ವಿಜಯ್ ಕುಮಾರ್ ಕೊಲೆ ಪ್ರಕರಣ ೭ ಜನ ಆರೋಪಿಗಳ ಬಂಧನ
ಆನೇಕಲ್. ಮಾ. ೩- ಮರಸೂರು ಗ್ರಾಮದಲ್ಲಿ ಫೆ. ೨೫ ರಂದು ವಿಜಯ್ ಕುಮಾರ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ ೦೭ ಜನ ಆರೋಪಿಗಳನ್ನು ಸೂರ್ಯನಗರ ಪೋಲಿಸರು ಬಂದಿಸಿದ್ದಾರೆ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅವರು ಹೆಬ್ಬಗೋಡಿಯ ಡಿವೈಎಸ್ಪಿ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಫೆಬ್ರವರಿ ೨೫ ರಂದು ಬೆಳಗಿನ ಜಾವ ೦೪ ಸಮಯದಲ್ಲಿ ಮರಸೂರು ಗ್ರಾಮದಲ್ಲಿ ವಿಜಯ್ ಕುಮಾರ್ ನನ್ನು ಕೊಲೆ ಮಾಡಲಾಗಿತ್ತು. ಪ್ರಕರಣವನ್ನು ದಾಖಲಿಸಿಕೊಂಡ ಸೂರ್ಯ ನಗರ ಪೋಲಿಸ್ ಠಾಣೆಯ ಇನ್ಸ್ ಪೆಕ್ಟರ್ ಮಹಾಜನ್ ಮತ್ತು ಅವರ ತಂಡ ಮಿಂಚಿನ ಕಾರ್ಯಾರಣೆ ನಡೆಸಿ ಕೊಲೆಗೆ ಸಂಬಂದಿಸಿದಂತೆ ಸುಮಾರು ೭ ಆರೋಪಿಗಳನ್ನು ಬಂದಿಸಿದ್ದಾರೆ ಹಾಗೆಯೇ ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂದಿತ ಆರೋಪಿಗಳಾದ ಅರ್ಜುನ್ ಆವಡದೇನಹಳ್ಳಿ ಗ್ರಾಮದ ನಿವಾಸಿ, ಬಾಸ್ಕರ್ ಕಾವಲಹೊಸಹಳ್ಳಿ ನಿವಾಸಿ, ಮಹೇಶ್ ರಾಜಾಪುರ, ಮುರುಗೇಶ್ ಅಂಚೆಟ್ಟಿ, ಹೇಮಂತ ದೊಡ್ಡಬ್ಯಾಳಗೊಂಡನಹಳ್ಳಿ, ಸಂದೀಪ ಆವಡದೇನಹಳ್ಳಿ, ಪುನೀತ ಬೊಮ್ಮಸಂದ್ರ ಗ್ರಾಮದ ನಿವಾಸಿಯಾಗಿದ್ದಾರೆ.
ಬಂದಿತ ಆರೋಪಿ ಅರ್ಜುನ್ ತಮ್ಮನಾದ ಮನೋಜ್ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಮೃತ ವಿಜಯ್ ಕುಮಾರ್ ಮತ್ತು ಯಶವಂತ ಎಂಬುವರು ೬ ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಪ್ರಕರಣ ಖುಲಾಸೆ ಆದ ನಂತರ ಆಗಸ್ಟ್ ೨೦೨೩ ರಲ್ಲಿ ಜೈಲಿನಿಂದ ಹೊರ ಬಂದಿದ್ದು. ತನ್ನ ತಮ್ಮ ಮನೋಜ್ ಕೊಲೆಗೆ ಕಾರಣರಾದ ವಿಜಯ್ ಕುಮಾರ್ ಮತ್ತು ಯಶವಂತನನ್ನು ಮುಗಿಸಲೇ ಬೇಕು ಎಂದು ಅರ್ಜುನ್ ಒಂದು ತಂಡವನ್ನು ರೂಪಿಸಿಕೊಂಡು ಒಳ ಸಂಚು ಮಾಡಿರುತ್ತಾರೆ. ವಿಷಯ ತಿಳಿದ ಯಶವಂತ ತಲೆ ಮರೆಸಿಕೊಂಡು ಹೊರಟು ಹೋಗಿರುತ್ತಾನೆ, ಬಹು ದಿನಗಳಿಂದ ಕಾದಿದ್ದ ಅರ್ಜುನ್ ಮತ್ತು ಅವರ ತಂಡ ಫೆಬ್ರವರಿ ೨೫ ರಂದು ಬೆಳಗಿನ ಜಾವ ೪ ಗಂಟೆ ಸಮಯದಲ್ಲಿ ವಿಜಯ್ ಕುಮಾರ್‌ನನ್ನು ಅವರ ಮನೆ ಬಳಿಯಲ್ಲಿಯೇ ವಿಜಯ್ ಕುಮಾರ್ ನನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಿ ಪರಾರಿಯಾಗಿರುತ್ತಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಡಿಶಿನಲ್ ಎಸ್ಪಿ ಪುರುಷೋತ್ತಮ್, ಡಿವೈಎಸ್ಪಿ ಮೋಹನ್ ಕುಮಾರ್, ಕೊಂಡ ಸೂರ್ಯ ನಗರ ಪೋಲಿಸ್ ಇನ್ಸ್ ಪೆಕ್ಟರ್ ಮಹಾಜನ್ ಹಾಜರಿದ್ದರು.