ಮಗನ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ  ಮಹಾತಾಯಿ.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮಾ.2 : – ತಾಲೂಕಿನ ಆಲೂರು ಗ್ರಾಮದ ಬಾಲಕನ ಮೂಗಿನ ಶಸ್ತ್ರ ಚಿಕಿತ್ಸೆ ಫಲಪ್ರದವಾಗದೆ, ಇದೋಬ್ಬ 11ವರ್ಷದ ಮಗನನ್ನು ವಿಧಿಯಾಟದಲ್ಲಿ ಕಳಕೊಂಡ ತಾಯಿ, ತನ್ನ ಮಗನ ಅಂಗಾಂಗಗಳನ್ನು  ದಾನ ಮಾಡುವ ಮೂಲಕ ಮತ್ತೊಬ್ಬರ ಮಕ್ಕಳ ಜೀವ ಉಳಿಸುವ ಮಹಾತಾಯಿಯಾಗಿ ಸಾರ್ಥಕತೆ ಮೆರೆದ ಘಟನೆ ಬೆಂಗಳೂರಿನ ಎಂ ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಶುಕ್ರವಾರ ಸಂಜೆ ಜರುಗಿತು.
ಆಲೂರು ಗ್ರಾಮದ ಸುಸಂಸ್ಕೃತ ಕುಟುಂಬದ ಚಿಕ್ಕಣ್ಣಜ್ಜ ಅವರ ಪುತ್ರಿ ಟಿ.ಚೇತನಾ ಅವರ ಪುತ್ರ ಸಾತ್ವಿಕ್ ಅವರು ಕಾನಹೊಸಹಳ್ಳಿಯ ವೈಭವ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದು, ಮೂಗಿನ ಸಮಸ್ಯೆಯಿಂದ ಚಿತ್ರದುರ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಕ ಸಾತ್ವಿಕ್ ಅವರ ಮೂಗಿನ ಶಸ್ತ್ರಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ತೆರಳಿದ್ದು,ಬಾಲಕನ ಮೆದುಳು ನಿಷ್ಕ್ರಿಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಮೃತ ಬಾಲಕನ ತಾಯಿ ಚೇತನಾ ಅವರು ವೈಭವ ಶಾಲೆಯ  ಶಿಕ್ಷಕಿಯಾಗಿದ್ದು, ಇರುವ ಒಬ್ಬ ಮಗನ ಸಾವಿನಲ್ಲೂ ಇನ್ನೊಬ್ಬರ ಬಾಳಿಗೆ ಬೆಳಕಾಗಲಿ ಎನ್ನುವ ಕಾರಣದಿಂದ ತಾಯಿ ಮತ್ತು ಅವರ ಕುಟುಂಬದವರು ನಿರ್ಧರಿಸಿ ಅಂಗಾಂಗಗಳನ್ನು ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಕೂಡ್ಲಿಗಿ ಶಾಸಕ ಭೇಟಿ ಕುಟುಂಬಕ್ಕೆ ಸಾಂತ್ವನ : ನಾಲ್ಕನೇ ತರಗತಿ ಓದುತ್ತಿದ್ದ ಬಾಲಕ ಮೂಗಿನ ಶಸ್ತ್ರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಸುದ್ದಿ ತಿಳಿದ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಇಂದು ಬೆಳಿಗ್ಗೆ ಆಲೂರು ಗ್ರಾಮಕ್ಕೆ ಭೇಟಿ ನೀಡಿ ಮೃತ ಬಾಲಕನಿಗೆ ಸಂತಾಪ ಸೂಚಿಸಿ ಕುಟುಂಬಕ್ಕೆ ಸಾಂತ್ವನ ನೀಡಿದರು. ಜಿ ಪಂ ಮಾಜಿ ಸದಸ್ಯ ಶಶಿಧರ ಸ್ವಾಮಿ, ಕಾನಾಮಡುಗು ದಾಸೋಹ ಮಠದ ಐಮಡಿ ಶರಣಾರ್ಯ ರು ಹಾಗೂ ಇತರಿದ್ದರು.ಮೃತ ಬಾಲಕನ ಅಂತ್ಯಕ್ರಿಯೆ ತಾಲೂಕಿನ ಆಲೂರು ಗ್ರಾಮದ ವೀರಶೈವ ರುದ್ರಭೂಮಿಯಲ್ಲಿ ಇಂದು ಮಧ್ಯಾಹ್ನ ಜರುಗಿತು. ಇದ್ದೋಬ್ಬ ಮಗನನ್ನು ಕಳಕೊಂಡ ತಾಯಿಯ ಕಣ್ಣೀರಿನ ಕಂಬನಿ ಹರಿಸಿತು ಅಲ್ಲದೆ ಬಾಲಕನ ಸಾವು ಕಂಡು ಕಂಬನಿ ಹಾಕಿ ಮಮ್ಮಲ ಮರುಗಿದರು. ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು.