ತಂದೆ ತಾಯಿಯ ಸ್ಮರಣಾರ್ಥ ಮುಸ್ಲಿಂ ಕಬರಸ್ಥಾನಕ್ಕೆ ಒಂದು ಎಕರೆಗೂ ಅಧಿಕ ಜಾಗೆ ದಾನ
ಬಸವನಬಾಗೇವಾಡಿ:ಮಾ.3: 12ನೇ ಶತಮಾನದಲ್ಲಿ ಸಮಾನತೆಗಾಗಿ ಹೋರಾಡಿದ ಮಹಾಮಾನವತಾವದಿ ವಿಶ್ವಗುರು ಬಸವೇಶ್ವರ ಜನ್ಮಸ್ಥಳದಲ್ಲಿ ತಂದೆ ತಾಯಿಯ ಸ್ಮರಣಾರ್ಥ ಮುಸ್ಲಿಂ ಕಬರಸ್ಥಾನಕ್ಕೆ ಜಾಗೆಯನ್ನು ದಾನ ಮಾಡುವ ಮೂಲಕ ಇಬ್ಬರು ವ್ಯಕ್ತಿಗಳು ಇತರರಿಗೆ ಮಾದರಿಯಾಗಿದ್ದಾರೆ.
ಪಟ್ಟಣದ ನಿವಾಸಿಗಳಾದ ರಾಘವೇಂದ್ರ ರಾಮರಾವ ಕುಲಕರ್ಣಿ, ಅನಂತ ರಾಮರಾವ್ ಕುಲಕರ್ಣಿ, ಎಂಬುವರು ತಮ್ಮ ತಂದೆ, ದಿ, ರಾಮರಾವ್ ತಾಯಿ, ದಿ, ಸೀತಾಬಾಯಿ, ಇವರು ಸ್ಮರಣಾರ್ಥವಾಗಿ ಪಟ್ಟಣದ ಸರ್ವೇ ನಂ, 1131/2 ತಮ್ಮ ಸ್ವತಃ 1, ಎಕರೆ 4 ಗುಂಟೆ ಜಾಗೆಯನ್ನು ಮದೀನಾ ಮಸ್ಜಿದ್ ಮುಸ್ಲಿಂ ಜಮಾತೆ ಚೇರಮನ್ ಗುರ್ಜಿಕಟ್ಟೆ ಇವರ ಹೆಸರಿಗೆ ದಾನ ಪತ್ರ ನೀಡಿದ್ದಾರೆ.
ಇಂದಿನ ಅಧುನಿಕ ಯುಗದಲ್ಲಿ ತಂದೆ ತಾಯಿಯನ್ನು ಸಾಕಲು ಸಾಧ್ಯವಾಗದೆ ತಮ್ಮ ತಂದೆ ತಾಯಿಯನ್ನು ಅನಾಥಶ್ರಮಗಳಿಗೆ ಕಳಿಸುವ ಕೆಟ್ಟ ಮನಸ್ಸಿನ ಜನರ ಮಧ್ಯ ಈ ವ್ಯಕ್ತಿಗಳು ತಂದೆ ತಾಯಿಯ ಹೆಸರಿನಲ್ಲಿ 1 ಎಕರೆಗೂ ಅಧಿಕ ಜಾಗೆಯನ್ನು ದಾನವಾಗಿ ನೀಡಿರುವುದು ವಿಶೇಷವಾಗಿದೆ.
ಜಗತ್ತಿನಲ್ಲಿ ಕೆಟ್ಟ ಮಕ್ಕಳಿರುತ್ತಾರೆ ಆದರೆ ಕೆಟ್ಟ ತಂದೆ ತಾಯಿ ಇರುವುದಿಲ್ಲ, ಮಕ್ಕಳಿಗಾಗಿ ತಮ್ಮ ಜೀವನವನ್ನೆ ಮುಡಿಪಾಗಿಡುವ ತಂದೆ ತಾಯಿಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಇಂತಹ ಸಂಧರ್ಬದಲ್ಲಿ ತಂದೆ, ತಾಯಿಯ ಸ್ಮರಣಾರ್ಥ ಜಾಗೆಯನ್ನು ದಾನ ನೀಡಿರುವುದು ನಿಜಕ್ಕು ಶ್ಲಾಘನೀಯವಾಗಿದೆ.