ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಅಭಿವೃದ್ಧಿ ಕುಂಠಿತಗೊಂಡಿದೆ : ಪಾಟೀಲ
ಬೀದರ:ಮಾ.3: ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಉಲ್ಭಣಗೊಂಡಿದೆ. ಅಭಿವೃದ್ದಿ ಕಾರ್ಯಗಳು ಕುಂಠಿತಗೊಂಡಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ ಎನ್ನುವ ಸ್ಥಿತಿಗೆ ಹೋಗಿದೆ. ಆಳಂದ ಮತ್ತು ಅಫಜಲಪುರದಲ್ಲಿ ಬಿಜೆಪಿ ಕಾರ್ಯಕರ್ತರ ಕೊಲೆಯಾಗಿದೆ. ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡಿದವರಿಗೆ ಕಾಂಗ್ರೇಸ್ಸಿಗರು ಬ್ರದರ್ಸ್ ಎಂದು ಕರೆಯುತ್ತಾರೆ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಆಗಿದೆ. ಡಿಜೆಹಳ್ಳಿ ಕೆಜೆಹಳ್ಳಿ ಘಟನೆಗೆ ಸಂಬಂಧಿಸಿದವರೇ ಈ ಬ್ಲಾಸ್ಟ್‍ಗೆ ಕಾರಣರಾಗಿರಬಹುದು ಎಂದು ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕಾಂಗ್ರೇಸ್ ಪಕ್ಷ ತುಷ್ಠಿಕರಣ ನೀತಿ ಅನುಸರಿಸುತ್ತಿದೆ. ಬಿ.ಕೆ.ಹರಿಪ್ರಸಾದ್ ಅವರು ಪಾಕಿಸ್ತಾನ ನಮ್ಮ ಶತೃರಾಷ್ಟ್ರವಲ್ಲ. ಅದು ನಮ್ಮ ನೆರೆರಾಷ್ಟ್ರ ಎಂದು ಹೇಳುತ್ತಾರೆ. ಈ ನಿಟ್ಟಿನಲ್ಲಿ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಪಾಟೀಲ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ರು.
ಮುಂದುವರೆದು ಮಾತನಾಡಿದ ಪಾಟೀಲ ಅವರು ಲೋಕಸಭಾ ಚುನಾವಣೆಗೆ ಯಾರು ಅಭ್ಯರ್ಥಿಗಳಾಗಬೇಕು ಎಂಬುದಕ್ಕೆ ಇಡೀ ದೇಶದಲ್ಲಿ ಆಯಾ ಕ್ಷೇತ್ರದ ಕಾರ್ಯಕರ್ತರ ಅಭಿಪ್ರಾಯ ಪಡೆದುಕೊಳ್ಳಲಾಗುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕ್ಷೇತ್ರದಿಂದ ಹಿಡಿದು ಇಡೀ ದೇಶದಲ್ಲಿ ಒಂದು ಕ್ಷೇತ್ರದಲ್ಲಿ ಮೂವರು ಆಕಾಂಕ್ಷಿಗಳ ಹೆಸರು ಕಾರ್ಯಕರ್ತರು ಸೂಚಿಸಬೇಕು. ಈ ನಿಯಮ ಭಾರತೀಯ ಜನತಾ ಪಕ್ಷ ಮಾಡಿದೆ. ಜಿಲ್ಲೆಯಲ್ಲಿಯೂ ಅದೇ ನೀತಿ ಅನುಸರಿಸುತ್ತಿದ್ದೇವೆ. ವೀಕ್ಷಕರಾಗಿ ಜಿಲ್ಲೆಗೆ ಬೆಳಗಾವಿ ಶಾಸಕ ಅಭಯ ಪಾಟೀಲ ಹಾಗೂ ಮಾಜಿ ಶಾಸಕ ರಾಜೂಗೌಡ ಆಗಮಿಸಿದ್ದಾರೆ ಎಂದು ತಿಳಿಸಿದರು.
ಮಾಜಿ ಸಚಿವರು ಹಾಗೂ ಹಾಲಿ ಔರಾದ ಶಾಸಕ ಪ್ರಭು ಚವ್ಹಾಣ ಮಾತನಾಡಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ನಾಸಿರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದು ಕಾನೂನಾತ್ಮಕವಾಗಿ ಸಾಬೀತಾದರು ಆರೋಪಿಗಳನ್ನು ಬಂಧಿಸದೆ ಸರ್ಕಾರ ಕಣ್ಮುಚ್ಚಿ ಕುಳಿತದೆ. ಕೂಡಲೇ ನಾಸಿರ್ ಹುಸೇನ್ ಅವರನ್ನು ರಾಜ್ಯಸಭಾ ಸದಸ್ಯತ್ವದಿಂದ ವಜಾ ಮಾಡಬೇಕು. ಸರ್ಕಾರವನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದರು. ಪಶು ಸಂಗೋಪನೆ ಇಲಾಖೆ ಸಂಪೂರ್ಣ ಮುಚ್ಚಿ ಹೋಗಿದೆ. ಪ್ರಾಣಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಬರಗಾಲ ಘೋಷಣೆಯಾದರೂ ನಯಾಪೈಸೆ ಹಣ ಸರ್ಕಾರ ಬಿಡುಗಡೆ ಮಾಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಮೊದಲು ಬರಗಾಲದ ಅನುದಾನ ಬಿಡುಗಡೆ ಮಾಡಿಸಲಿ ಎಂದರು. ಬೀದರ ಲೋಕಸಭಾ ಕ್ಷೇತ್ರದಲ್ಲಿ ಬೂತ್ ಮಟ್ಟದ ಅಧ್ಯಕ್ಷರಿಗೆ ಟಿಕೇಟ್ ಕೊಟ್ಟರೂ 2 ಲಕ್ಷ ಅಂತರದಿಂದ ಗೆಲ್ಲಿಸಿ ಸಂಸತ್‍ಗೆ ಕಳುಹಿಸುತ್ತೇವೆ ಎಂದು ತಿಳಿಸಿದರು.
ವಿಧಾನ ಪರಿಷತ ಸದಸ್ಯ ರಘುನಾಥರಾವ ಮಲ್ಕಾಪುರೆ ಮಾತನಾಡಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿದ ಬಜೇಟ್ ಅತ್ಯಂತ ಕೆಟ್ಟ ಬಜೇಟ್ ಇದಾಗಿದೆ. ಈ ಬಜೇಟ್‍ನಲ್ಲಿ ಅನುದಾನದ ಕ್ರೂಢಿಕರಣ ಮತ್ತು ಖರ್ಚಿನ ಯೋಜನೆ ಇಲ್ಲ. ಬಜೇಟ್‍ನಲ್ಲಿ ದೂರದೃಷ್ಟಿ ಇಲ್ಲ. ಒಟ್ಟಿನಲ್ಲಿ ಇದೊಂದು ದಿಕ್ಕು ದೆಸೆಯಿಲ್ಲದ ಬಜೇಟ್ ಆಗಿದೆ ಎಂದು ತಿಳಿಸಿದರು. ಜನರಿಗೆ ಪಂಚ ಗ್ಯಾರಂಟಿಗಳ ಆಮಿಷವೊಡ್ಡಲಾಗಿದೆ. ಅಭಿವೃದ್ಧಿ ಆಗುತ್ತಿಲ್ಲ ಎಂದು ಕಾಂಗ್ರೇಸ್ ಸಚಿವರುಗಳೇ ನೋವು ತೋಡಿಕೊಂಡಿದ್ಧಾರೆ ಎಂದರಲ್ಲದೆ ಇಂಡಿಯಾದಲ್ಲಿ ಬಿಕ್ಕಟ್ಟು, ಎನ್‍ಡಿಎ ದಲ್ಲಿ ಒಗ್ಗಟ್ಟಿದೆ. ರಾಜ್ಯದಲ್ಲಿ ಬಿಜೆಪಿ 25 ಸೀಟ್‍ಗಳಲ್ಲಿ ಗೆಲ್ಲಲಿದೆ. ಬಿಜೆಪಿ ಜೆಡಿಎಸ್ ಕೂಡಿ 28 ಸೀಟ್‍ಗಳಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಹುಮನಾಬಾದ ಶಾಸಕ ಸಿದ್ದು ಪಾಟೀಲ, ಬಸವಕಲ್ಯಾಣ ಶಾಸಕ ಶರಣು ಸಲಗರ, ಚಿಂಚೋಳಿ ಶಾಸಕ ಡಾ.ಅವಿನಾಶ ಜಾಧವ, ಆಳಂದ ಮಾಜಿ ಶಾಸಕ ಸುಭಾಷ ಗುತ್ತೇದಾರ್, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಬಿಜೆಪಿ ವಕ್ತಾರ ಸದಾನಂದ ಜೋಶಿ, ಮುಖಂಡರಾದ ಈಶ್ವರಸಿಂಗ್ ಠಾಕೂರ್, ಬಸವರಾಜ ಪವಾರ್, ಮಾಧ್ಯಮ ಸಂಚಾಲಕ ಶ್ರೀನಿವಾಸ ಚೌಧರಿ, ಸಂಗಮೇಶ ನಾಸಿಗಾರ್ ಇದ್ದರು.