ತಂಬ್ರಹಳ್ಳಿಯಲ್ಲಿ ವಿಜೃಂಭಣೆಯ ವೀರಭದ್ರೇಶ್ವರ ಗುಗ್ಗಳ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ: ಮಾ.02 ತಾಲ್ಲೂಕಿನ ತಂಬ್ರಹಳ್ಳಿಯ ವೀರಭದ್ರೇಶ್ವರ ದೇವರ ಗುಗ್ಗಳ ಹಾಗೂ ಅಗ್ನಿ ಕುಂಡ ಹಾಯುವ ಕಾರ್ಯಕ್ರಮ  ಸಾವಿರಾರು ಭಕ್ತರ ನಡುವೆ ವಿಜೃಂಭಣೆಯಿಂದ ಗುರುವಾರ ನೆರವೇರಿತು.
ಬುಧವಾರದಿಂದಲೇ ಅಗ್ನಿ ಹಾಗೂ ಗುಗ್ಗಳ ನಿಮಿತ್ಯ ಸಂಪ್ರದಾಯದಂತೆ ನಾನಾ ಕಾರ್ಯಕ್ರಮಗಳು ನಡೆದವು ರಾತ್ರಿಯಿಡೀ  ಭಜನೆ ಏರ್ಪಡಿಸಲಾಗಿತ್ತು. ಗುರುವಾರ ಬೆಳಿಗ್ಗೆ 6 ಗಂಟೆಗೆ ಶ್ರೀ ವೀರಭದ್ರೇಶ್ವರ ದೇವರಿಗೆ ಮಹಾರುದ್ರಾಭಿಷೇಕ ಸೇರಿದಂತೆ ವಿಶೇಷ ಪೂಜೆ ನೆರವೇರಿಸಲಾಯಿತು. ನಂತರ ಗ್ರಾಮದ ವೀರಭದ್ರೇಶ್ವರ ಸ್ವಾಮಿ ಭಕ್ತರ ವಿವಿಧ ಮನೆಗಳಿಗೆ ತೆರಳಿ ಪುರವಂತರೊಂದಿಗೆ ವೀರಭಧ್ರೇಶ್ವರ ದೇವರನ್ನು ದೇವಸ್ಥಾನಕ್ಕೆ ಕರೆತರಲಾಯಿತು.
ನಂತರ 8 ಗಂಟೆಯ ಸುಮಾರಿಗೆ ದೇವಸ್ಥಾನದ ಆವರಣದಿಂದ ಗುಗ್ಗಳದ ಕೊಡಗಳನ್ನು ಹೊತ್ತ ಭಕ್ತಾಧಿಗಳು ವೀರಭದ್ರ ಕುಣಿತ, ಸಮಾಳ ಸೇರಿದಂತೆ ಇನ್ನಿತರ ಜನಪದ ಕಲಾ ವಾದ್ಯಗಳೊಂದಿಗೆ ಗುಗ್ಗಳವು ಗ್ರಾಮದ ಕಲ್ಲೇಶ್ವರ ದೇವಸ್ಥಾನದಿಂದ  ಸಂಚರಿಸಿ  ಮಧ್ಯಾಹ್ನ 1 ಗಂಟೆಗೆ ವೀರಭದ್ರೇಶ್ವರ ದೇವಸ್ಥಾನ ತಲುಪಿತು.
ಮೈನವಿರೇಳಿಸಿದ ಶಸ್ತ್ರಧಾರಿಗಳು ಪುರವಂತರು
ಗುಗ್ಗಳದ ಅಂಗವಾಗಿ ಸ್ವಾಮಿಯ ಭಕ್ತರು ಮಹಿಳೆಯರು ಯುವಕರು ಸೇರಿದಂತೆ  ವಿವಿಧ ಕಡೆ ಶಸ್ತ್ರಗಳನ್ನು ಹಾಕಿಸಿ ಕೊಂಡರು, ಕೆಲ ಯುವಕರು 2-3 ಶಸ್ತ್ರಗಳನ್ನು ಹಾಕಿಸಿಕೊಂಡು ವಾದ್ಯಗಳಿಗೆ ತಕ್ಕಂತೆ ಹೆಜ್ಜೆ ಹಾಕಿ ಕುಣಿದರು. ಬಳಿಕ ದೇವಸ್ಥಾನದ ಆವರಣದ ಮುಂಭಾಗದಲ್ಲಿ ನಿರ್ಮಿಸಿದ ಅಗ್ನಿಕುಂಡ ಹಾಯ್ದು ಭಕ್ತರು ತಮ್ಮ ಭಕ್ತಿ ಪರಾಕಾಷ್ಠೆಯನ್ನು ಮೆರೆದರು.
ವಿವಿಧೆಡೆ ಆಗಮಿಸಿದ್ದ ಪುರವಂತರು  ವೀರಭದ್ರೇಶ್ವರ ಸ್ವಾಮಿ ಕುರಿತಂತೆ ಹಾಗೂ ವಿವಿಧ ಪೌರಾಣಿಕ ಒಡಪುಗಳ ಮೂಲಕ ಕೈಯಲ್ಲಿಖಡ್ಗ ಹಿಡಿದು ಝಳಪಿಸತ್ತಾ ಸೇರಿದ ಜನರನ್ನು ಬೆರಗುಗೊಳಿಸಿದರಲ್ಲದೆ ತಮ್ಮ ಅದ್ಭುತ ಪುರವಂತಿಕೆ ಕಲೆಯನ್ನು ಪ್ರದರ್ಶಿಸಿದರು.
ಇದಕ್ಕೂ ಮುನ್ನ ನಡೆದ ದೇವರ ಪತಾಕೆ  ಹರಾಜಿನಲ್ಲಿ ಗ್ರಾಮದ ಚಣ್ಣದ ಈಶಪ್ಪ 26 ಸಾವಿರ ರೂಗಳಿಗೆ ಪಡೆದುಕೊಂಡರು. ಇದೇ ವೇಳೆ ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸಿದ ಹಲವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಗುಗ್ಗಳ ಹಾಗೂ ಅಗ್ನಿ ಮಹೋತ್ಸವದ ಅಂಗವಾಗಿ  ಆಗಮಿಸಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಗೋದಿ ಹುಗ್ಗಿ ಪಾಯಸ ಹಾಗೂ ಅನ್ನಪ್ರಸಾದ ಸೇವಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನ ಕಮಿಟಿಯ ಅಧ್ಯಕ್ಷ ಉಮಚಗಿ ಚಿದಾನಂದಪ್ಪ ಹಾಗೂ ಕಮಿಟಿಯ ಇತರ ಪದಾಧಿಕಾರಿಗಳು, ಹಿರಿಯರಾದ ಸಿ.ರಾಚಪ್ಪ, ಮಾಲ್ವಿ ವೀರಣ್ಣ, ಸಪ್ಪರದ ಜಂಬಣ್ಣ, ಗದ್ದಿಕೇರಿ ವೀರಣ್ಣ, ಹಡಪದ ಕೊಟ್ರೇಶ್, ಬಣಕಾರ ಕೊಟ್ರೇಶ್, ಬಾಳೆಕಾಯಿ ವಿರೇಶ್, ಉಮಚಗಿ ಬಸವರಾಜ್  ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.