ಮಕ್ಕಳ ಪ್ರತಿಭೆ ಅನಾವರಣಕ್ಕೆ ಮಕ್ಕಳ ಹಬ್ಬ ಸೂಕ್ತ ವೇದಿಕೆ- ರವಿಚಂದ್ರ

ಸಂಜೆವಾಣಿ ವಾರ್ತೆ
ದಾವಣಗೆರೆ. ಮಾ.೨; ಮಕ್ಕಳ ಪ್ರತಿಭೆ ಅನಾವರಣಕ್ಕೆ “ಮಕ್ಕಳ ಹಬ್ಬ” ಸೂಕ್ತ ವೇದಿಕೆಯಾಗಿದೆ ಎಂದು ದಾವಣಗೆರೆ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ರವಿಚಂದ್ರ ರವರು ತಿಳಿಸಿದರು. ಕರ್ನಾಟಕ ಬಾಲ ವಿಕಾಸ ಅಕಾಡೆಮಿ, ಧಾರವಾಡ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಾವಣಗೆರೆ, ಶಾಲಾ ಶಿಕ್ಷಣ ಇಲಾಖೆ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ ದಾವಣಗೆರೆ ಜಿಲ್ಲಾ ಬಾಲಭವನದಲ್ಲಿ ಏರ್ಪಡಿಸಿದ್ದ ಮಕ್ಕಳ ಹಬ್ಬ-2024 ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ನಮ್ಮ ಮಕ್ಕಳನ್ನು ಅಂಕಗಳ ಆಧಾರದ ಮೇಲೆ ಅಳೆಯದೆ ಅವರಲ್ಲಿನ ಸ್ತೂಪ್ತ ಪ್ರತಿಭೆಯನ್ನು ಗುರುತಿಸಿ, ಸೂಕ್ತ ವೇದಿಕೆಯನ್ನು ಒದಗಿಸಿ ಕೊಟ್ಟು ಅವರ ಕನಸುಗಳಿಗೆ ಬಣ್ಣ ತುಂಬಿದಾಗ ಅವರಿಂದ ಉತ್ತಮ ಫಲಿತಾಂಶ ಪಡೆಯಬಹುದು. ಪಾಠ, ಪ್ರವಚನದ ಜೊತೆಗೆ ಅವರಲ್ಲಿ ಸಾಹಿತ್ಯ, ಸಂಸ್ಕೃತಿ, ಕ್ರೀಡೆ, ಪರಿಸರ ಪ್ರಜ್ಞೆಯ ಬಗ್ಗೆ ಅಭಿರುಚಿಯನ್ನು ಬೆಳೆಸಬೇಕು. ಹಿಂದೆ ಮನೆಗಳಲ್ಲಿ ನಮ್ಮ ಹಿರಿಯರು ಮಕ್ಕಳನೇ ಕೂಡಿಸಿಕೊಂಡು ಭಕ್ತಿ ಗೀತೆ, ಜಾನಪದ, ಸೋಬಾನೆ, ಕಿರು ಕಥೆಗಳನ್ನು ರಸವತ್ತಾಗಿ ಹೇಳುವ ಮೂಲಕ ಅವರ ಮನಸ್ಸನ್ನು ಉಲ್ಲಾಸಗೊಳಿಸುತ್ತಿದ್ದರು. ಇಂದು ಎಲ್ಲರ ಮನೆಯಲ್ಲೂ ಒತ್ತಡದ ಬದುಕು, ಬಿಡುವಿಲ್ಲದಂತೆ ಸಮಯ ಸವೆಸುತಿದ್ದೇವೆ. ಇದರ ಪರಿಣಾಮ ನಮ್ಮ ಮಕ್ಕಳಿಗೆ ಟಿ.ವಿ ಮತ್ತು ಮೊಬೈಲ್ ಆಪ್ತವಾಗಲು ಕಾರಣವಾಗಿದೆ ಎಂದರು. ಅಂತಹ ವಾತಾವರಣದಿಂದ ಮಕ್ಕಳನ್ನು ಹೊರತರಲು “ಮಕ್ಕಳ ಹಬ್ಬ”ದಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದು ತಿಳಿಸಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ವಾಸಂತಿ ಉಪ್ಪಾರ ಮಾತನಾಡಿ ಪ್ರತಿ ಮಗುವಿನಲ್ಲಿಯೂ ಏನಾದರೊಂದು ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಹೊರತರುವ ಕೆಲಸವನ್ನು ನಮ್ಮ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ದಾವಣಗೆರೆಯ ಬಾಲಭವನ ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದೇವೆ. ಇದರ ಪರಿಣಾಮವಾಗಿಯೇ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ 400ಕ್ಕೂ ಹೆಚ್ಚು ಮಕ್ಕಳು, ಶಿಕ್ಷಕರು, ಪೋಷಕರು ಈ ಮಕ್ಕಳ ಹಬ್ಬದಲ್ಲಿ ಪಾಲ್ಗೊಂಡು ಇಂದು ಹಬ್ಬದ ವಾತಾವರಣ ನಿರ್ಮಾಣವಾಗಲು ಕಾರಣವಾಗಿದೆ.ಈ ಮಕ್ಕಳು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಜಾನಪದ ನೃತ್ಯ, ಕವ್ವಾಲಿ, ಕೋಲಾಟ, ದೇಶಭಕ್ತಿಗಳ ಗಾಯನ, ಚಿತ್ರಕಲೆ, ಕ್ಲೇಮಾಡಲಿಂಗ್‌ನಲ್ಲಿ ಮಕ್ಕಳು ಸಂತಸದ ಚಿಲಿಮೆಯಾಗಿ ಹೊರಹೊಮ್ಮಿದ್ದಾರೆ. ಬಟ್ಲಕಟ್ಟೆ(ಶಾಲೆಯ) ಹಿರಿಯ ಪ್ರಾಥಮಿಕ ಶಾಲೆಯ ಮಗು ಕ್ಲೇಮಾಡಲಿಂಗ್‌ನಲ್ಲಿ ನಿರ್ಮಿಸಿದ ಸಾಲು ಮರದ ತಿಮ್ಮಕ್ಕನ ಪ್ರತಿಭೆ ಎಲ್ಲರ ಗಮನ ಸೆಳೆಯುತ್ತಿದೆ. ಇಂತಹ ಮಕ್ಕಳಿಗೆ ಪ್ರೋತ್ಸಾಹ, ಬೆಂಬಲ ನೀಡಿದರೆ ಮುಂದೆ ಬಹುದೊಡ್ಡ ಕಲಾವಿದರಾಗುವ ಅವಕಾಶಗಳು ದೊರಕುತ್ತದೆ ಎಂದು ತಿಳಿಸಿದರು. ಜಿಲ್ಲಾ ಬಾಲಭವನದ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ದೊರೆತಿದ್ದು ಇಲಾಖಾ ನಿಯಮದಂತೆ ಶೀಘ್ರದಲ್ಲೇ ಅಭಿವೃದ್ಧಿ ಪಡಿಸಲಾಗುವುದೆಂದು ತಿಳಿಸಿದರು.