ಪಿಯು ಪರೀಕ್ಷೆ;ಮೊದಲ ದಿನ ನಿರಾತಂಕ
ವಿಜಯಪುರ, ಮಾ. ೩: ಪಟ್ಟಣದಲ್ಲಿ ಎರಡು ಪಿಯು ಪರೀಕ್ಷಾ ಕೇಂದ್ರಗಳಿದ್ದು, ವಿದ್ಯಾರ್ಥಿಗಳು ಭಯ ಆತಂಕ ಇಲ್ಲದೆ ಪರೀಕ್ಷೆಗೆ ಆತ್ಮ ವಿಶ್ವಾಸದಿಂದ ಬಂದಿದ್ದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಟ್ಟಣದ ಪ್ರಗತಿ ಕಾಲೇಜಿನ ೩೪೯ ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ ಪ್ರಗತಿ ಕಾಲೇಜಿನಲ್ಲಿ ಪಟ್ಟಣದ ಇತರೆ ಖಾಸಗಿ ಕಾಲೇಜುಗಳ ಒಟ್ಟು ೩೩೯ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ಪ್ರಗತಿ ಕಾಲೇಜಿನ ವಿದ್ಯಾರ್ಥಿನಿ ನೇಹ ಮಾತನಾಡಿ, ಇಂದು ಕನ್ನಡ ಪರೀಕ್ಷೆ ಇದ್ದು, ಪರೀಕ್ಷೆ ಗೆ ಉಪನ್ಯಾಸಕರ ಮಾರ್ಗದರ್ಶನದಂತೆ ಚೆನ್ನಾಗಿ ತಯಾರಿ ನಡೆಸಿದ್ದೇವೆ. ಕಳೆದ ಸಾಲಿನಲ್ಲಿ ೧೦೦ ಅಂಕಗಳಿಗೆ ಇರುತ್ತಿದ್ದ ಪ್ರಶ್ನೆ ಪತ್ರಿಕೆ ಈ ಬಾರಿ ೮೦ ಅಂಕಗಳಿಗೆ ಇದ್ದು, ೨೦ ಅಂಕಗಳು ಇಂಟರ್ನಲ್ಸ್ ಇದೆ. ಬ್ಲೂ ಪ್ರಿಂಟ್ ಪ್ರಕಾರ ಪರೀಕ್ಷೆಗೆ ಸಿದ್ದತೆ ನಡೆಸಿದ್ದೇನೆ. ೧೦೦ ಕ್ಕೆ ೧೦೦ ಅಂಕ ಗಳಿಸುವ ವಿಶ್ವಾಸವಿದೆ ಎಂದು ತಿಳಿಸಿದರು.
ಪ್ರಗತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪುಷ್ಪಾಂಜಲಿ ಮಾತನಾಡಿ, ಈ ಬಾರಿ ಪ್ರಶ್ನೆ ಪ್ರತಿಕೆಯ ಮಾದರಿ ಬದಲಾಗಿದ್ದು, ಅದಕ್ಕೆ ತಕ್ಕಂತೆ ಶಿಕ್ಷಕರು ನಮ್ಮನ್ನು ಪೂರ್ವ ಸಿದ್ದತೆಗೊಳಿಸಿದ್ದಾರೆ. ಎಲ್ಲಾ ವಿಷಯಗಳಲ್ಲಿ ಪಠ್ಯಪುಸ್ತಕವನ್ನು ಹೆಚ್ಚು ಓದಿದ್ದು, ಯಾವುದೇ ಭಯ ಆತಂಕ ಇಲ್ಲದೆ ಪರೀಕ್ಷೆ ಎದುರಿಸುತ್ತಿದ್ದೇವೆ ಎಂದು ತಿಳಿಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಕೆ.ಎಂ. ಭಾರತಿ ಮಾತನಾಡಿ, ಪಿಯು ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯ ಮೊದಲ ದಿನದಂದು ಕನ್ನಡ ಭಾಷಾ ವಿಷಯ ಬರೆಯುತ್ತಿದ್ದು, ಪಿಯು ಇಲಾಖೆ ಇಂದ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ನೀಡಿದ್ದು, ಶಿಕ್ಷಕರಾದ ನಾವು ವಿದ್ಯಾರ್ಥಿಗಳಿಗೆ ಸಕಲ ಸಿದ್ದತೆ ಮಾಡಿದ್ದೇವೆ. ವಿದ್ಯಾರ್ಥಿಗಳ ಭವಿಷ್ಯದ ಹಿತ ದೃಷ್ಟಿಯಿಂದ ಶಿಕ್ಷಕರು ಸಹ ಹೆಚ್ಚಿನ ಆಸಕ್ತಿ ವಹಿಸಿ ಪರಿಶ್ರಮ ಪಟ್ಟು ವಿದ್ಯಾರ್ಥಿಗಳನ್ನು ಹೆಚ್ಚು ಅಂಕ ಗಳಿಸಲು ತಯಾರು ಮಾಡಿದ್ದೇವೆ. ನಮ್ಮ ಕಾಲೇಜಿನ ೧೫೮ ವಿದ್ಯಾರ್ಥಿಗಳು ಇಂದು ಕನ್ನಡ ವಿಷಯದ ಪರೀಕ್ಷೆ ಬರೆಯುತ್ತಿದ್ದಾರೆ ಎಂದು ತಿಳಿಸಿದರು.