ಸ್ವಾಮಿಗಳು ಸಮಾಜದ ನಿಷ್ಠಾವಂತ ಸೇವಕರು: ಶ್ರೀ ಮುಪ್ಪಿನ ಬಸವಲಿಂಗ ಸ್ವಾಮಿಗಳು
ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಮಾ.02: ಸ್ವಾಮಿಗಳು ಮಠದ ಒಡೆಯರಲ್ಲ, ಸಮಾಜದ ನಿಷ್ಠಾವಂತ ಸೇವಕರು ಎಂದು ಹೊಸಪೇಟೆ ಕೊಟ್ಟೂರು ಸ್ವಾಮಿ ಮಠದ ಮುಪ್ಪಿನ ಬಸವಲಿಂಗ ಸ್ವಾಮಿಗಳು ಅಭಿಪ್ರಾಯಪಟ್ಟರು.
ಅವರು ಮರಿಯಮ್ಮನಹಳ್ಳಿಗೆ ಸಮೀಪದ ಜಿ.ನಾಗಲಾಪುರದ ಶ್ರೀಗುರು ಒಪ್ಪತ್ತೇಶ್ವರ ವಿರಕ್ತಮಠದಲ್ಲಿ ಪೂಜ್ಯಶ್ರೀ ನಿರಂಜನಪ್ರಭು ದೇಶಿಕರ ನಿರಂಜನ ಚರಪಟ್ಟಾಧಿಕಾರ ಮಹೋತ್ಸವದ ಪ್ರಯುಕ್ತ ಆಯೋಜಿಸಿದ್ದ ಶ್ರೀ ಯಡೆಯೂರು ಸಿದ್ದಲಿಂಗೇಶ್ವರ ಪುರಾಣ ಪ್ರವಚನ ಪ್ರಾರಂಭೋತ್ಸವ ಹಾಗೂ ಶ್ರೀ ಒಪ್ಪತ್ತೇಶ್ವರ ಸಮುದಾಯ ಭವನ ಉದ್ಘಾಟನಾ ಸಮಾರಂಭದಲ್ಲಿ ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಯಡೆಯೂರು ಶ್ರೀ ಸಿದ್ದಲಿಂಗೇಶ್ವರರು ಪರಮತಪಸ್ವಿಗಳಾಗಿದ್ಧರು. ವಿರಕ್ತ ಪರಂಪರೆಯ ಮಠಗಳಿಗೆ ಗುರುಪ್ರಾಯರಾಗಿರುವ ಶ್ರೀ ಯಡೆಯೂರು ಸಿದ್ದಲಿಂಗೇಶ್ವರರ ಮಾತೃಹೃದಯದಿಂದ ಅವರ ಗುರುಪರಂಪರೆಯಲ್ಲಿ ನಾವೆಲ್ಲ ತರಬೇತಿ ಹೊಂದಿ, ಮಠದ ಜವಾಬ್ದಾರಿಯನ್ನು ವಹಿಸಿಕೊಂಡು ಸಮಾಜದ ನಿಷ್ಠಾವಂತ ಸೇವೆಗೆ ಅಣಿಯಾದೆವು. ಮಠದ ಜವಾಬ್ದಾರಿ ಸುಲಭವಾದದ್ದು, ಆದರೆ ಸಮಾಜದ ಜವಾಬ್ದಾರಿ ತುಂಬಾ ಕಷ್ಟದ ಕೆಲಸ. ಈ ಸಂಕುಚಿತ ಮನೋಭಾವದ ಸಮಾಜದಲ್ಲಿ ಸ್ವಲ್ಪ ಹೆಚ್ಚುಕಮ್ಮಿಯಾದರೂ ಜನರ ಟೀಕೆಗಳನ್ನು ಎದುರಿಸಬೇಕಾಗುತ್ತದೆ. ಅವರೆಲ್ಲರ ಮನಸ್ಥಿತಿಯನ್ನು ಹೊಂದಿಸಿಕೊಂಡು ಹೋಗುವ ಗುರುತರ ಜವಾಬ್ದಾರಿ ಸ್ವಾಮಿಗಳದ್ಧಾಗಿರುತ್ತದೆ ಎಂದರು.
ಕಾರ್ಯಕ್ರಮಗಳನ್ನು ಆದರ್ಶಮಯವನ್ನಾಗಿ ಮಾಡಲು ಪ್ರವಚನಗಳು ಅತ್ಯವಶ್ಯಕ. ಆದರ್ಶಗಳಿಲ್ಲದ ಜೀವನ ವ್ಯರ್ಥ. ಮನಸ್ಥಿತಿ ಸರಿಯಾಗಬೇಕೆಂದರೆ ಈ ರೀತಿಯ ಪುರಾಣ ಪ್ರವಚನಗಳು ನಮ್ಮ ಜೀವನಕ್ಕೆ ಅತ್ಯವಶ್ಯಕ ಎಂದರು. ಅಲ್ಲದೇ ಪುರಾಣ ಪ್ರವಚನಗಳು ಮನುಷ್ಯನ ತಪ್ಪು ಹೆಜ್ಜೆಗಳಿಗೆ ಒಂದಷ್ಟು ಬೆಳಕನ್ನು ತೋರಿಸುವ ಪ್ರಯತ್ನವಾಗಿದೆ ಎಂದು ಅಭಿಪ್ರಾಯಪಟ್ಟರು. ಗ್ರಾಮದ ಅಭಿವೃದ್ಧಿ ಕುರಿತಾಗಿ ಮಾತನಾಡಿ ಪಟ್ಟಾಧಿಕಾರ ಕಾರ್ಯಕ್ರಮ ಮುಗಿಯುವುದರೊಳಗೆ ನಾಗಲಾಪುರ ಗ್ರಾಮ ಸ್ವಚ್ಛ ಗ್ರಾಮವಾಗುವುದರ ಸಂಕಲ್ಪ ಮಾಡಿ ಎಂದು ಗ್ರಾಮಸ್ಥರಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಉದ್ಘಾಟನೆ ಮಾಡಿದ ಮರಿಯಮ್ಮನಹಳ್ಳಿಯ ಶ್ರೀ ಗುರುಪಾದದೇವರ ಮಠದ ಶ್ರೀಗಳಾದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಇಂದು ಕರ್ನಾಟಕದಲ್ಲಿ ಮಾತ್ರವಲ್ಲದೇ ದೇಶದಾದ್ಯಂತ ಖಾವಿದಾರಿಗಳು ಕಾಣಲು ಕಾರಣ ಹಾನಗಲ್ ಕುಮಾರಸ್ವಾಮಿಗಳು ಎಂದರೇ ತಪ್ಪಾಗಲಾರದು. ಅಂತಹವರ ಗರಡಿಯಲ್ಲಿ ತಯಾರಾದವರು ನಿರಂಜನ ಪ್ರಭುಗಳು. ನಂತರ ಶಿವಯೋಗ ಮಂದಿರದ ಸ್ಥಾಪನೆ ಕುರಿತು ಸವಿವರವಾಗಿ ತಿಳಿಸಿದರು. ಮರಿಮಹಾಂತ ಸ್ವಾಮಿಗಳನ್ನ ನಾವು ಕಳೆದುಕೊಂಡು ಬಡವಾಗಿದ್ದ ನಮಗೆ ಮಾ.15ರಂದು ಸಮಾಜ ಸೇವೆಗಾಗಿ ತಮ್ಮನ್ನು ತೊಡಗಿಸಿಕೊಳ್ಳಲು ನಿರಂಜನ ದೇಶಿಕರು ಬರಲಿದ್ದಾರೆ. ಜೊತೆಗೆ ಶ್ರೀ ಒಪ್ಪತ್ತೇಶ್ವರ ಮಹಾಸ್ವಾಮಿಗಳ ಸಮಾಜ ಸೇವೆಯ ಜೊತೆ ಜೀವಂತ ಸಮಾದಿಯಾದ ವಿಚಾರಗಳನ್ನು ತಿಳಿಸಿದರು.
ಕಾರ್ಯಕ್ರಮದ ನೇತೃತ್ವವನ್ನು ಗರಗನಾಗಲಾಪುರದ ಶ್ರೀಗುರು ಒಪ್ಪತ್ತೇಶ್ವರ ವಿರಕ್ತರ ಮಠದ ಶ್ರೀ ನಿರಂಜನ ಪ್ರಭು ದೇಶೀಕರು ವಹಿಸಿಕೊಂಡಿದ್ದರು. ವೇದಿಕೆಯಲ್ಲಿ ಸೋಮಸಮುದ್ರ ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಶಾಖಾಮಠದ ಸಿದ್ದಲಿಂಗ ದೇಶಿಕರು, ಶ್ರೀಧರಗಡ್ಡೆ ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಶಾಖಾಮಠದ ಮರಿಕೊಟ್ಟೂರು ದೇಶಿಕರು, ವ್ಯಾಕರನಾಳದ ಶ್ರೀ ವಿಶ್ವೇಶ್ವರ ದೇವರು, ಬಿಎಂಎಂ ಕಂಪನಿಯ ಗಣೇಶ್ ಹೆಗಡೆ, ವಿಜಯನಗರ ಜಿಲ್ಲಾ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೃಷ್ಣನಾಯ್ಕ್, ವಿಜಯನಗರ ಜಿಲ್ಲಾ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ಶಿರಾಜ್ ಶೇಖ್, ಉಪಾಧ್ಯಕ್ಷ ಗಾದಿಗನೂರು ಹಾಲಪ್ಪ, ಮುಖಂಡರುಗಳಾದ ಗರಗ ಪ್ರಕಾಶ್, ಪಾಲಪ್ಪ, ಹಫೀಜ್ ಶೇಖ್ ಇದ್ದರು.
ಶುಕ್ರವಾರ ಮುಂಜಾನೆ ಯಶವಂತನಗರದ ಶ್ರೀ ಸಿದ್ದರಾಮೇಶ್ವರ ವಿರಕ್ತ ಮಠದ ಶ್ರೀ ಮ.ನಿ.ಪ್ರ. ಗಂಗಾಧರ ಮಹಾಸ್ವಾಮಿಗಳು ಷಟ್‌ಸ್ಥಲ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು. ಸಂಜೆ ಕಾರ್ಯಕ್ರಮದಲ್ಲಿ ಡಣಾಪುರ ಬಳಿಯ ಜೆಎಸ್‌ಡಬ್ಲ್ಯೂ ಬಿಎಂಎಂ ಕಂಪನಿಯವರ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡ ಕಲ್ಯಾಣಮಂಟಪ ಲೋಕಾರ್ಪಣೆಗೊಂಡಿತು.
ಕಾರ್ಯಕ್ರಮದಲ್ಲಿ ನಿಡಗುಂದಿಯ ಅನುಭಾವಿಗಳಾದ ಶ್ರೀ ಸಿದ್ದಲಿಂಗ ಶಾಸ್ತ್ರಿಗಳು ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀ ಶರಣಯ್ಯ ಗವಾಯುಗಳು ಸಂಗೀತ ನೀಡಿ, ಮಲ್ಲಿಕಾರ್ಜುನ ತಬಲಾ ಸಾಥ್ ನೀಡಿದರು. ನಾರಾಯಣ್ ರು ವಾಯಲಿನ್ ನೀಡಿದರು.
ಈ ಸಂದರ್ಭದಲ್ಲಿ ಒಪ್ಪತ್ತೇಶ್ವರ ಮಠದ ಅಭಿವೃದ್ದಿ ಕಮಿಟಿಯ ಹುಲಮನಿ ಕೊಟ್ರೇಶ್, ಗಂಡಿ ಬಸವರಾಜ್, ಗುರಿಕಾರ ಸತೀಶ್, ಅಣ್ಣಿ ಪಂಪಣ್ಣ, ಸದ್ಯೋಜಾತ ಶಾಸ್ತ್ರಿ, ಶಿವಪ್ರಕಾಶ್, ಸಿದ್ದಲಿಂಗಸ್ವಾಮಿ ಹಾಗೂ ಇತರರು ಇದ್ದರು.