ಕ್ರೀಡೆಯಿಂದ ದೈಹಿಕ, ಮಾನಸಿಕ ಆರೋಗ್ಯ ಉತ್ತಮಗೊಳ್ಳಲಿದೆ: ಸಿ.ಜಿ. ಚಂದ್ರಶೇಖರ್
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮಾ.03- ಪ್ರತಿಯೊಬ್ಬರು ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮಗೊಳ್ಳಲಿದೆ ಎಂದು ನಗರಸಭೆ ಸದ್ಯಸ ಸಿ.ಜಿ. ಚಂದ್ರಶೇಖರ್ ಅವರು ತಿಳಿಸಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಚಾಮರಾಜನಗರ ಜಿಲ್ಲಾಮಟ್ಟದ ಗ್ರಾಮೀಣ ಕ್ರೀಡಾ ಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಪಠ್ಯೇತರ ಚಟುವಟಿಕೆಯಾಗಿರುವ ಕ್ರೀಡೆಗೂ ಹೆಚ್ಚಿನ ಮಹತ್ವ ನೀಡಬೇಕು. ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಭಾಗವಹಿಸುವಿಕೆ ಪ್ರಮುಖವಾಗಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಇದೊಂದು ಸದಾವಕಾಶವಾಗಿದೆ. ಕ್ರೀಡಾಕೂಟದಲ್ಲಿ ಭಾವಹಿಸುವ ಎಲ್ಲರೂ ಕ್ರೀಡಾ ಮನೋಭಾವ ಮೆರೆಯಬೇಕು. ಆ ಮೂಲಕ ರಾಜ್ಯಮಟ್ಟದಲ್ಲಿ ಜಿಲ್ಲೆಗೆ ಉತ್ತಮ ಹೆಸರು ತರಬೇಕು ಎಂದರು.
ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಸದಸ್ಯ ಶ್ರೀನಿವಾಸ ಪ್ರಸಾದ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ತಾಲೂಕು ಮಟ್ಟದಲ್ಲಿ ಆಯ್ಕೆಯಾದವರಿಗೆ ಕ್ರೀಡೆಯಲ್ಲಿ ತಮ್ಮ ಕೌಶಲ್ಯ ಪ್ರದರ್ಶಿಸಲು ಜಿಲ್ಲಾ ಕ್ರೀಡಾಕೂಟ ವೇದಿಕೆ ಕಲ್ಪಿಸಿದೆ. ಗಾಮೀಣ ಪ್ರತಿಭೆಗಳು ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು.
ವಿವಿಧ ಕ್ರೀಡಾ ಕೂಟಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಏಕ ಸ್ವರೂಪದ ಸಮವಸ್ತ್ರವನ್ನು ಇಲಾಖೆ ಒದಗಿಸಬೇಕು ಎಂದರು.
ಜಿಲ್ಲಾ ಕ್ರೀಡಾಂಗಣ 2002ರಲ್ಲಿ ಉದ್ಘಾಟನೆಗೊಂಡು 23 ವರ್ಷಗಳನ್ನು ಪೂರ್ಣಗೊಳಿಸಿದೆ. ಹಲವಾರುತಾಂತ್ರಿಕ ಕಾರಣಗಳಿಂದ ಕ್ರೀಡಾಂಗಣಕ್ಕೆ ಸಂಪೂರ್ಣವಾಗಿ ಮೂಲ ಸೌಕರ್ಯಗಳನ್ನು ಕಲ್ಪಿಸಲು ವಿಳಂಬವಾಗುತ್ತಿದೆ. ಕ್ರೀಡಾಂಗಣದ ಅಭಿವೃದ್ಧಿಗಾಗಿ ಕ್ರೀಯಾಶೀಲ ಜಿಲ್ಲಾಧಿಕಾರಿಯವರು ಕ್ರೀಡಾಂಗಣಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಅವಶ್ಯವಾಗಿರುವ ಮೂಲಸೌಲಭ್ಯಗಳನ್ನು ಒದಗಿಸಲು ಮುಂದಾಗಿದ್ದಾರೆ ಎಂದು ತಿಳಿಸಿದರು. ಸದ್ಯದಲ್ಲಿಯೇ ಕ್ರೀಡಾಂಗಣದಲ್ಲಿ 2 ಕೋಟಿರೂ. ವೆಚ್ಚದಲ್ಲಿ ಜಿಮ್ ವ್ಯವಸ್ಥೆಯಾಗಲಿದೆ. ಮಹಿಳಾ ಕ್ರೀಡಾ ವಿದ್ಯಾರ್ಥಿನಿಲಯ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ.
ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಜಿಲ್ಲಾಡಳಿತ ಅಗತ್ಯ ಸಹಕಾರ ನೀಡುತ್ತಿದೆ ಎಂದ ಶ್ರೀನಿವಾಸ ಪ್ರಸಾದ್ ಅವರು ಕ್ರೀಡೆಯಲ್ಲಿ ಉತ್ತಮ ಸಾಧನೆಗೈದವರಿಗೆ ಉದ್ಯೋಗದಲ್ಲಿ ಶೇ. 2ರಷ್ಟು ಮೀಸಲಾತಿ ವಿಧೇಯಕವನ್ನು ಸರ್ಕಾರ ಜಾರಿ ಮಾಡಿದೆ ಎಂದು ತಿಳಿಸಿದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಬಸವರಾಜು ಅವರು ಕ್ರೀಡಾಕೂಟದ ಬಗ್ಗೆ ಮಾತನಾಡಿದರು.
ಯುವ ಸಬಲೀಕರಣ ಮತ್ತು ಕ್ರೀಡಾಇಲಾಖೆಯ ಸಹಾಯಕ ನಿರ್ದೇಶಕರಾದ ಶಿವಸ್ವಾಮಿ, ಕ್ರೀಡಾಇಲಾಖೆಯ ತರಬೇತುದಾರರಾದ ಗೋಪಾಲ್, ತಾಲೂಕು ದೈಹಿಕ ಶಿಕ್ಷಣ ಸಂಘದ ಜಿಲ್ಲಾಧ್ಯಕ್ಷರಾದ ಚಿಕ್ಕಬಸವಯ್ಯ, ಕಾರ್ಯದರ್ಶಿ ಕುಮಾರಸ್ವಾಮಿ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.