ದಾವಣಗೆರೆ ಯುವಪ್ರತಿಭೆ ವಚನ್ ಹೊಸಮಠ್ ಧಾರಾವಾಹಿಯಲ್ಲಿ‌ ನಾಯಕನಾಗಿ ನಟನೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಮಾ.೨: “ಲಕ್ಷ್ಮಿ ಟಿಫನ್ ರೂಮ್” ಧಾರವಾಹಿಯ ನಾಯಕ ನಟನಾಗಿ ನಮ್ಮ ದಾವಣಗೆರೆ ಯುವಪ್ರತಿಭೆ ವಚನ್ ಹೊಸಮಠ್ ಸ್ಟಾರ್ ಸುವರ್ಣ ವಾಹಿನಿ ಸ್ನೇಹದಿಂದ ಅರ್ಪಿಸುತ್ತಿರುವ “ಲಕ್ಷ್ಮಿ ಟಿಫನ್ ರೂಮ್”ನ ಸಾಂಸಾರಿಕ ಹಾಗೂ ಕುತೂಹಲಕಾರಿ ಕಥೆಯ ಧಾರವಾಹಿಯು ಮಾರ್ಚ್ 4 ರಿಂದ ಪ್ರತಿದಿನ ಸಂಜೆ 6-30 ಕ್ಕೆ ಪ್ರಾರಂಭವಾಗಲಿದೆ.ಈ ಧಾರವಾಹಿಯಲ್ಲಿ ದಾವಣಗೆರೆ ನಗರದ ಯುವಪ್ರತಿಭೆ ವಚನ್ ಹೊಸಮಠ್ ನಾಯಕ ನಟನಾಗಿ ಅಭಿನಯಿಸಿದ್ದಾರೆ. 2017ರಲ್ಲಿ ಬಾಪೂಜಿ ಇಂಜಿನಿಯರಿಂಗ್ ಕಾಲೇಜ್ (ಬಿ.ಐ.ಇ.ಟಿ.) ಸೇರಿದ ಇವರು ಪ್ರಾರಂಭದಲ್ಲಿ ಬಿ.ಐ.ಇ.ಟಿ. ಕಾಲೇಜಿನ “ಮಿಸ್ಟರ್ ಫ್ರೆಶರ್” ಆಗಿ ಪ್ರಶಸ್ತಿ ಪಡೆದು. 2021ರ ಅಂತಿಮ ವರ್ಷದಲ್ಲಿ “ಮಿಸ್ಟರ್ ಬಿ.ಐ.ಇ.ಟಿ.” ಆಗಿ ಪ್ರಶಸ್ತಿ ಪಡೆದಿರುತ್ತಾರೆ. ಸಿವಿಲ್ ಇಂಜಿನಿಯರಿಂಗ್ ಪದವಿ ಮುಗಿಸಿ ಹೊರಹೊಮ್ಮಿದ ವಚನ್ ಹೊಸಮಠ್. 2022ರಲ್ಲಿ `ಮಿಸ್ಟರ್ ದಾವಣಗೆರೆ’ ರನ್ನರ್‌ ಆಗಿ ಪ್ರಶಸ್ತಿ ಪಡೆದಿರುತ್ತಾರೆ. ಮೊದಲಿನಿಂದಲೂ ನಟನೆಯ ಹಾಗೂ ಚಿತ್ರರಂಗದ ಅಭಿರುಚಿ ಹೊಂದಿರುವ ವಚನ್ ಹೊಸಮಠ್‌ರವರು ಅಭಿನಯದ ತರಬೇತಿ ಪಡೆದು ಕೆಲವು ನಾಟಕಗಳಲ್ಲಿ, `ಆಲ್ಬಮ್ ಸಾಂಗ್ಸ್’ ಗಳಲ್ಲಿ ಹಾಗೂ `ಶಾರ್ಟ್ ಮೂವೀಸ್’ ಗಳಲ್ಲಿ ಪಾತ್ರ ವಹಿಸಿ ಗುರುತಿಸಿಕೊಂಡಿರುತ್ತಾರೆ. ಹಲವಾರು ರ‍್ಯಾಂಪ್ ವಾಕ್’ಗಳಲ್ಲಿ ಭಾಗವಹಿಸಿ, ಕೆಲವು ರ‍್ಯಾಂಪ್ ವಾಕ್‌ಗಳಲ್ಲಿ ಜ್ಯೂರಿಯಾಗಿ ಸಹ ಕಾರ್ಯನಿರ್ವಹಿಸಿದ್ದಾರೆ. ಇತ್ತೀಚಿಗೆ ಸಿಹಿ ಕಹಿ ಚಂದ್ರುರವರ “ಬೊಂಬಾಟ್ ಭೋಜನ” ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗಹಿಸಿರುತ್ತಾರೆ.ಹೀಗೆ  ಬಹುಮುಖ ವ್ಯಕ್ತಿತ್ವದ ವಚನ್ ಹೊಸಮಠ್ `ಜೈಮಾತಾ ಕಂಬೈನ್ಸ್’ ನ ಹೊಸ ಧಾರವಾಹಿಯ “ಲಕ್ಷ್ಮಿ ಟಿಫನ್ ರೂಮ್” ನ ನಾಯಕ ನಟನಾಗಿರುವುದು ನಮ್ಮ ದಾವಣಗೆರೆಗೆ ಹೆಮ್ಮೆ ಹಾಗೂ ಸಂತೋಷದ ವಿಚಾರ. ವಚನ್ ಹೊಸಮಠ್‌ರವರು ನಗರದ ಹಿರಿಯ ಸಿವಿಲ್ ಇಂಜಿನಿಯರ್ ಆದ ಲಯನ್ ಹೆಚ್.ವಿ. ಮಂಜುನಾಥಸ್ವಾಮಿ ಹೊಸಮಠ್ ಮತ್ತು  ಜ್ಯೋತಿ ಹೊಸಮಠ್‌ರವರ ಪುತ್ರ. ಮುಂದೆ ಒಬ್ಬ ಉತ್ತಮ ಭರವಸೆಯ ನಟನಾಗಿ, ಚಿತ್ರರಂಗದಲ್ಲಿ ಉಜ್ವಲ ಭವಿಷ್ಯ ಹೊಂದಲಿ ಎಂದು ಹಾರೈಸೋಣ.