ವರ್ಷ ಪೂರ್ತಿ ವಸ್ತು ಪ್ರದರ್ಶನ ನಡೆಸಲು ಚಿಂತನೆ: ಅಯೂಬ್ ಖಾನ್
ಸಂಜೆವಾಣಿ ನ್ಯೂಸ್
ಮೈಸೂರು: ಮಾ.03:- ನಾವೆಲ್ಲರೂ ತಿಳಿದಿರುವಂತೆ ವಸ್ತುಪ್ರದರ್ಶನವನ್ನು ವರ್ಷಪೂರ್ತಿ ನಡೆಸಲು ಬೇಕಾಗಿರುವ ಅಗತ್ಯವನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ನನ್ನ ಚಿಂತನೆ ಆಗಿದೆ ಎಂದು ನೂತನ ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ನೂತನ ಅಧ್ಯಕ್ಷ ಅಯೂಬ್‍ಖಾನ್ ತಿಳಿಸಿದರು.
ಶನಿವಾರ ವಸ್ತುಪ್ರದರ್ಶನ ಆವರಣದಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ತುಂಬಾ ಸಂತೋಷ ಆಗುತ್ತಿದೆ. ನನ್ನ ನಾಯಕರಾದ ಸಿಎಂ ಸಿದ್ದರಾಮಯ್ಯ ಹಾಗೂ ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಸೇರಿ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಇಲ್ಲಿನ ಆರ್ಥಿಕ ಪರಿಸ್ಥಿತಿ ಬಗ್ಗೆ ನನಗೆ ಗೊತ್ತಿಲ್ಲ. ನಾಳೆ ಅಥವಾ ನಾಳಿದ್ದು ಒಂದು ಸಭೆ ನಡೆಸಿ ಎಲ್ಲವನ್ನು ಅರ್ಥ ಮಾಡಿಕೊಳ್ಳುತ್ತೇನೆ. ಆದರೆ, ಅಧಿಕಾರ ಸ್ವೀಕರಿಸಿದ ಬಳಿಕ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಇಡೀ ರಾಜ್ಯಕ್ಕೆ ಮಾದರಿಯಾಗಬೇಕೆಂಬ ಅಭಿಲಾಷೆಯಿದೆ. ವರ್ಷಪೂರ್ತಿ ನಡೆದರೆ ಮಾತ್ರವೇ ಅಂತಹ ಖ್ಯಾತಿ ಪಡೆಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಅಂತಹ ಕಾರ್ಯ ಮಾಡುತ್ತಿದ್ದೇನೆಂದರು.
ಮೈಸೂರು ನಗರದಲ್ಲಿ 30 ಎಕರೆ ಜಾಗವಿದ್ದರೂ ಸಹ ನಗರದ ಅನೇಕ ಕಡೆಗಳಲ್ಲಿ ವಸ್ತು ಪ್ರದರ್ಶನ, ಗೃಹಶೋಭೆ, ಕೈಗಾರಿಕೆಗಳ ಪ್ರದರ್ಶನ ನಡೆಯುತ್ತಲೇ ಇವೆ. ಇವೆಲ್ಲವನ್ನೂ ಒಂದೇಸೂರಿನಡಿಗೆ ತಂದಾಗ ಅನೂಕೂಲ ಆಗಲಿದೆ. ಆಗ ಮಾತ್ರವೇ ವರ್ಷಪೂರ್ತಿ ತೆರೆದಿರಲಿದೆ. ಅಧಿಕಾರಿಗಳು ಹಾಗೂ ಸಿಎಂ ಜತೆಗೆ ಕುರಿತು ಈ ಬಗ್ಗೆ ಚರ್ಚಿಸುತ್ತೇನೆಂದರು.
ನಾನು ಚಿಕ್ಕವನ್ನಿದ್ದಾಗ ಪದೇ ಪದೇ ವಸ್ತುಪ್ರದರ್ಶನಕ್ಕೆ ಬರುತ್ತಿದ್ದೇವು. ಇತ್ತೀಚಿನ ದಿನಗಳಲ್ಲಿ ಒಮ್ಮೆ ಬಂದವರೂ ಮತ್ತೆ ಬರುತ್ತಿಲ್ಲ. ಈ ಕುರಿತು ಎನೂ ಮಾಡಬಹುದು ಎಂಬ ಚಿಂತನೆ ಮಾಡುತ್ತೇವೆ. ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಅಭಿವೃದ್ಧಿ ಮಾಡಲು ಶ್ರಮಿಸುತ್ತಾರೆ. ವಸ್ತುಪ್ರದರ್ಶನದ ಮೂಲಕವೂ ಪ್ರವಾಸಿಗರನ್ನು ಸೆಳೆಯುವ ಪ್ರಯತ್ನ ಮಾಡುತ್ತೇನೆಂದರು.
ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರೂ ಸೇರಿ ಕ್ಯಾಬಿನೆಟ್ ದರ್ಜೆಯ ಹುದ್ದೆಯಾಗಿರುವ ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಘೋಷಣೆ ಮಾಡಿದ್ದರು. ಆದರೆ, ನಾನು ಸಿಎಂ ಸಿದ್ದರಾಮಯ್ಯ ಅವರ ಬಳಿ ನಾನು 25 ವರ್ಷಗಳಿಂದ ಜನರೊಟ್ಟಿಗೆ ಬೆರೆತು ಕೆಲಸ ಮಾಡಿಕೊಂಡು ಬಂದಿದ್ದೇನೆ. ಪಾಲಿಕೆ ಸದಸ್ಯನಾಗಿ, ಮೇಯರ್ ಆಗಿ ಹಾಗೂ ಆಡಳಿತ, ವಿರೋಧ ಪಕ್ಷದ ನಾಯಕನಾಗಿಯೂ ಕೆಲಸ ಮಾಡಿದ್ದೇನೆ. ಅಂತೆಯೇ ಜನರ ಮಧ್ಯೆ ಕೆಲಸ ಮಾಡುವ ಆಸೆಯನ್ನು ಸಿದ್ದರಾಮಯ್ಯನವರ ಬಳಿ ಹೇಳಿಕೊಂಡೆ ಬಳಿಕ ಈ ಹುದ್ದೆ ಕೊಟ್ಟರು ಎಂದು ಹೇಳಿದರು.
ಇದು ಪ್ರವಾಸೋದ್ಯಮ ಇಲಾಖೆಯ ವ್ಯಾಪ್ತಿಯಲ್ಲಿ ನಡೆಯಬೇಕಾದ ಅಭಿವೃದ್ಧಿ ಆಗಿರುವುದರಿಂದ ಹದಿನೈದು ದಿನಗಳಲ್ಲಿ ಎನೂ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ಮುಂಬರುವ ಚುನಾವಣೆಯಲ್ಲಿ ಪಕ್ಷದ ಎಲ್ಲರನ್ನೂ ಕರೆದೊಯ್ಯುವ ಮೂಲಕ ಮೈಸೂರು ಕ್ಷೇತ್ರವನ್ನು ಗೆದ್ದು ತೋರಿಸುವ ಕೆಲಸ ಮಾಡುತ್ತೇವೆ. ಇನ್ನೂ ಸಂಸದ ಪ್ರತಾಪಸಿಂಹ ಅವರು ಜಾತಿ ಜಾತಿ ನಡುವೆ ಎತ್ತಿ ಕಟ್ಟುವುದು ಹಾಗೂ ಸುಳ್ಳು ಹೇಳುವುದನ್ನೇ ಹೆಚ್ಚಾಗಿಸಿಕೊಂಡಿರುವ ರಿಪೆÇೀರ್ಟ್ ಕಾರ್ಡ್ ನಮ್ಮ ಬಳಿಯೂ ಇದೆ. ನಾನೇ ಹೈವೆ, ಟ್ರೈನ್ ತಂದಿದ್ದೇನೆಂದು ಹೇಳುತ್ತಿದ್ದಾರೆ ಹೊರತು ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲವೆಂದು ಪ್ರತಿಕ್ರಯಿಸಿದರು. ನನಗೆ ಜವಾಬ್ದಾರಿ ಕೊಟ್ಟಿದ್ದಾರೆ ಹೊರತು ಅಧಿಕಾರವನ್ನಲ್ಲ. ಪಕ್ಷ ಕೊಟ್ಟಿರುವ ಜವಾಬ್ದಾರಿಯನ್ನು ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡಿ ತೋರಿಸುತ್ತೇನೆ. ರಾಜಕೀಯದಲ್ಲಿ ಆಸೆ ಇದ್ದೇ ಇರುತ್ತದೆ. ಮುಂದಿನ ದಿನಗಳಲ್ಲಿಯೂ ಅದೇ ಆಸೆಯನ್ನಿಟ್ಟುಕೊಂಡು ಕೆಲಸ ಮಾಡಿಕೊಂಡು ಹೋಗುತ್ತಿರುತ್ತೇನೆಂದು ಶಾಸಕ ಸ್ಥಾನದ ಆಕಾಂಕ್ಷೆ ಕುರಿತು ಪ್ರತಿಕ್ರಯಿಸಿದರು.
ಶಾಸಕರಾದ ಹರೀಶ್‍ಗೌಡ, ತನ್ವೀರ್‍ಸೇಠ್, ಸಿ.ಎನ್.ಮಂಜೇಗೌಡ, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಮಾಜಿ ನಗರಪಾಲಿಕೆ ಸದಸ್ಯರು ಸೇರಿ ಅನೇಕ ಅಭಿಮಾನಿಗಳ ದಂಡೇ ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.