ಮಾ. 9 ಮತ್ತು 10ರಂದು ಬೀದರ ಜಿಲ್ಲಾ 21ನೆಯ ಕನ್ನಡ ಸಾಹಿತ್ಯ ಸಮ್ಮೇಳನ
ಬೀದರ, ಮಾ.2 : ಭಾಲ್ಕಿಯ ಹಿರೇಮಠ ಸಂಸ್ಥಾನದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಸರ್ವಾಧ್ಯಕ್ಷತೆಯಲ್ಲಿ ನಡೆಯಬೇಕಾಗಿದ್ದ ಬೀದರ ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನವು ವಿವಿಧ ಕಾರಣಗಳಿಗಾಗಿ ಎರಡು ಸಲ ಮುಂದೂಡಲಾಗಿದ್ದು, ಇದೀಗ ಅಂತಿಮವಾಗಿ ಮಾರ್ಚ 9 ಮತ್ತು 10ನೇ ತಾರೀಖಿನಂದು ಸಮ್ಮೇಳನವನ್ನು ನಗರದ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ ಚನ್ನಶೆಟ್ಟಿಯವರು ತಿಳಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆಯವರೊಂದಿಗೆ ಸುದೀರ್ಘವಾಗಿ ಚರ್ಚಿಸಲಾಗಿದೆ. ಈ ಹಿಂದೆ ಫೆ.27 ಮತ್ತು 28ರಂದು ನಿಗದಿಯಾಗಿರುವಂತೆಯೇ ಆಹ್ವಾನ ಪತ್ರಿಕೆ ಸಹ ಮುದ್ರಣಗೊಂಡಿತ್ತು. ಒಂದಿಷ್ಟು ಜನರಿಗೆ ಆಹ್ವಾನ ಪತ್ರಿಕೆಯನ್ನೂ ಸಹ ತಲುಪಿಸಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಆಹ್ವಾನ ಪತ್ರಿಕೆ ಹರಿದಾಡಿತ್ತು. ಹೀಗಾಗಿ ಫೆ.27, 28ರಂದು ನಿಗದಿಪಡಿಸಲಾಗಿದ್ದಂತೆಯೇ ಸಮ್ಮೇಳನದ ಮೆರವಣಿಗೆ, ಉದ್ಘಾಟನೆ, ವಿವಿಧ ಗೋಷ್ಠಿಗಳು, ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ ಅವುಗಳಿಗೆ ನಿಗದಿಪಡಿಸಲಾಗಿರುವ ಸಮಯ ಎಲ್ಲವೂ ಯಥಾರೀತಿ ನಡೆಯಲಿವೆ, ಅತಿಥಿಗಳು ಸಹ ಈ ಹಿಂದೆ ನಿಗದಿಯಾದಂತೆಯೇ ಇರಲಿದ್ದಾರೆ. ಕೇವಲ ಸಮ್ಮೇಳನದ ದಿನಾಂಕ ಮಾತ್ರ ಫೆ.27 ಮತ್ತು 28ರ ಬದಲಾಗಿ ಮಾರ್ಚ 9 ಮತ್ತು 10 ಎಂದು ಓದಿಕೊಳ್ಳಬೇಕೆಂದು ವಿನಂತಿಸಿದ್ದಾರೆ.
ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಅವರ ಅಧ್ಯಕ್ಷತೆಯಲ್ಲಿ ಜರುಗಲಿರುವ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಅರಣ್ಯ, ಜೀವಿಶಾಸ್ತ್ರ, ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆಯವರು, ಕಾರ್ಯಾಧ್ಯಕ್ಷರಾಗಿ ಗುರುನಾಥ ಕೊಳ್ಳೂರು, ಕೋಶಾಧ್ಯಕ್ಷರಾಗಿ ಬಾಬು ವಾಲಿಯವರು ಕರ್ತವ್ಯ ನಿರ್ವಹಿಸಲಿದ್ದಾರೆ. ಉಳಿದಂತೆ ವಿವಿಧ ಉಪ ಸಮಿತಿಗಳನ್ನು ಸಹ ನೇಮಿಸಲಾಗಿದ್ದು, ಎಲ್ಲ ಸಮಿತಿಗಳು ತಮಗೆ ವಹಿಸಲಾದ ಸೇವೆಯನ್ನು ಮುಂದುವರಿಸಲಿದ್ದಾರೆಂದು ತಿಳಿಸಿದ್ದಾರೆ.