ಬೈಕ್ ಅಪಘಾತ : ಇಬ್ಬರಿಗೆ ದಂಡ
ಕಲಬುರಗಿ,ಮಾ 2: ಅತಿ ವೇಗ, ನಿರ್ಲಕ್ಷ್ಯತನದಿಂದ ಬೈಕ್ ಚಲಾಯಿಸಿ ಬೈಕ್ ಹಿಂಬದಿ ಸವಾರನ ಸಾವಿಗೆ ಕಾರಣರಾದ ಇಬ್ಬರಿಗೆ ಇಲ್ಲಿನ ಸಿಜೆಎಂ ನ್ಯಾಯಾಲಯವು
ದಂಡ ವಿಧಿಸಿದೆ.ಶ್ರೀಧರ ಅಲಿಯಾಸ್ ಜಾನ್ ಯಲ್ಲಪ್ಪ ದೊಡ್ಡಮನಿ ಮತ್ತು ಶ್ರೀನಿವಾಸ ಶಿಕ್ಷೆಗೊಳಗಾದವರು.
2020 ರ ಫೆ 21 ರಂದು ಕಣ್ಣಿ ಗ್ರಾಮದ ಹತ್ತಿರದ ದಾಬಾದಲ್ಲಿ ಮದ್ಯಪಾನ ಮಾಡಿದ ಮೂವರು ಬೈಕ್ ಸವಾರರು,ಮೂವರು ಹಿಂಬದಿ ಸವಾರರೊಂದಿಗೆ ಕಲಬುರಗಿ ಕಡೆ ಹೊರಟಿದ್ದರು. ಆ ಸಂದರ್ಭದಲ್ಲಿ ಅಫಜಲಪುರ ಮುಖ್ಯ ರಸ್ತೆ ಹಡಗಿಲಹಾರತಿ ಸೀಮಾಂತರದ ಜಮೀನಿನ ಬಳಿ ಶ್ರೀಧರ ಈತನು ಅತಿ ವೇಗ ನಿರ್ಲಕ್ಷ್ಯತನದಿಂದ ಬೈಕ್ ಚಲಾಯಿಸಿ ಅಪಘಾತವೆಸಗಿದ್ದರಿಂದ ಧರೆಪ್ಪಾ ಎಂಬಾತನು ಮೃತನಾಗಿದ್ದನು. ಧರೆಪ್ಪಾ ನನ್ನು ಹಿಂದೆ ಕೂಡಿಸಿಕೊಂಡ ಬೈಕ್ ಚಾಲಕ ಶ್ರೀನಿವಾಸ ಸಹ ನಿರ್ಲಕ್ಷ್ಯದಿಂದ ಬೈಕ್ ಚಲಾಯಿಸಿದ್ದರಿಂದ ಇವರಿಬ್ಬರ ವಿರುದ್ಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು. ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರಾದ ಸುಶಾಂತ ಎಂ ಚೌಗಲೆ ಅವರು ಶ್ರೀಧರ ಅಲಿಯಾಸ್ ಜಾನ್ ನಿಗೆ 10 ಸಾವಿರ ರೂ ಮತ್ತು ಶ್ರೀನಿವಾಸನಿಗೆ 2 ಸಾವಿರ ರೂ ದಂಡ ವಿಧಿಸಿ ಆದೇಶಿಸಿದ್ದಾರೆ.ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಶಿವಶರಣಪ್ಪ ಅವರು ವಾದ ಮಂಡಿಸಿದ್ದರು.