ಮತದಾನವೆಂಬುದು ಪವಿತ್ರ ಕಾರ್ಯ : ಕುಲಪತಿ ಪೆÇ್ರ.ಬಿ.ಎಸ್.ಬಿರಾದಾರ
ಬೀದರ:ಮಾ.3:ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮತದಾನ ಮಹತ್ವದ ಪಾತ್ರ ವಹಿಸುತ್ತದೆ. ಸದೃಢ, ಸಮರ್ಥ ಸರ್ಕಾರ ರೂಪುಗೊಳ್ಳಲು ಮತದಾನ ಅವಶ್ಯಕವಾಗಿದೆ. ಜಗತ್ತಿನ ಬೃಹತ್ ಪ್ರಜಾಪ್ರಭುತ್ವವೆಂಬ ಖ್ಯಾತಿ ಗಳಿಸಿರುವ ಭಾರತ ದೇಶವು ಮಹತ್ವದ ಸ್ಥಾನದಲ್ಲಿದೆ. ಹೀಗಾಗಿ ಈ ಮತದಾನವೆಂಬುದು ಪವಿತ್ರವಾದ ಕಾರ್ಯವೆಂದು ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಪೆÇ್ರ.ಬಿ.ಎಸ್.ಬಿರಾದಾರರವರು ನುಡಿದರು.
ಅವರು ಬೀದರ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಬೀದರ ಹಾಗೂ ಬೀದರ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಮತದಾರರ ಸಾಕ್ಷರತಾ ಸಂಘದ ಒಂದು ದಿನದ ಕಾರ್ಯಾಗಾರ’ವನ್ನು ಉದ್ಘಾಟಿಸಿ ಮಾತನಾಡಿದರು. ಮುಂದುವರೆದು ಒಳ್ಳೆಯ ಅಭ್ಯರ್ಥಿಗೆ ಮತ ಹಾಕುವುದರಿಂದ ಸುಭದ್ರ ಸರಕಾರ ರಚನೆಯಾಗುತ್ತದೆ. ದೇಶದ ಭವಿಷ್ಯ ಮತದಾರರ ಮೇಲಿರುತ್ತದೆ. ಸರ್ವರೂ ಈ ಮತದಾನದ ಮಹತ್ವವನ್ನು ಸಮಾಜದಲ್ಲಿ ತಿಳಿಸಲು, ಜಾಗೃತಿ ಮೂಡಿಸಬೇಕಾದ ಅವಶ್ಯಕತೆಯಿದೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೀದರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಶ್ರೀ ಶಾಂತಲಿಂಗ ಸಾವಳಗಿಯವರು ಮಾತನಾಡುತ್ತಾ ಸಶಕ್ತ, ಭಾರತದ ಭವಿಷ್ಯ ಪ್ರಜೆಗಳು ಹಾಗೂ ಮತದಾರರ ಮೇಲಿದೆ ಹೀಗಾಗಿ ಎಲ್ಲರೂ ತಪ್ಪದೇ ಮತದಾನ ಮಾಡಬೇಕಾದ ಅನಿವಾರ್ಯತೆಯಿದೆ ಎಂದರು. ನಿರ್ಲಕ್ಷತನದಿಂದಾಗಿ ಎಷ್ಟೋ ಮತಗಳು ವ್ಯರ್ಥವಾಗುವ ಸಂಭವವಿರುತ್ತದೆ ಎಂದರು.
ಸ್ವೀಪ್‍ನ ನೋಡಲ್ ಅಧಿಕಾರಿಗಳು ಹಾಗೂ ರಾಜ್ಯ ಮಟ್ಟದ ಮಾಸ್ಟರ್ ತರಬೇತುದಾರರಾದ ಡಾ.ಗೌತಮ ಅರಳಿಯವರು ಈ ಕಾರ್ಯಾಗಾರದ ಕುರಿತ ತಮ್ಮ ಉಪನ್ಯಾಸದಲ್ಲಿ ಸುದೀರ್ಘವಾಗಿ ಮತದಾನದ ಇತಿಹಾಸ ಹಾಗೂ ಮಹತ್ವವನ್ನು ವಿವರಿಸಿದರು. ಜನೇವರಿ 25 – 1950ರಿಂದ ಇಲ್ಲಿಯವರೆಗಿನ ಮತದಾರರ ಕುರಿತ ಘಟನಾವಳಿಗಳನ್ನು ಉದಾಹರಣೆಯೊಂದಿಗೆ ತಿಳಿಸಿದರು. ಮತದಾನ ಹಿಂದೆಂದಿಗಿಂತಲೂ ಇಂದು ತುರ್ತಾಗಿದೆ ಎಂದರು. ಅವರು ವಿವಿಧ ಮಹಾವಿದ್ಯಾಲಯಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗೆ ಮತದಾನದ ಕುರಿತು ಮಹತ್ವದ ಮಾಹಿತಿಯನ್ನು ನೀಡಿದರು.
ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ್ದ ಬೀದರ ವಿಶ್ವವಿದ್ಯಾಲಯದ ಕುಲಸಚಿವರಾದ ಶ್ರಿ ಮಹ್ಮದ್ ಶಕೀಲ್‍ರವರು ಮಾತನಾಡುತ್ತ ಮತದಾರರ ಸಂಖ್ಯೆ ಅಧಿಕಗೊಳಿಸಲು ಹಾಗೂ ಹೊಸ ಮತದಾರರ ಸೇರ್ಪಡೆಗಾಗಿ ವರ್ಷದಲ್ಲಿ ನಾಲ್ಕು ಸಲ ಸೇರ್ಪಡೆಯ ದಿನಾಂಕಗಳನ್ನು ಸರ್ಕಾರ ನಿರಂತರವಾಗಿ ತಿಳಿಸಿದರೂ ಸಹ ಜನರು ಜಾಗೃತಗೊಳ್ಳುವಲ್ಲಿ ಯಶಸ್ವಿಯಾಗಿಲ್ಲವೆಂದರು. ಈಗಂತೂ ವಿಶೇಷಚೇತನರಿಗೆ ಹಾಗೂ 80 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರಿಗಾಗಿ ಅವರಿದ್ದಲ್ಲಿಯೇ ಚುನಾವಣಾ ಬೂತ್ ಕೊಂಡೊಯ್ಯುವ ಮಹತ್ವದ ನಿರ್ಧಾರ ಸರ್ಕಾರ ಕೈಗೊಂಡಿದೆ. ಇನ್ನು ಮುಂದಾದರೂ ಮತದಾನದ ಪ್ರಮಾಣ ಅಧಿಕವಾಗಬಹುದೆಂಬ ಆಶಾವಾದವನ್ನು ವ್ಯಕ್ತಪಡಿಸಿದರು. ಉತ್ತಮ ಮತದಾನದಿಂದ ಸದೃಢ ಸರ್ಕಾರ ರಚನೆಯಾಗಲು ಪೂರಕವಾಗುತ್ತದೆ. ಹಾಗಾಗಿ ಮತದಾನದ ಪ್ರಮಾಣ ಅಧಿಕವಾಗಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ವಿವಿಧ ಮಹಾವಿದ್ಯಾಲಯಗಳ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಕಾರ್ಯಾಗಾರದಲ್ಲಿ ಬೀದರ ವಿಶ್ವವಿದ್ಯಾಲಯದ ವಿಶೇಷಾಧಿಕಾರಿಗಳಾದ ಡಾ.ರವೀಂದ್ರನಾಥ.ವಿ.ಗಬಾಡಿಯವರು ಸರ್ವರನ್ನು ಸ್ವಾಗತಿಸಿದರು. ಡಾ.ಅಂಬರೀಶ ವೀರನಾಯಕ ವಂದಿಸಿದರು. ಡಾ.ಶಿವಕುಮಾರ ಸಂಗನ್ ನಿರೂಪಿಸಿದರು.