ಮುಂಬರುವ ದಿನಗಳಲ್ಲಿ ಕಾಂಗ್ರೇಸ್‍ಗೆ ತಕ್ಕ ಪಾಠ : ಫರ್ನಾಂಡಿಸ್
ಬೀದರ:ಮಾ.2: ಕಾಂಗ್ರೇಸ್ ಪಕ್ಷ 2023ನೇ ಸಾಲಿನ ಸಾರ್ವತ್ರಿಕ ವಿಧಾನ ಸಭಾ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾದಿಗರಿಗೆ ಒಂದೇ ಒಂದು ಟಿಕೇಟ್ ನೀಡಲಿಲ್ಲ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೇಸ್ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ ಮಾದಿಗರಿಗೆ ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕಾತಿಯಲ್ಲಿ ಯಾರೊಬ್ಬರನ್ನೂ ನೇಮಕ ಮಾಡದೆ ಈ ಭಾಗದ ಮಾದಿಗರಿಗೆ ರಾಜಕೀಯವಾಗಿ ಮುಗಿಸುವ ಹುನ್ನಾರ ನಡೆಸುತ್ತಿದೆ ಎಂದು ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ ಆರೋಪಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮುಂದುವರೆದು ಮಾತನಾಡಿದ ಅವರು ಕಾಂಗ್ರೇಸ್ ಪಕ್ಷ ಮಾದಿಗರನ್ನು ಕೇವಲ ಮತ ಹಾಕಿಸಿಕೊಳ್ಳುವುದಕ್ಕೆ ಮಾತ್ರ ಬಳಸಿಕೊಳ್ಳುತ್ತಿದೆ. ಇತಿಹಾಸದ ಪುಟಗಳನ್ನು ತಿರುವಿ ನೋಡಿದಾಗ ಸರ್ಕಾರ ಬೀದರ ಜಿಲ್ಲೆಯ ಮಾದಿಗ ಸಮಾಜದ ಕಾರ್ಯಕರ್ತರನ್ನು ಗುರುತಿಸಿ ನಿಗಮ ಮಂಡಳಿಗೆ ಅಧ್ಯಕ್ಷರಾಗಿ ಮಾಡಿಲ್ಲ. ವಿಧಾನ ಪರಿಷತ್ ಸದಸ್ಯರನ್ನಾಗಿಯೂ ಮಾಡಲಿಲ್ಲ. ರಾಜ್ಯದಲ್ಲಿಯೂ ಸಮುದಾಯಕ್ಕೆ ತಕ್ಕ ಹಾಗೆ ನಿಗಮ ಮಂಡಳಿಗಳಲ್ಲಿ ಸ್ಥಾನಮಾನ ನೀಡಿಲ್ಲ. ಆದರೂ ಕೂಡಾ ಮಾದಿಗ ಸಮಾಜ ಕಣ್ಮುಚ್ಚಿ ಹಲವು ದಶಕಗಳಿಂದ ಕಾಂಗ್ರೇಸ್‍ಗೆ ಮತ ಹಾಕುತ್ತ ಬಂದಿದೆ.
ಮಾಜಿ ರಾಜ್ಯಸಭೆ ಸದಸ್ಯ ಡಾ.ಎಲ್.ಹನುಮಂತಯ್ಯ ಅವರನ್ನು ಬಿಟ್ಟು ಪಕ್ಷ ಹೊಸಬರನ್ನು ಮಣೆ ಹಾಕಿದೆ. ಇದು ಖಂಡನೀಯ. ಸರ್ಕಾರ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಬೀದರ ಜಿಲ್ಲೆಯ ಪಕ್ಷದ ಕಾರ್ಯಕರ್ತರನ್ನು ಗುರುತಿಸಿ ನಿಗಮ ಮಂಡಳಿಗಳಲ್ಲಿ ಅಧ್ಯಕ್ಷ ಸ್ಥಾನ ನೀಡಬೇಕು. ಇಲ್ಲದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷವನ್ನು ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವಿಜಯಕುಮಾರ ಹಿಪ್ಪಳಗಾಂವ ಜಿಲ್ಲಾ ಅಧ್ಯಕ್ಷರು, ಕಮಲಾಕರ ಎಲ್. ಹೆಗಡೆ ಜಿಲ್ಲಾ ಉಪಾಧ್ಯಕ್ಷರು,
ಪಿಟ್ಟರ ಚಿಟ್ಟಗುಪ್ಪಾ ಜಿಲ್ಲಾ ಕಾರ್ಯಧ್ಯಕ್ಷರು, ದತ್ತಾತ್ರಿ ಜ್ಯೋತಿ ಜಿಲ್ಲಾ ಕಾರ್ಯಧ್ಯಕ್ಷರು, ಜೈಶೀಲ ಕಲವಾಡೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ, ಜೈಶೀಲ ಮೇತ್ರೆ ಜಿಲ್ಲಾ ಖಜಾಂಚಿ, ವಿರಶೆಟ್ಟಿ ದಕ್ಷಿಣ ಕ್ಷೇತ್ರ ಅಧ್ಯಕ್ಷರು, ಸಚಿನ ಅಂಬೇಸಾಂಗವೆ ತಾಲೂಕು ಅಧ್ಯಕ್ಷರು ಭಾಲ್ಕಿ, ರವಿ ಸೂರ್ಯವಂಶಿ ತಾಲೂಕು ಅಧ್ಯಕ್ಷರು ಔರಾದ,
ಗೊರಖ ಜೋಶಿ ತಾಲೂಕು ಅಧ್ಯಕ್ಷರು ಹುಮನಾಬಾದ, ದೀಪಕ ಸೂರ್ಯವಂಶಿ ಯುವ ಘಟಕ ತಾಲೂಕು ಅಧ್ಯಕ್ಷರು ಕಮಲನಗರ, ಓಂಕಾರ ನೂರ, ಲಾಲಪ್ಪ ನಿರ್ಣಾ, ದಯಾನಂದ ರೇಕುಳಗಿ, ರಾಜು ಸಾಂಗ್ಲೆ, ಸೇರಿದಂತೆ ಇತರರು ಉಪಸ್ಥಿತರಿದ್ದರು.