರಶಾಂತ ವಿಶ್ವಕರ್ಮ ಮಾತನಾಡಿ ವಿಶ್ವಕರ್ಮ ಸಮಾಜದ ಒಗ್ಗೂಡಿಸುವಿಕೆ, ಐಕ್ಯತೆ ಮತ್ತು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಬಲತೆಯ ಉದ್ದೇಶದಿಂದ ಮಾರ್ಚ್ 11 ರಂದು ರಾಜ್ಯಮಟ್ಟದ ವೇದಿಕೆ ಉದ್ಘಾಟನೆಯಾಗುತ್ತಿದೆ. ಅಲ್ಲದೇ ವಿಶ್ವಕರ್ಮ ಸಮಾಜವು ಧಾರ್ಮಿಕವಾಗಿ, ಸಾಮಾಜಿಕ, ಅರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಆಸ್ತಿತ್ವ ಉಳಿಸಿಕೊಂಡು ಪ್ರತೀ ತಾಲೂಕಾ, ಜಿಲ್ಲೆಗಳಲ್ಲಿ ವಿಶ್ವಕರ್ಮ ಮತ್ತು ಅಮರಶಿಲ್ಪಿ ಜಕಣಾಚಾರಿ ಅವರ ಪುತ್ಥಳಿ ಸ್ಥಾಪಿಸುವ ನಿಟ್ಟಿನಲ್ಲಿ ಸಂಘಟನಾತ್ಮಕವಾಗಿ ಹೋರಾಟ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಕೆ.ಪಿ.ನಂಜುಂಡಿ ಅವರ ಕೊಡುಗೆ ಸಮಾಜಕ್ಕೆ ಸಾಕಷ್ಟಿದೆ ಎಂದು ತಿಳಿಸಿದರು.
ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜದ ಕಲಬುರಗಿ ಮತ್ತು ಬೀದರ ಉಸ್ತುವಾರಿಗಳಾದ ಅಶೋಕ ಪೊದ್ದಾರ್ ಮಾತನಾಡಿ ಇಡೀ ವಿಶ್ವವೇ ಭಾರತದ ಕಡೆಗೆ ನೋಡುತ್ತಿದೆ. ಆಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಸುಂದರವಾಗಿ ಕೆತ್ತಿದ್ದು ನಮ್ಮ ಸಮಾಜದ ಅರುಣ ಯೋಗಿರಾಜ್. ಹೀಗಾಗಿ ವಿಶ್ವಕರ್ಮ ಸಮಾಜದ ಅಭಿವೃದ್ಧಿ ಆಗಬೇಕಾಗಿದೆ. ಎಲ್ಲಾ ಪೂಜ್ಯರ ಹಾಗೂ ಮುಖಂಡರ ನೇತೃತ್ವದಲ್ಲಿ ರಾಜ್ಯದಾದ್ಯಂತ ಸಂಘಟನೆ ವಿಸ್ತರಿಸಲಾಗುವುದು ಎಂದು ತಿಳಿಸಿದರು. ಸಮಾಜದ ಐಕ್ಯತೆಯ ಹಿತದೃಷ್ಟಿಯಿಂದ ಮಾರ್ಚ್ 11ರ ಕಲಬುರಗಿಯ ಸಂಘಟನಾ ವೇದಿಕೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಜನರು ಪಾಲ್ಗೊಳ್ಳಬೇಕೆಂದು ತಿಳಿಸಿದರು.
ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಜಿಲ್ಲಾ ಘಟಕದ ಉಪಾಧ್ಯಕ್ಷ ಸೋಮನಾಥ ಪಾಂಚಾಳ ಮುಖಂಡರಾದ ಜೈಪ್ರಕಾಶ ಪೊದ್ದಾರ್, ದತ್ತಾತ್ರಿ ವಿಶ್ವಕರ್ಮ, ದಯಾನಂದ ವಿಶ್ವಕರ್ಮ, ನಾಗನಾಥ ವಿಶ್ವಕರ್ಮ, ಮಹಾದೇವ ಪಾಂಚಾಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.