ಸಾರ್ವಜನಿಕ ಸ್ಥಳಗಳ ನೈರ್ಮಲ್ಯ ಹಾಗೂ ಸ್ವಚ್ಚತೆಗೆ ಬದ್ಧತೆ ತೋರಿ: ಸಚಿವ ಶಿವಾನಂದ ಪಾಟೀಲ
ವಿಜಯಪುರ,ಸೆ.16: ಸಾರ್ವಜನಿಕ ಸ್ಥಳಗಳ ನೈರ್ಮಲ್ಯ ಹಾಗೂ ಸ್ವಚ್ಚತೆ ವಿಷಯವಾಗಿ ಬದ್ಧತೆ ತೋರಬೇಕಾಗಿರುವುದು ಇಂದಿನ ಅನಿವಾರ್ಯತೆಯಾಗಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ, ಜವಳಿ ಹಾಗೂ ಸಕ್ಕರೆ ಖಾತೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಐತಿಹಾಸಿಕ ಗೋಳಗುಮ್ಮಟ ಆವರಣದಲ್ಲಿ ನವದೆಹಲಿಯ ಲಾಡಲಿ ಫೌಂಡೇಷನ್ ಸಾರಥ್ಯದಲ್ಲಿ ಸ್ವಚ್ಚತೆ, ನೈರ್ಮಲ್ಯದ ಜಾಗೃತಿಗಾಗಿ ವಿಶೇಷ ಮ್ಯಾರಾಥಾನ್, ನಡಿಗೆ ಹೀಗೆ ಎಲ್ಲವನ್ನೂ ಕೇಂದ್ರಿಕರಿಸಿದ `ವಾμïಥಾನ್’ ಹೆಸರಿನ ಓಟಕ್ಕೆ ಹಸಿರು ನಿಶಾನೆ ತೋರಿದ ಅವರು, ಮನೆ, ಸುತ್ತಮುತ್ತಲಿನ ಪರಿಸರ ಹೀಗೆ ಎಲ್ಲವೂ ಸ್ವಚ್ಛತೆಯಿಂದ ಇರಬೇಕು, ಸ್ವಚ್ಛತೆ ನಮ್ಮ ಬದ್ಧತೆ, ನಮ್ಮ ಆದ್ಯತೆಯಾಗಬೇಕು ಎಂದರು.
ಅದರಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರ ಸಂಚಾರ ಹೆಚ್ಚಾಗಿರುತ್ತದೆ. ಹೀಗಾಗಿ ಅವುಗಳು ಸ್ವಚ್ಚವಾಗಿರಬೇಕಾಗಿರುವುದು ಅತ್ಯಂತ ಅಗತ್ಯವಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಸಹ ಸ್ವಚ್ಚತೆ, ಶೌಚಾಲಯ ನಿರ್ಮಾಣ ಹೀಗೆ ಅನೇಕ ರೀತಿಯ ಸ್ವಚ್ಚತೆಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಿದೆ ಎಂದರು.
ನವದೆಹಲಿಯ ಲಾಡಲಿ ಪೌಂಡೇಷನ್ ಅತ್ಯಾಧುನಿಕ ಎ.ಐ. ತಂತ್ರಜ್ಞಾನದ ಶೌಚಾಲಯಗಳನ್ನು ಜಿಲ್ಲೆಯ ವಿವಿಧ ಶಾಲೆ, ಸಾಮುದಾಯಿಕ ಕೇಂದ್ರಗಳಲ್ಲಿ ನಿರ್ಮಿಸಿರುವುದು ಅತ್ಯಂತ ಸ್ತುತ್ಯಾರ್ಹ ಹಾಗೂ ಸಮಾಜ ಸೇವಾ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಟಿ. ಭೂಬಾಲನ್ ಮಾತನಾಡಿ, ಸ್ವಚ್ಛತೆ ಜಾಗೃತಿಗಾಗಿ ವಿವಿಧ ರೀತಿಯ ಅರ್ಥಪೂರ್ಣ ಕಾರ್ಯಕ್ರಮಗಳಿಗೆ ಲಾಡಲಿ ಫೌಂಡೇಷನ್ ಮುಂದಾಗಿರುವುದು ಹೆಮ್ಮೆಯ ಸಂಗತಿ. ಈ ಎಲ್ಲ ಕಾರ್ಯಗಳಿಗೆ ಜಿಲ್ಲಾಡಳಿತ ಸದಾ ಸಹಕಾರ ನೀಡಲಿದೆ. ಸರ್ಕಾರಿ ಶಾಲೆಗಳಲ್ಲಿ ಆರೋಗ್ಯ ಜಾಗೃತಿ, ಅತ್ಯಧುನಿಕ ಶೌಚಾಲಯ ನಿರ್ಮಾಣ ಕಾರ್ಯ ಮಾಡಿರುವುದು ನಿಜಕ್ಕೂ ಉತ್ತಮವಾದ ಕಾರ್ಯಎಂದರು.
ಲಾಡಲಿ ಫೌಂಡೇಷನ್ ರಾಷ್ಟ್ರೀಯ ಸಲಹೆಗಾರ ಡಾ. ಜಾವೀದ ಜಮಾದಾರ ಮಾತನಾಡಿ, ಪ್ರತಿಷ್ಠಿತ ಸಮಾಜ ಸೇವಾ ಸಂಸ್ಥೆಯಾಗಿರುವ ಲಾಡಲಿ ಫೌಂಡೇಷನ್ ವಿಜಯಪುರ ಜಿಲ್ಲೆಯನ್ನು ದತ್ತು ಜಿಲ್ಲೆಯನ್ನಾಗಿಸಿಕೊಂಡು ತನ್ನ ಸೇವಾ ಕಾರ್ಯಕ್ಕೆ ಮುಂದಾಗಿದೆ. 3 ಕೋಟಿರೂ.ಗೂಅಧಿಕ ವೆಚ್ಚದ ಸಾಮಾಜಿಕ ಕಾರ್ಯ ಚಟುವಟಿಕೆಗಳನ್ನು ಈ ಭಾಗದಲ್ಲಿ ಕೈಗೊಳ್ಳುತ್ತಿದೆ ಎಂದು ವಿವರಿಸಿದರು.
ಲಾಡಲಿ ಫೌಂಡೇಷನ್ ಸಿಇಒ ದೇವೆಂದ್ರ ಗುಪ್ತಾ ಮಾತನಾಡಿ, ಲಾಡಲಿ ಫೌಂಡೇಷನ್ ಒಂದು ಲಾಭರಹಿತ ಸಾಮಾಜಿಕ ಸೇವಾ ಸಂಸ್ಥೆಯಾಗಿದೆ, ಜಮ್ಮುಕಾಶ್ಮೀರ, ಗುಜರಾತ್, ಕರ್ನಾಟಕ ಹೀಗೆ ಅನೇಕ ರಾಜ್ಯಗಳಲ್ಲಿ ಸ್ವಚ್ಚತೆ, ನೈರ್ಮಲ್ಯದ ಬಗ್ಗೆ ಕಾರ್ಯಕ್ರಮ ಸಂಘಟನೆ, ಅತ್ಯಾಧುನಿಕ ಎಐ ಆಧಾರಿತ ಶೌಚಾಲಯ ನಿರ್ಮಾಣಕ್ಕೆ ಒತ್ತು ನೀಡಿದೆ. ಶ್ರೀ ರಾಮಜನ್ಮಭೂಮಿ ಅಯೋಧ್ಯೆಯ ಸಂಪೂರ್ಣ ನೈರ್ಮಲ್ಕೀಕರಣದ ಸಂಕಲ್ಪ ಮಾಡಿ ಈ ಪವಿತ್ರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದರು.
ವಾμïಥಾನ್' ಸಂಭ್ರಮ : ನಸುಕಿನಲಿ ನೇಸರನ ಕಿರಣಗಳು ಒಡಮೂಡುವ ಮೊದಲೇ ಐತಿಹಾಸಿಕ ಗೋಳಗುಮ್ಮಟ ಸ್ವಚ್ಛತೆ ಜಾಗೃತಿಯ ಸಂದೇಶ ಸಾರುವವಾμïಥಾನ್’ ಸಂಭ್ರಮ ಉದಯಿಸಿತ್ತು. ಚುಮುಚುಮು ಚಳಿ, ಹಸಿರ ಸಿರಿಯಲ್ಲಿ ಸಾವಿರಾರು ಯುವಕರ ದಂಡು ಗೋಳಗುಮ್ಮಟ ಆವರಣದಲ್ಲಿ ಕಿಕ್ಕಿರಿದು ತುಂಬಿದ್ದರು.
ವಿಜಯಪುರದಲ್ಲಿ ಸ್ವಚ್ಚತೆ, ನೈರ್ಮಲ್ಯದ ಜಾಗೃತಿಗಾಗಿ ವಿಶೇಷ ಮ್ಯಾರಾಥಾನ್, ನಡಿಗೆ ಹೀಗೆ ಎಲ್ಲವನ್ನೂ ಕೇಂದ್ರಿಕರಿಸಿದ `ವಾμïಥಾನ್’ ಹೆಸರಿನ ಓಟ ಯಶಸ್ವಿಯಾಗಿ ನಡೆಯಿತು. ನಡಿಗೆಯಲ್ಲಿ 15 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿ ವಾμïಥಾನ್ ಯಶಸ್ಸಿಗೆ ಕೈ ಜೋಡಿಸಿದರು.
ವಿಜಯಪುರ ಜಿಲ್ಲೆಯನ್ನು ಸೇವೆಯ ದತ್ತು ಜಿಲ್ಲೆಯಾಗಿ ಸ್ವೀಕರಿಸಿರುವ ನವದೆಹಲಿಯ ಲಾಡಲಿ ಫೌಂಡೇಷನ್ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಓಟದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಟೀ-ಶೀರ್ಟ್ ನೀಡಲಾಗಿತ್ತು. ಸ್ವಚ್ಛತೆಯ ಸಂದೇಶ ಸಾರುವ ಶುಭ್ರ ಹಾಗೂ ಹಸಿರು ವರ್ಣದ ಸಮ್ಮಿಳಿತವುಳ್ಳ ಟೀಶರ್ಟ್‍ಗಳನ್ನು ಧರಿಸಿದ ಸಾವಿರಾರು ಯುವಕ, ಯುವತಿಯರು ಓಟದಲ್ಲಿ ಭಾಗವಹಿಸಿದರು.
ಸ್ವಚ್ಛತೆಗಾಗಿ ನಮ್ಮ ಹೆಜ್ಜೆ, ಸ್ವಚ್ಛತೆ ನಮ್ಮ ಆದ್ಯತೆ, ಸ್ವಚ್ಛತೆ ನಮ್ಮ ಉಸಿರು, ಶುಭ್ರವಾಗಿ ಕೈ ತೊಳೆಯೋಣ – ಆರೋಗ್ಯ ನಮ್ಮದಾಗಿಸಿಕೊಳ್ಳೋಣ, ನೈರ್ಮಲ್ಯ ನಮ್ಮ ಕರ್ತವ್ಯ ಎಂಬಿತ್ಯಾದಿ ಘೋಷಣೆಗಳನ್ನು ಕೂಗುತ್ತಾ ಯುವಕರು ನಡಿಗೆಯಲ್ಲಿ ಭಾಗವಹಿಸಿದರು. ಸ್ವಚ್ಛತೆಯ ಮಹತ್ವ ಸಾರುವ, ಕೈ ತೊಳೆಯುವುದರಿಂದ ಆಗುವ ಪ್ರಯೋಜನಗಳು ಮೊದಲಾದವುಗಳನ್ನು ಸಚಿತ್ರವಾಗಿ ವಿವರಿಸುವ ಫಲಕಗಳು ಎಲ್ಲೆಡೆ ರಾರಾಜಿಸಿದವು.
ಮ್ಯಾರಾಥಾನ್ ಹಾಗೂ ನಡಿಗೆ ಹೀಗೆ ಅನೇಕ ವಿಭಾಗಗಳಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. 21 ಕಿ.ಮೀ. ಮ್ಯಾರಾಥಾನ್ ವಿಭಾಗದಲ್ಲಿ ಐತಿಹಾಸಿಕ ಗೋಳಗುಮ್ಮಟದಿಂದ ಐತಿಹಾಸಿಕ ಬೇಗಂ ತಲಾಬ್‍ವರೆಗೆ ನಡೆದರೆ, ಇನ್ನೊಂದು 10 ಕಿ.ಮೀ. ವಿಭಾಗದ ಮ್ಯಾರಾಥಾನ್ ಗೋಳಗುಮ್ಮಟದಿಂದ ಇಟಗಿ ಪೆಟ್ರೋಲ್ ಪಂಪ್ (ಅಥಣಿರಸ್ತೆ)ಯವರೆಗೆ ನಡೆಯಿತು, ಇನ್ನೊಂದು ವಿಭಾಗದಲ್ಲಿ 5 ಕಿ.ಮೀ. ವಿಭಾಗದಲ್ಲಿ ಗೋಳಗುಮ್ಮಟದಿಂದ ಶಿವಾಜಿ ಮಹಾರಾಜರ ವೃತ್ತದವರೆಗೆ ಮ್ಯಾರಾಥಾನ್ ನಡೆಯಿತು. ನಡಿಗೆಯಲ್ಲಿಯೇ 10 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ವಾμïಥಾನ್‍ಗೆ ಹಸಿರು ನಿಶಾನೆ ತೋರುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಟಿ. ಭೂಬಾಲನ್, ಸಿಇಓ ರಿಷಿ ಆನಂದ್, ಎಸ್.ಪಿ. ಋಷಿಕೇಶ ಸೋನಾವಣೆ, ಲಾಡಲಿ ಫೌಂಡೇಷನ್‍ರಾಷ್ಟ್ರೀಯ ಸಲಹೆಗಾರ ಡಾ.ಜಾವೀದಜಮಾದಾರ, ಲಾಡಲಿ ಫೌಂಡೇಷನ್ ಸಿಇಓ ದೇವೆಂದ್ರ ಗುಪ್ತಾ ಪಾಲ್ಗೊಂಡಿದ್ದರು.