ವೈಜ್ಞಾನಿಕ ಮನೋಭಾವ ಬೆಳೆಸುವುದು ಅಗತ್ಯ
ಬ್ಯಾಡಗಿ,ಮಾ.2: ಇಂದಿನ ಆಧುನಿಕ ಯುಗದಲ್ಲಿ ವಿಜ್ಞಾನವು ಜನಸಾಮಾನ್ಯರಿಗೆ ವಿಪುಲ ಅವಕಾಶಗಳನ್ನು ನೀಡಿದ್ದು, ಇಡೀ ಜಗತ್ತನ್ನು ಆಳುವಂತಾಗಿದೆ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು ಬಹು ಅಗತ್ಯವಾಗಿದೆ ಎಂದು ಡಿಡಿಪಿಐ ಸುರೇಶ ಹುಗ್ಗಿ ಹೇಳಿದರು
ತಾಲೂಕಿನ ಗುಂಡೇನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾವು ನಮ್ಮ ದೈನಂದಿನ ಜೀವನದಲ್ಲಿ ಕೆಲವೊಮ್ಮೆ ನಮಗೆ ಅರಿವಿಲ್ಲದೇ ವಿಜ್ಞಾನ ಮತ್ತು ಅದರ ಅನ್ವಯಗಳನ್ನು ಬಳಸುತ್ತೇವೆ. ವಿಜ್ಞಾನ ಮತ್ತು ಅದರ ಅನ್ವಯಗಳು ನಮ್ಮ ಜೀವನವನ್ನು ಸರಳಗೊಳಿಸಿರುವ ವಿಧಾನಗಳನ್ನು ಗುರುತಿಸುವುದು ಮುಖ್ಯವಾಗಿದೆ. ನಮ್ಮ ಜೀವನದಲ್ಲಿ ವಿಜ್ಞಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ನಮ್ಮ ಜೀವನವನ್ನು ಸರಳಗೊಳಿಸುವ ವಿಜ್ಞಾನಿಗಳ ಪ್ರಯತ್ನಗಳನ್ನು ಗುರುತಿಸಲು ರಾಷ್ಟ್ರೀಯ ವಿಜ್ಞಾನ ದಿನವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ ಎಂದರು.
ಉಪನ್ಯಾಸಕ ವಿಶ್ವನಾಥ ಹಿರೇಮಠ ಮಾತನಾಡಿ ವಿಜ್ಞಾನವೂ ಜಗತ್ತನ್ನು ಆಳುತ್ತಿದೆ.ವಿಜ್ಞಾನವೂ ವಿಪುಲ ಅವಕಾಶಗಳನ್ನು ಜನಸಾಮಾನ್ಯರಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಬೇಕಾಗಿದೆ ಎಂದರು
ಜಿಲ್ಲಾ ಅಕ್ಷರ ದಾಸೋಹಾಧಿಕಾರಿ ಝಡ್.ಎಂ.ಖಾಜಿ ಮಾತನಾಡಿ, ಭಾರತ ದೇಶವು ಭೌತ ಮತ್ತು ರಸಾಯನ ವಿಜ್ಞಾನ ಗುರುತರವಾದ ಸಾಧನೆಯನ್ನು ಮಾಡಿದೆ. ಇತ್ತೀಚೆಗೆ ಚಂದ್ರಯಾನ ಯಾತ್ರೆಯೂ ದೇಶದ ವಿಜ್ಞಾನಶಕ್ತಿಯನ್ನು ಅನಾವರಣಗೊಳಿಸಿದೆ ಎಂದರು.
ವೇದಿಕೆಯಲ್ಲಿ ಮುಖ್ಯೋಪಾಧ್ಯಾಯ ಸಿ.ಎನ್. ಕರಿಯಪ್ಪನವರ, ಬಸವರಾಜ ಬಾರ್ಕಿ, ಎಸ್.ಪಿ. ಮೂಡಲದ, ವಿ.ಎಸ್.ಪಾಟೀಲ, ಹನುಮಂತಗೌಡ ನರೇಗೌಡ್ರ, ಭರಮಪ್ಪ ಕುರುವತ್ತಿ, ವಿದ್ಯಾ ಕುರಹಟ್ಟಿ, ವಿ.ಡಿ.ಅಕ್ಕೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.